ತುಮಕೂರು- ಯುವ ಉತ್ಸಾಹಿ ಪಶುವೈದ್ಯ ಡಾ.ಸುಮೀಕ್ಷಾ ರೆಡ್ಡಿ ಅವರು ಸಾವು, ಪಶುವೈದ್ಯರಿಗೆ ಒಂದು ಪಾಠವಾಗಿದ್ದು,ಸರಕಾರ ಮತ್ತು ಅರಣ್ಯ ಇಲಾಖೆ ಇನ್ನೂ ಮುಂದಾದರೂ ವನ್ಯಜೀವಿಗಳ ಚಿಕಿತ್ಸೆಗೆ ನಿಯೋಜನೆಯಾಗುವ ವೈದ್ಯರ ರಕ್ಷಣೆಗೆ ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಹೆಚ್.ಎಂ.ಶಿವಪ್ರಸಾದ್ ಒತ್ತಾಯಿಸಿದ್ದಾರೆ.
ನಗರದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ತರಬೇತಿ ಸಭಾಂಗಣದಲ್ಲಿ ಇತ್ತೀಚಗೆ ಶಿವಮೊಗ್ಗದ ತಾವರೆಕೊಪ್ಪದ ಲಯನ್ ಸಫಾರಿ ವನ್ಯಧಾಮದಲ್ಲಿ ಚಿಕಿತ್ಸೆ ನೀಡುವ ವೇಳೆ ನೀರಾನೆ(ಹಿಪ್ಪೋಪೊಟೋಮಸ್)ದಾಳಿಗೆ ತುತ್ತಾಗಿ ಜೀವನ್ಮರಣ ಹೋರಾಟ ನಡೆಸಿ, ಸಾವಿಗೀಡಾದ ತರಬೇತಿ ವೈದ್ಯೆ ಡಾ.ಸುಮೀಕ್ಷಾ ರೆಡ್ಡಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದ ಅವರು, ಸರಕಾರ ಹಾಗೂ ಅರಣ್ಯ ಇಲಾಖೆಯ ಮೇಲೆ ವನ್ಯ ಜೀವಿ ಚಿಕಿತ್ಸೆಗೆ ನಿಯೋಜನೆಗೊಳ್ಳುವ ಪಶುವೈದ್ಯರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಡ ತರುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪಶುವೈದ್ಯರು, ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುವ ಅಗತ್ಯವಿದೆ.ನಿಮ್ಮೊಂದಿಗೆ ನಾವು ಸಹ ಆಗಮಿಸಲಿದ್ದೇವೆ ಎಂದರು.
ರಾತ್ರಿಯ ವೇಳೆ ವನ್ಯ ಜೀವ ಚಿಕಿತ್ಸೆಗೆ ನಿಯಮದಲ್ಲಿ ಅವಕಾಶವೇ ಇಲ್ಲ. ಒಂದು ವೇಳೆ ತುರ್ತು ಅಗತ್ಯ ಕಂಡು ಬಂದರೆ ಹಿರಿಯ ಆರ್.ಎಫ್.ಓ ಮತ್ತು ನುರಿತ ಡಾಕ್ಟರ್ಗಳ ಸಮ್ಮುಖದಲ್ಲಿ ಎಲ್ಲಾ ಅಗತ್ಯ ಮುಜಾಂಗ್ರತಾ ಕ್ರಮಗಳನ್ನು ಕೈಗೊಂಡು ಚಿಕಿತ್ಸೆ ಮಾಡಬೇಕಾಗುತ್ತದೆ.ಆದರೆ ಟ್ರೈನಿ ಪಶು ವೈದ್ಯರನ್ನು ಅಂತಹ ಕ್ರೂರ ಮೃಗದ ಚಿಕಿತ್ಸೆಗೆ ಕಳುಹಿಸಿದವರು ಯಾರು,ಈ ವೇಳೆ ಎಸ್.ಓ.ಪಿ ಅನುಸರಿಸಿಲ್ಲವೇ ಎಂಬ ಇತ್ಯಾದಿ ಪ್ರಶ್ನೆಗಳು ಉದ್ಬವಿಸುತ್ತೇವೆ.ಈ ಬಗ್ಗೆ ಇರುವ ಗೊಂದಲ ಬಗೆಹರಿಸಿಕೊಳ್ಳಲು ಸಿಸಿಟಿವಿ ಪೂಟೇಜ್ ಸಹ ಲಭ್ಯವಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.ನ್ಯಾಯಯುತ ತನಿಖೆ ನಡೆಯುವುದೇ ಅನುಮಾನ ಎಂದು ಹಲವರು ಮಾತನಾಡುತಿದ್ದಾರೆ.ಸರಕಾರ ಇನ್ನೂ ಮುಂದಾದರೂ ಅಗತ್ಯ ಕ್ರಮ ಕೈಗೊಂಡು, ಪಶುವೈದ್ಯರ ಜೀವ ಉಳಿಸಲು ಮುಂದಾಗಲಿ.ನಮ್ಮಲ್ಲಿಯೂ ಕೆಲವೊಮ್ಮೆ ಕಾಡು ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಬಂದಾಗ,ಜಾತ್ರೆ, ಉತ್ಸವಗಳಲ್ಲಿ ಆನೆಗಳ ಬಳಕೆ ಮಾಡುವ ಸಂದರ್ಭದಲ್ಲಿ ಪಶುವೈದ್ಯರನ್ನು ಕಳುಹಿಸಿಕೊಡಲು ಬೇಡಿಕೆ ಬರುತ್ತದೆ.ಆದರೆ ನಮ್ಮಲ್ಲಿ ವನ್ಯಜೀವಿ ತರಬೇತಿ ಪಡೆದ ವೈದ್ಯರಿಲ್ಲದ ಕಾರಣ, ಮನವಿಯನ್ನು ತಿರಸ್ಕರಿಸಲಾಗುತ್ತದೆ ಎಂದು ಡಾ.ಹೆಚ್.ಎಂ.ಶಿವಪ್ರಸಾದ್ ನುಡಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರುದ್ರಪ್ರಸಾದ್, ಯುವ ಉತ್ಸಾಹಿ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಸಾವು ನಿಜಕ್ಕೂ ದುಖಃದ ವಿಚಾರ.ವನ್ಯಜೀವಿಗಳ ಸೇವೆಯನ್ನು ಫ್ಯಾಷನ್ ಎಂಬಂತೆ ತೆಗೆದುಕೊಂಡು ತರಬೇತಿಗಾಗಿ ಶಿವಮೊಗ್ಗ ಜಿಲ್ಲೆಯ ತಾವರೆಕೆರೆ ವನ್ಯಜೀವಿ ಧಾಮಕ್ಕೆ ಕಳೆದ ಒಂದುವರೆಗೆ ತಿಂಗಳ ಹಿಂದೆ ಬಂದಿದ್ದ ಇವರ ಸಾವು ಪಶು ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವವರಿಗೆ ನಿಜಕ್ಕೂ ಆಘಾತವನ್ನು ಉಂಟು ಮಾಡಿದೆ.ತಂದೆ, ತಾಯಿಗೆ ಒಬ್ಬಳೇ ಮಗಳಾಗಿ,ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ವನ್ಯಜೀವಿಗಳ ಸೇವೆಗೆ ತನ್ನ ಬದುಕನ್ನು ಮೀಸಲಿಡಬೇಕು ಎಂದುಕೊಂಡಿದ್ದ ಯುವ ಪ್ರತಿಭೆಯ ಸಾವು ಉತ್ತರ ಸಿಗದ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದರು.
ಪಶುವೈದ್ಯೆ ಡಾ.ಜಯಂತಿ ಮಾತನಾಡಿದರು,ಕಾರ್ಯಕ್ರಮವನ್ನು ಡಾ.ಶ್ರೀನಿವಾಸ್ ಕುಜ ನಿರೂಪಿಸಿದರು.ವೇದಿಕೆಯಲ್ಲಿ ಪಶುವೈದ್ಯಕೀಯ ತರಬೇತಿ ಶಾಲೆ ಪ್ರಾಂಶುಪಾಲರಾದ ಡಾ.ದಿವಾಕರ್, ಡಾ.ಮಂಜುನಾಥ್ ಹಾಗೂ ಪಶುವೈದ್ಯರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
