ತುಮಕೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳಲ್ಲಿ ಪುಸ್ತಕ ಓದುವುದನ್ನು ಕಡ್ಡಾಯ ಮಾಡಬೇಕು. ಓದುವ ಪಿರಿಯಡ್ ಅನ್ನು ರೂಪಿಸಿಬೇಕು. ಆ ಅವಧಿಯಲ್ಲಿ ಮಕ್ಕಳು ಗ್ರಂಥಾಲಯದಲ್ಲಿ ಪುಸ್ತಕ ಓದಿ, ನಂತರ ತಾವು ಓದಿದ್ದನ್ನು ಇತರೆ ಮಕ್ಕಳೊಂದಿಗೆ ಸಂವಾದ ಮಾಡುವ ಚಟುವಟಿಕೆಗಳನ್ನು ಶಾಲೆಗಳಲ್ಲಿ ಆರಂಭಿಸಬೇಕು ಎಂದು ಶಿಕ್ಞಣತಜ್ಞ, ವಾಗ್ಮಿ ಡಾ.ಗುರುರಾಜಕರ್ಜಗಿ ಸಲಹೆ ಮಾಡಿದರು.
ರಾಜ್ಯ ಗ್ರಂಥಾಲಯ ಸಂಘ, ತುಮಕೂರು ವಿಶ್ವವಿದ್ಯಾಲಯ, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ, ಬೆಂಗಳೂರಿನ ಎಲ್ಐಎಸ್ ಅಕಾಡೆಮಿ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದ ಎಸ್ಐಟಿಯ ಬಿರ್ಲಾ ಸಭಾಂಗಣದಲ್ಲಿ ಗುರುವಾರ ಆರಂಭವಾದ ‘ರೀಡರ್ಸ್ ಆರ್ ಲೀಡರ್ಸ್’ ಎಂಬ ಘೋಷವಾಕ್ಯದ ಅಂತಾರಾಷ್ಟ್ರೀಯ ಗ್ರಂಥಪಾಲಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಓದಿನಿಂದ ಕೇವಲ ಜ್ಞಾನ ಮಾತ್ರವಲ್ಲ, ಗ್ರಹಿಕೆ, ಆಲೋಚನಾಶಕ್ತಿ ವೃದ್ಧಿಯಾಗುತ್ತದೆ. ಜೀವನ ಪರಿವರ್ತನೆಗೂ ಓದು ಕಾರಣವಾಗುತ್ತದೆ. ಗಾಂಧೀಜಿ, ಅಂಬೇಡ್ಕರ್, ಅಬ್ದುಲ್ ಕಲಾಂ ಅಂತಹ ಅನೇಕರು ಪುಸ್ತಕಪ್ರೀತಿ ಬೆಳೆಸಿಕೊಂಡಿದ್ದರು. ಓದುವು ಜೀವನೋತ್ಕರ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಸಮಾರಂಭದ ಸಾನಿಧ್ಯವಹಿಸಿದ್ದ ಹಿರೇಮಠದ ಡಾ.ಶಿವಾನಂದಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಓದು ನಮ್ಮನ್ನು ವಿಕಸಿನಗೊಳಿಸುತ್ತದೆ. ಓದುವಿನಿಂದ ಗ್ರಹಿಕೆಯಿಂದ, ಸಂವಾದದಿಂದ ನಮ್ಮನ್ನು ನಾವು ಅರಳಿಸಿಕೊಳ್ಳಬಹುದು. ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸಬೇಕು, ಮನೆಗಳಲ್ಲಿ ಪುಸ್ತಕ ಓದುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ಮಾಡಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಜ್ಞಾನಕ್ಕಿಂಥಾ ದೊಡ್ಡದು ಜಗತ್ತಿನಲ್ಲಿ ಇನ್ನಾವುದೂ ಇಲ್ಲ. ಓದುವುದರಿಂದ ಜ್ಞಾನ ಸಂಪಾದಿಸಬಹುದು. ಪ್ರತಿ ಮನೆಯಲ್ಲೂ ಒಂದು ಗ್ರಂಥಾಲಯ ಇರಬೇಕು. ಓದುವ ಹವ್ಯಾಸ ಮಕ್ಕಳಿಗೆ ಮನೆಯಿಂದಲೇ ಆರಂಭವಾಗಬೇಕು. ಅಡುಗೆಮನೆ, ದೇವರಮನೆಯಂತೆ ಒಂದು ಪುಸ್ತಕಮನೆ ಎಲ್ಲರ ಮನೆಯಲ್ಲಿರಲಿ ಎಂದರು.
ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ವೆಂಕಟೇಶ್ವರಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ರಾಜ್ಯ ಗ್ರಂಥಪಾಲಕರ ಸಂಘದ ಅಂತರ್ಜಾಲಕ್ಕೆ ಈ ವೇಳೆ ಚಾಲನೆ ನೀಡಿದರು.
ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು,ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಬಿ.ಜಿ.ಕುಂಬಾರ, ಬೀದರ್ ವಿವಿ ಕುಲಪತಿ ಡಾ.ಬಿ.ಎಸ್.ಬಿರಾದಾರ, ಗ್ರಂಥಪಾಲಕರಾದ ಪ್ರೊ.ಎ.ವೈ.ಅಸುಂದಿ, ಪ್ರೊ.ಟಿ.ವಿ.ಕೆಂಪರಾಜು, ಪ್ರೊ.ಮುತ್ತಯ್ಯ ಕೊಗನೂರುಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಹೆಚ್.ಬಸವರಾಜೇಂದ್ರ ಎಲ್ಐಎಸ್ ಅಕಾಡೆಮಿ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರು, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷ ಡಾ.ಎಂ.ಕೃಷ್ಣಪ್ಪ, ಕಾರ್ಯಾಧ್ಯಕ್ಷ ಡಾ.ರಾಜೇಶ್ ಎನ್.ತುರಮರಿ, ರಾಜ್ಯ ಗ್ರಂಥಾಲಯ ಸಂಘದ ಕಾರ್ಯದರ್ಶಿ ಹೆಚ್.ಪಿ.ಶೇಖರ್ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
