ಹಾಸನ: ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ಉಂಟಾದ ಜಟಾಪಟಿಯಿಂದಾಗಿ ಹಾಸನ ಹೊರವಲಯದ ಮಣಚನಹಳ್ಳಿ ಗೇಟ್ನಲ್ಲಿರುವ ಬ್ರಿಗೇಡ್ ಕಾಲೇಜಿಗೆ ಬೀಗ ಬಿದ್ದಿದೆ. ಇದರಿಂದ ಕಾಲೇಜಿನಲ್ಲಿ ಓದುತ್ತಿದ್ದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟಿದೆ.
ಬ್ರಿಗೇಡ್ ಕಾಲೇಜಿನಲ್ಲಿ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಕಾಲೇಜು ಕಟ್ಟಡದ ಬಾಡಿಗೆ ಪಾವತಿಸದಿರುವ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕರು ಕಾಲೇಜು ಆಡಳಿತ ಮಂಡಳಿಗೆ ನೋಟೀಸ್ ನೀಡಿದ್ದರು. ಅದೇ ಸಮಯದಲ್ಲಿ ಕಾಲೇಜಿನ ಕಾರ್ಯದರ್ಶಿ ಚಂದನ್ ಹಾಗೂ ಪ್ರಾಂಶುಪಾಲ ವಿಜಯ್ಶಂಕರ್ ಅವರು ಕಾಲೇಜಿನ ಷೇರುಗಳನ್ನು ಬೇರೊಂದು ಖಾಸಗಿ ಶಾಲೆಗೆ ಮಾರಾಟ ಮಾಡುವ ಕ್ರಮ ತೆಗೆದುಕೊಂಡಿದ್ದರು.
ಈ ಕ್ರಮಕ್ಕೆ ಮತ್ತೊಬ್ಬ ಷೇರುದಾರ ಹೇಮಂತ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಕಳೆದ ಮೂರು ತಿಂಗಳಿಂದ ಕಾಲೇಜು ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದ ಮೈಲ್ಸ್ಟೋನ್ ಅಕಾಡೆಮಿ ಇದೇ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿತು. ಕೋರ್ಟ್ ನೀಡಿದ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಮೈಲ್ಸ್ಟೋನ್ ಅಕಾಡೆಮಿ ಬ್ರಿಗೇಡ್ ಕಾಲೇಜಿನಿಂದ ಹಿಂದೆ ಸರಿಯಬೇಕಾಯಿತು.
ಇದನ್ನು ಓದಿ: ನವದೆಹಲಿ: 2080ರ ವೇಳೆಗೆ ಭಾರತದ ಜನಸಂಖ್ಯೆ ಸ್ಥಿರ: ಬಳಿಕ ಇಳಿಕೆಯ ಹಾದಿ!
ಈ ಗೊಂದಲದ ಪರಿಣಾಮವಾಗಿ ಕಳೆದ ವಾರದಿಂದ ಕಾಲೇಜಿನ ಉಪನ್ಯಾಸಕರು ತರಗತಿಗಳಿಗೆ ಹಾಜರಾಗದೇ ಇದ್ದರು. ಕಳೆದ ಎರಡು ದಿನಗಳಿಂದ ಪಾಠ–ಪ್ರವಚನ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಮತ್ತೆ ಮನೆಗೆ ವಾಪಾಸ್ ಆಗುವ ಪರಿಸ್ಥಿತಿ ಉಂಟಾಗಿದೆ.
ಕಾಲೇಜಿನ ಗೇಟ್ಗೆ ಬೀಗ ಹಾಕಿರುವ ಕಾರಣದಿಂದ ಪೋಷಕರು ದುಃಖಭರಿತರಾಗಿ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮನೆಯಲ್ಲಿಯೇ ಉಳಿದಿರುವ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಕುರಿತು ಕೇಳಲು ಕರೆ ಮಾಡಿದರೂ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯದರ್ಶಿ ಸ್ಪಷ್ಟನೆ ನೀಡದೆ ಮೌನವಹಿಸಿದ್ದಾರೆ. ವಿದ್ಯಾರ್ಥಿಗಳ ಹಿತಕಾಯ್ದು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ.
