ತುಮಕೂರು: ಮನುಷ್ಯನು ಸೇವಾ ಮನೋಭಾವ ಬೆಳೆಸಿಕೊಂಡು ಇತರರಿಗೆ ಸಹಾಯ ಮಾಡುವ ಗುಣ ರೂಢಿಸಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು.
ನಗರದ ದೇವರಾಯಪಟ್ಟಣದ ಶ್ರೀ ಶಾರದಾಂಬ ವೃದ್ಧಾಶ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ||ಡಿ.ವೀರೇಂದ್ರ ಹೆಗ್ಗಡೆ ಅವರ 77ನೇ ಜನ್ಮವರ್ಧಂತಿ ಅಂಗವಾಗಿ ಆಹಾರ ಸಾಮಗ್ರಿ ವಿತರಿಸಿ ಮಾತನಾಡಿದರು.
ಲಕ್ಷಾಂತರ ದೀನದಲಿತರಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಆಸರೆಯಾಗಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಇಡೀ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು, ಸೇವಾ ಯೋಜನೆಗಳನ್ನು ಕೈಗೊಳ್ಳುವ ಮೂಲಕ ವೀರೇಂದ್ರ ಹೆಗಡೆಯವರು ಮಾದರಿಯಾಗಿದ್ದಾರೆ ಎಂದರು.
ಜನಜಾಗೃತಿ ಸಮಿತಿ ಸದಸ್ಯ ಕಾಮರಾಜು ಮಾತನಾಡಿ, ಆಧುನಿಕವಾಗಿ ಮನುಷ್ಯ ಸೇವಾ ಮನೋಭಾವವನ್ನು ಮರೆಯುತ್ತಿದ್ದಾನೆ. ಇದರಿಂದಾಗಿ ಸಮಾಜದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ. ಮನುಷ್ಯ ಮಾನವೀಯತೆಯನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಿಸಬೇಕು. ಸಮಾಜ ಸೇವೆಗೆ ಜೀವನವನ್ನು ಮುಡುಪಾಗಿಟ್ಟಿರುವ ವೀರೇಂದ್ರ ಹೆಗಡೆಯವರ ವ್ಯಕ್ತಿತ್ವ ಅನುಕರಣೀಯ ಎಂದರು.
ವೃದ್ಧಾಶ್ರಮದ ನಿವಾಸಿ ವೆಂಕಟ ಕೃಷ್ಣ ಮಾತನಾಡಿ, ಧರ್ಮಸ್ಥಳದಲ್ಲಿ ಇಂದಿಗೂ ಧರ್ಮ ಉಳಿದಿದೆ. ಧರ್ಮ ಕ್ಷೇತ್ರದಲ್ಲಿ ಅಧರ್ಮ ಮೇಳೈಸಲು ಸಾಧ್ಯವಿಲ್ಲ. ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಸೇವಾ ಮನೋಭಾವದಿಂದ ಸಮಾಜಕ್ಕೆ ಅನುಕೂಲವಾಗಿದೆ ಎಂದರು.
ವಿಶ್ವವಾಣಿ ಪತ್ರಿಕೆ ಜಿಲ್ಲಾ ವರದಿಗಾರ ರಂಗನಾಥ ಕೆ.ಹೊನ್ನಮರಡಿ ಮಾತನಾಡಿ, ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ದೂರದೃಷ್ಟಿಯ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಅನೇಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳು ಕಾರ್ಯರೂಪಕ್ಕೆ ಬಂದಿವೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿರುವವರು ಅಭಿವೃದ್ಧಿಯಾಗಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾ ನಿರ್ದೇಶಕ ಸಂದೇಶ್, ಜನಜಾಗೃತಿ ಸಮಿತಿ ಸದಸ್ಯೆ ವಿಜಯ ಭಾಸ್ಕರ್, ಪತ್ರಕರ್ತ ಚಂದ್ರಚೂಡ, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಕಚೇರಿ ಸಿಬ್ಬಂದಿಗಳು, ಶಾರದಾಂಬ ವೃದ್ಧಾಶ್ರಮದ ಸಿಬ್ಬಂದಿಗಳು, ನಿವಾಸಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
