ತುಮಕೂರು : ದಲಿತ ಮುಖ್ಯಮಂತ್ರಿ ಹೋರಾಟಕ್ಕೆ ಚಾಲನೆ ನೀಡಲು ದಲಿತ ಸಂಘಟನೆಗಳ ನಿರ್ಧಾರ
ತುಮಕೂರಿನಲ್ಲಿ ನಡೆದ ದಲಿತ ಸಂಘಟನೆಗಳ ಒಕ್ಕೂಟ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆ ಗರಿಗೆದರು; ದಲಿತ ನಾಯಕರು ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ ಹಾಗೂ ಇತರರು ಆಗ್ರಹಿಸಿದರು.
ತುಮಕೂರು : ಇದೀಗ ಕರ್ನಾಟಕದಲ್ಲಿ ‘ಮುಖ್ಯಮಂತ್ರಿ ಬದಲಾವಣೆ’ ಚರ್ಚೆಯು ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಮ್ಮೆ ಗರಿಗೆದರಿರುವ ಹಿನ್ನಲೆಯಲ್ಲಿ ಇಂದು ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು,ಈ ಕುರಿತು ದಲಿತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷರಾದ ಡಾ. ಎಂ ವೆಂಕಟಸ್ವಾಮಿ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡೂವರೆ ವರ್ಷಗಳ ಆಡಳಿತವು ಮುಗಿಯುವ ದಿನಾಂಕವು ಸನಿಹ ಆಗುತ್ತಿರುವಾಗ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಊಹೆಗಳ ಚರ್ಚೆಯು ರಾಜ್ಯದಲ್ಲಿ ವಿಚಿತ್ರ ರಾಜಕೀಯ ಗೊಂದಲಗಳನ್ನು ಸೃಷ್ಠಿಸುತ್ತಿದೆ. ಇದೇ ನವೆಂಬರ್ 21ರ ನಂತರದ ಎರಡೂವರೆ ವರ್ಷಗಳ ಮುಖ್ಯಮಂತ್ರಿ ಮತ್ತು 2028ರ ಚುಣಾವಣೆಯ ನಂತರದ ಮುಖ್ಯಮಂತ್ರಿ ಆಯ್ಕೆಯ ಊಹಾಪೋಹಗಳು ನಾಡಿನ ಜನತೆಯಲ್ಲಿ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿವೆ.
ಕಾಂಗ್ರೆಸ್ನ ರಾಜ್ಯ ಮುಖಂಡರ ಇಂತಹ ತರಾವರಿ ಹೇಳಿಕೆಗಳು ಹೈಕಮಾಂಡ್ ವರಿಷ್ಟರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪರವಿರೋಧಗಳ ಹೇಳಿಕೆಗಳು ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸುತ್ತಿವೆ. ಎಂ.ಎಲ್.ಸಿ. ಡಾ.ಯತೀಂದ್ರ ಅವರು ಬೆಳಗಾವಿಯಲ್ಲಿ ಆಡಿರುವ ಮಾತು ಗಂಭೀರವಾದ ರಾಜಕೀಯ ಬದಲಾವಣೆಯ ಮುನ್ಸೂಚನೆ ನೀಡಿದೆ. ಅದಕ್ಕೆ ಪ್ರತಿಯಾಗಿ ರಾಮನಗರ ಶಾಸಕರಾದ ಇಕ್ಬಾಲ್ ಹುಸೇನ್ ಅವರು ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸಚಿವರಾದ ಎಂ.ಬಿ.ಪಾಟಿಲ್ರು ತಾನು ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿ ರಾಜಕೀಯ ಸನ್ಯಾಸಿಯಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು ಒಂದೂವರೆ ಕೋಟಿ ಜನಸಂಖ್ಯೆಯ ದಲಿತ ಜನಾಂಗಗಳಲ್ಲಿ ರಾಜಕೀಯ ಚಿಂತನೆಗಳ ದೊಡ್ಡ ಅಲೆಗಳನ್ನೇ ಎಬ್ಬಿಸುತ್ತೇವೆ ಎಂದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡಿ ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಹೈಕಮಾಂಡ್ ಕೆ.ಹೆಚ್.ರಂಗನಾಥ್, ಬಿ.ರಾಚಯ್ಯ ಮತ್ತು ಇದೀಗ ಮಲ್ಲಿಕಾರ್ಜುನಖರ್ಗೆ ಮುಂತಾದ ಹಿರಿಯ ಕಾಂಗ್ರೆಸ್ ಮುಖಂಡರು ದಲಿತ ಜನಾಂಗದವರ ತಾಳ್ಮೆಯನ್ನು ಪರೀಕ್ಷಿಸುತ್ತಾ ಬಂದಿದೆ ಅಂದಿನ ಬಿ.ಬಸವಲಿಂಗಪ್ಪ, ಮಲ್ಲಿಕಾರ್ಜುನಸ್ವಾಮಿ, ಎನ್.ರಾಚಯ್ಯ, ಮುಖ್ಯಮಂತ್ರಿಗಳಾಗುವ ಸಂಧರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ದಲಿತ ನಾಯಕತ್ವವನ್ನು ಹಿಂದಕ್ಕೆ ಸರಿಸಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ಆಗಾಗ ಅಧಿಕಾರ ಕಳೆದುಕೊಳ್ಳುವುದಕ್ಕೆ ದಲಿತ ಜನಾಂಗಗಳು ಕಾಂಗ್ರೆಸ್ ಪಕ್ಷಕ್ಕೆ ಹಾಕಿದ ಹಿಡಿಶಾಪವೇ ಕಾರಣವಾಗಿದೆ. ಹೀಗಾಗಿ ದಲಿತ ಜನಾಂಗಗಳ ಋಣ ತೀರಿಸುವ ಕಾರ್ಯವು ಕಾಂಗ್ರೆಸ್ ಹೈಕಮಾಂಡ್ ಗೆ ಇದುವರೆಗೂ ಸಾಧ್ಯವೇ ಆಗಲಿಲ್ಲ. ಕಾಂಗ್ರೆಸ್ ಪಕ್ಷವು ಇಂದಿಗೂ ಸಹ ದಲಿತರ ಋಣದಲ್ಲಿರುವುದನ್ನು ಮರೆಯಬಾರದು.
ಕಾಂಗ್ರೆಸ್ ಇಂದಿನ ಮುತ್ಸದ್ದಿಗಳಾದ ಮಲಿಕಾರ್ಜುನ ಖರ್ಗೆ, ಕೆ.ಹೆಚ್ ಮುನಿಯಪ್ಪ ಡಾ.ಜಿ.ಪರಮೇಶ್ವರ್, ಡಾ. ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಇವರುಗಳು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳ ರೂಪದಲ್ಲಿ ಸಮರ್ಥ ಆಡಳಿತಗಾರರಾಗಿದ್ದಾರೆ ಮತ್ತು ಪಕ್ಷದ ಕಟ್ಟಾಳುಗಳಾಗಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಮುಂದಿನ ನವೆಂಬರ್ 21ರ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಇವರುಗಳಲ್ಲಿ ಯಾರಾದರೊಬ್ಬರನ್ನು ಮುಂದಿನ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಬೇಕಾಗಿ ಹೈಕಮಾಂಡ್ನ್ನು ಆಗ್ರಹಿಸುತ್ತೇವೆ. ಇಲ್ಲವಾದರೆ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ಕಷ್ಟದ ದಿನಗಳನ್ನು ಎದುರಿಸುವುದರಲ್ಲಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಎಚ್ಚರಿಕೆಯನ್ನು ಸಹ ನೀಡಿದರು. ದಲಿತರೊಬ್ಬರು ಮುಂದಿನ ಮುಖ್ಯಮಂತ್ರಿ ಆಗಲೇಬೇಕಾಗುತ್ತದೆ ಎಂದು ದಲಿತ ಸಂಘಟನೆಗಳ ಐಕ್ಯ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಕರೆ ನೀಡಿದರು.
ಮುನಿಆಂಜಿನಪ್ಪ, ಬಂಡೆಕುಮಾರ್, ಹೇರೂರುಧನರಾಜ್, ಸುರೇಶ್ ರಾಜ್ (ಉದ್ಯಮಿ), ಡಿ.ಎಫ್.ಜಗದೀಶ್, ಎಂ.ರಾಮಯ್ಯ, ಸುರೇಶ್ ಟಿ.ಸಿ ಸಂತೆಪೇಟೆ, ವೆಂಕಟೇಶ್ ಎನ್.ಪಿ ಫಾರೂಕ್ ಪಾಷಾ, ಹೆಗ್ಗೆರೆಕೃಷ್ಣಪ್ಪ, ಸಮತಾ ಸೈನಿಕ ದಳ ತಾಲೂಕು ಅಧ್ಯಕ್ಷ ಹಟ್ಟಿರಂಗಯ್ಯ ಇನ್ನು ಮುಂತಾದವರು ಉಪಸ್ಥಿತರಿದ್ದರು.