ತುಮಕೂರು: ಪಕ್ಷದ ಕಾರ್ಯಕರ್ತರು ಬಿಜೆಪಿಯ ಇತಿಹಾಸ ತಿಳಿಯಬೇಕು. ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ಪಕ್ಷದ ಧ್ಯೇಯೋದ್ಧೇಶಗಳನ್ನು ಜನರಿಗೆ ಪರಿಚಯಿಸಬೇಕು. ವಿವಿಧ ಆಯಾಮಗಳಲ್ಲಿ ಕೆಲಸ ಮಾಡುತ್ತಾ ಸಂಘಟನೆ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮವಹಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಕಾರ್ಯಕರ್ತರಿಗೆ ಸಲಹೆ ಮಾಡಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಸ್ಥಾಪನೆಗೆ ಕಾರಣಕರ್ತರಾದ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಸಕರು, ಲೋಕಸಭೆಯಲ್ಲಿ ಒಂದು ಸ್ಥಾನದಿಂದ ಆರಂಭಗೊಂಡು ಅಧಿಕಾರ ಹಿಡಿಯುವ ಮಟ್ಟಕ್ಕೆ ಬೆಳೆದಿರುವ ಬಿಜೆಪಿ ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರೀಯತೆ, ಸ್ವದೇಶಿ, ದೇಶದ ಅಭಿವೃದ್ಧಿ ಎಂಬ ಸಿದ್ಧಾಂತಗಳಲ್ಲಿ ಯಾವತ್ತೂ ಹೊಂದಾಣಿಕೆ ಮಾಡಿಕೊಳ್ಳದೆ ಇಂದಿಗೂ ತನ್ನ ತತ್ವಸಿದ್ಧಾಂತಗಳಿಗೆ ಬಿಜೆಪಿ ಬದ್ಧವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.
1951ರಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ನೆಹರೂ ಸಂಪುಟದಿಂದ ರಾಜಿನಾಮೆ ನೀಡಿದ ಮುಖರ್ಜಿಯವರು ರಾಷ್ಟ್ರೀಯ ಸ್ವಯಂಸೇವಕರ ಸಂಘದ ಬೆಂಬಲದೊಂದಿಗೆ ಭಾರತೀಯ ಜನಸಂಘ ಸ್ಥಾಪಿಸಿದರು, ಹಿಂದುತ್ವ, ರಾಷ್ಟ್ರೀ ಯತೆ ಮತ್ತು ಏಕೀಕೃತ ಭಾರತ ಸಿದ್ಧಾಂತವನ್ನು ಸಂಘ ಪ್ರತಿಪಾದಿಸಿತು. ಒಂದು ದೇಶ ಒಂದು ಸಂಸ್ಕೃತಿ ಎಂಬ ಸಿದ್ಧಾಂತದಡಿ ಭಾರತೀಯ ಜನಸಂಘ ಸ್ಥಾಪನೆಯಾಯಿತು. 1977ರಲ್ಲಿ ಜನತಾ ಪಕ್ಷದೊಂದಿಗೆ ವಿಲೀನಗೊಂಡು ನಂತರ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ನೇತೃತ್ವದಲ್ಲಿ ಜನಸಂಘದ ಸದಸ್ಯರು ಪ್ರತ್ಯೇಕಗೊಂಡು 1980, ಏಪ್ರಿಲ್ 6ರಂದು ಇದು ಭಾರತೀಯ ಜನತಾಪಕ್ಷವಾಗಿ ಸ್ಥಾಪನೆಗೊಂಡು, ಅಟೆಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಯ ಮೊದಲ ಅಧ್ಯಕ್ಷರಾದರು ಎಂದು ಜಿ.ಬಿ.ಜ್ಯೋತಿಗಣೇಶ್ ಅವರು ಬಿಜೆಪಿ ಸ್ಥಾಪನೆ ಹಿನ್ನೆಲೆ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿದರು,ಅಂಬಿಕಾ ಹುಲಿನಾಯ್ಕರ್, ವೈ.ಹೆಚ್. ಹುಚ್ಚಯ್ಯ, ಅಂಬಿಕಾ ಮಹೇಶ್, ನವಚೇತನ್, ಟಿ.ಹೆಚ್.ಹನುಮಂತರಾಜು, ಗಣೇಶ್ಪ್ರಸಾದ್, ಸತ್ಯಮಂಗಲಜಗದೀಶ್, ಬನಶಂಕರಿಬಾಬು, ಚೆಂಗಾವಿರವಿ, ರೇಖಾಶಿವಕುಮಾರ್, ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
