ತುಮಕೂರು: ಪ್ರತಿಯೊಬ್ಬರೂ ಜೀವನದಲ್ಲಿ ಸತ್ಯ ಅಹಿಂಸಾ ತತ್ವವನ್ನು ಅಳವಡಿಸಿಕೊಂಡು ಜೀವನ ನಡೆಸಿ-ಶಾಸಕ ಜಿ.ಬಿ.ಜ್ಯೋತಿಗಣೇಶ್
ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ಗಾಂಧೀಜಿಯವರ ಸತ್ಯ ಮತ್ತು ಅಹಿಂಸಾ ತತ್ವಗಳನ್ನು ನಡೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಶಾಂತಿ, ಸಹಬಾಳ್ವೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು.
ತುಮಕೂರು:ಗಾಂಧಿ ಟೋಪಿ,ಖಾದಿ ಬಟ್ಟೆ ಧರಿಸುವುದುಗಾಂಧಿ ಪಥದಲ್ಲಿ ನಡೆದಂತಲ್ಲ.ನಮ್ಮ ನಡೆ, ನುಡಿಯಲ್ಲಿ ನಾವುಗಳು ಗಾಂಧಿಯವರ ಸತ್ಯ, ಅಹಿಂಸಾ ತತ್ವವನ್ನು ಅಳವಡಿಸಿಕೊಂಡು, ಇತರರಿಗೆ ಮಾದರಿಯಾಗುವಂತೆ ಬದುಕಿದಾಗ ಮಾತ್ರ ದೇಶದಲ್ಲಿ ಶಾಂತಿ, ನೆಮ್ಮದಿ ಸಹಬಾಳ್ವೆ ಸಾಧ್ಯ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾಲಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ, ಬಿ.ಸಿ.ಟ್ರಸ್ಟ್(ರಿ), ತುಮಕೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ತುಮಕೂರು ವತಿಯಿಂದ ಆಯೋಜಿಸಿದ್ದ ಗಾಂಧಿ ಸ್ಮೃತಿ ಮತ್ತು ನವಜೀವನ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಗಾಂಧೀಜಿಯವರು ಹೇಗೆ ನನ್ನ ಜೀವನವೇ ನನ್ನ ಸಂದೇಶ ಎಂದರೋ, ಹಾಗೆಯೇ ಜನರು ಅವರು ತತ್ವಾದರ್ಶಗಳಲ್ಲಿ ಶೇ10ರಷ್ಟನ್ನು ಪಾಲಿಸಿದರೆ, ರಾಮರಾಜ್ಯದ ಕನಸು ನನಸಾಗಲಿದೆ ಎಂದರು.
ಎಸ್ಕೆಡಿಆರ್ಡಿಪಿ ಪರ್ಯಾಯ ಸರಕಾರವಾಗಿ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ. ತುಮಕೂರು ಜಿಲ್ಲೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳು, ಕೆರೆ ಹೂಳೆತ್ತುವುದು ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳು ಜರುಗಿವೆ.ಗಾಂಧೀಜಿಯವರ ಮಾರ್ಗದಲ್ಲಿ ನಡೆಯುತ್ತಿರುವ ಸರಕಾರೇತರ ಸಂಸ್ಥೆಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಂಚೂಣಿಯಲ್ಲಿದೆ. ಮಧ್ಯವರ್ಜನ ಶಿಬಿರಗಳ ಮೂಲಕ ಮದ್ಯಪಾನ ನಿಮೂರ್ಲನೆಗೆ ಹಗರಲಿರುಳು ಶ್ರಮಿಸುತ್ತಿದೆ.ಇದಕ್ಕೆ ಬೆನ್ನೆಲುಬಾಗಿ ನಿಂತಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿರುವ ಡಾ.ವೀರೇಂದ್ರ ಹೆಗ್ಗಡೆ ಅವರ ಸೇವೆ ಅನನ್ಯ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಡಾ.ಕೆ.ನಾಗಣ್ಣ ಮಾತನಾಡಿ,ಮಹಾತ್ಮಗಾಂಧಿ ಅವರ ಸತ್ಯ, ಅಹಿಂಸೆ ಎಂಬ ಪ್ರಬಲ ಆಸ್ತçಗಳಿಗೆ ಇಂದಿಗೂ ದೇಶ, ವಿದೇಶಗಳಲ್ಲಿ ಮನ್ನಣೆಯಿದೆ.ವಿಶ್ವಸಂಸ್ಥೆಗಾಂಧೀಜಿಯವರ ಹುಟ್ಟು ಹಬ್ಬದ ದಿನವಾದ ಅಕ್ಟೋಬರ್ 02ನ್ನು ವಿಶ್ವ ಅಹಿಂಸಾ ದಿನವನ್ನಾಗಿ ಆಚರಿಸುತ್ತಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೇಂದ್ರ ಸರಕಾರದ ಹಲವಾರು ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಆದೇರೀತಿರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಜನರಿಗೆ ಜಾಗೃತಿ ಮೂಡಿಸಿ, ಸರಕಾರ ನೀಡುವ ಗೃಹಲಕ್ಷ್ಮಿ,ಗೃಹಜ್ಯೋ ತಿ,ವಿದ್ಯಾನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಸಮರ್ಪಕ ಬಳಕೆಗೆ ಸರಕಾರದೊಂದಿಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ತಂಗನಹಳ್ಳಿ ಮಠದ ಶ್ರೀಬಸವಲಿಂಗಮಹಾಸ್ವಾಮೀಜಿ ಮಾತನಾಡಿ,ದೇಶದ ಬಗ್ಗೆ ಯುವಜನರಿಗೆ ಕಾಳಜಿ ಇಲ್ಲದಂತಾಗಿದೆ.ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಹಾದಿಯಲ್ಲಿ ನಡೆದರೇ ಮಾತ್ರದೇಶದಲ್ಲಿ ಶಾಂತಿ, ನಮ್ಮದಿ,ಸಹಬಾಳ್ವೆಯ ಜೀವನ ಸಾಧ್ಯ.ಸರಕಾರ ಒಂದೆಡೆ ಮದ್ಯ ಮಾರಾಟಕ್ಕೆ ಉತ್ತೇಜನ ನೀಡಿದರೆ,ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮದ್ಯವರ್ಜನೆಗೆ ಒತ್ತು ನೀಡುತ್ತಿದೆ. ಇದನ್ನು ಸರಕಾರಗಳು ಅರ್ಥ ಮಾಡಿಕೊಂಡು ಯೋಜನೆಗಳನ್ನು ರೂಪಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಕೆ.ಡಿ.ಆರ್.ಡಿಪಿಯ ತುಮಕೂರು ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕಳೆದ 43 ವರ್ಷಗಳಲ್ಲಿ ಸುಮಾರು 6.50 ಲಕ್ಷ ಸ್ವ ಸಹಾಯ ಸಂಘಗಳನ್ನು ರಚಿಸಿ, 55 ಲಕ್ಷ ಸದಸ್ಯರನ್ನು ಮಾಡಿ, ಮೂರುವರೆ ಕೋಟಿ ಜನರಿಗೆ ಸಹಾಯ ಮಾಡಿದೆ.ಇದುವರೆಗೆ ಸುಮಾರು 1.40 ಲಕ್ಷಕೋಟಿ ರೂಗಳ ಅರ್ಥಿಕ ಸಹಾಯವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಸ್ವಸಹಾಯ ಸಂಘದ ಸದಸ್ಯರಿಗೆ ಮಾಡಿದೆ.ಧರ್ಮಸ್ಥಳ ಸಂಘದ ಬಡ್ಡಿ ಹೆಚ್ಚು ಎನ್ನುವುದು ಶುದ್ದ ಸುಳ್ಳು, 100 ರೂಗಳಿಗೆ 60 ಪೈಸೆ ಮಾತ್ರ ಬಡ್ಡಿ ವಿಧಿಸಲಾಗುತ್ತಿದೆ.ಎಸ್.ಕೆ.ಡಿ.ಆರ್.ಡಿ.ಪಿ ಪರ್ಯಾಯ ಸರಕಾರವಲ್ಲ.ಜನರಿಗೆ ಸರಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ.ಇದುವರೆಗೂ 2 ಸಾವಿರ ಮಧ್ಯವರ್ಜನ ಶಿಬಿರಗಳ ಮೂಲಕ 1.40 ಲಕ್ಷ ಕುಟುಂಬಗಳಿಗೆ ಸುಖ ಜೀವನಕಲ್ಪಿಸಲಾಗಿದೆ.ತುಮಕೂರು ಜಿಲ್ಲೆಯಲ್ಲಿ ಇದುವರೆಗೂ 8 ಸಾವಿರಜನರು ನಮ್ಮ ಮದ್ಯವರ್ಜನ ಶಿಬಿರಗಳ ಲಾಭ ಪಡೆದು ಸಂಸಾರದಲ್ಲಿ ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಇಂತಹ ಸಂಸ್ಥೆಯ ಬಗ್ಗೆ ಅಪಪ್ರಚಾರ ಸಲ್ಲದು ಎಂದರು.