ತುಮಕೂರು: ತುಮಕೂರು ವಿಶ್ವ ವಿದ್ಯಾನಿಲಯದ ನೂತನ ಕ್ಯಾಂಪಸ್ ಜ್ಞಾನ ಪ್ರವಾಹದ ಸಂಕೇತವಾಗಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಬಣ್ಣಿಸಿದ್ದಾರೆ. ತುಮಕೂರು ಜಿಲ್ಲೆಯ ಬಿದರಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವವಿದ್ಯಾಲಯದ ‘ಜ್ಞಾನಸಿರಿ ಕ್ಯಾಂಪಸ್ ಹಾಗೂ ವಿವಿಧ ಕಟ್ಟಡ’ಗಳನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
“ಜ್ಞಾನಸಿರಿ” ಎಂಬ ಹೆಸರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜವನ್ನು ಬೆಳಗಿಸುವ, ನಿರಂತರವಾಗಿ ಹರಿಯುವ ಜ್ಞಾನದ ಪ್ರವಾಹವನ್ನು ಸಂಕೇತಿಸುತ್ತದೆ. ಹೊಸ ಶೈಕ್ಷಣಿಕ ಕಟ್ಟಡ ಮತ್ತು ಕಲಾ ಕಟ್ಟಡವು ವಿಶ್ವವಿದ್ಯಾನಿಲಯದ ಅಭಿವೃದ್ಧಿಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಈ ಕಟ್ಟಡಗಳು ಕಲಿಕಾ ಸೌಲಭ್ಯಗಳನ್ನು ಹೆಚ್ಚಿಸುತ್ತವೆ ಮತ್ತು ಸಂಶೋಧನೆ, ನಾವೀನ್ಯತೆ ಮತ್ತು ಸೃಜನಶೀಲತೆಗೆ ಹೊಸ ದೃಷ್ಟಿಕೋನಗಳನ್ನು ತೆರೆಯುತ್ತವೆ ಎಂದರು.
ಈ ನೂತನ ಕಟ್ಟಡಗಳು ಬೋಧನೆ, ತರಬೇತಿ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಮತ್ತಷ್ಟು ಬಲಪಡಿಸುವ ಆಧುನಿಕ ಸೌಲಭ್ಯಗಳನ್ನು ಹೊಂದಿವೆ. ಇದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅತ್ಯುತ್ತಮ ಕಲಿಕಾ ವಾತಾವರಣವನ್ನು ಒದಗಿಸುತ್ತದೆ. ಈ ಕಟ್ಟಡಗಳು ಹೊಸ ಶಕ್ತಿ, ಹೊಸ ನಿರ್ದೇಶನ ಮತ್ತು ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಲಿದೆ. ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಸ್ಥಾಪನೆ ಶ್ಲಾಘನೀಯವಾಗಿದೆ. ಈ ಕೇಂದ್ರವು ರಾಷ್ಟ್ರೀಯ ಸೇವೆಗೆ ಬದ್ಧರಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡುತ್ತದೆ. ಇಲ್ಲಿಂದ ಪದವಿ ಪಡೆಯುವ ವಿದ್ಯಾರ್ಥಿಗಳು ದೇಶದ ಆಡಳಿತ, ಶಿಕ್ಷಣ, ವಿಜ್ಞಾನ ಮತ್ತು ಸಮಾಜದ ಪ್ರತಿಯೊಂದು ಕ್ಷೇತ್ರಕ್ಕೂ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮ ದೇಶವು ಸಾವಿರಾರು ವರ್ಷಗಳಿಂದ ಜ್ಞಾನದ ದೀಪವನ್ನು ಬೆಳಗಿಸುತ್ತಿದೆ. ವೇದ, ಉಪನಿಷತ್ತು, ಆಯುರ್ವೇದ, ಯೋಗ, ವಾಸ್ತು, ತತ್ವಶಾಸ್ತç, ನ್ಯಾಯಶಾಸ್ತ್ರ ಇವು ನಮ್ಮ ಅಮೂಲ್ಯ ಪರಂಪರೆ. ಹೊಸ ಶಿಕ್ಷಣ ನೀತಿಯು ಈ ಜ್ಞಾನ ಧಾರೆಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತೆ ಪರಿಚಯಿಸಿದೆ. ಇಂದಿನ ಯುವಪೀಳಿಗೆ ಈ ಜ್ಞಾನ ಧಾರೆಗಳನ್ನು ಆಧುನಿಕ ಸಂದರ್ಭದಲ್ಲಿ ಅರ್ಥಮಾಡಿಕೊಂಡು, ಸಂಶೋಧನೆ ನಡೆಸಬೇಕು ಮತ್ತು ಜಾಗತಿಕ ವೇದಿಕೆಯಲ್ಲಿ ಅವುಗಳನ್ನು ಪ್ರಸ್ತುತಪಡಿಸಬೇಕು” ಎಂದು ಸಲಹೆ ನೀಡಿದರು.

ಶಿಕ್ಷಣದಿಂದ ಮಾತ್ರ ದೇಶ ಬಲಿಷ್ಠ: ಡಾ: ಜಿ.ಪರಮೇಶ್ವರ
ದೇಶ ಬಲಿಷ್ಠವಾಗಲು ಶಿಕ್ಷಣವೊಂದೇ ಶಕ್ತಿ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಅಭಿಪ್ರಾಯಿಸಿದ್ದಾರೆ.
ಬಿದರಕಟ್ಟೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರತಿವರ್ಷ 12ಲಕ್ಷ ಎಂಜಿನಿಯರ್ ಹಾಗೂ ವೈದ್ಯ ಪದವೀಧರರು ಬರುತ್ತಿದ್ದಾರೆ. ಇದರಿಂದ ಜಗತ್ತಿನಾದ್ಯಂತ ಪ್ರತಿಭೆಗಳ ಮಹಾಪೂರವೇ ಹರಿಯುತ್ತಿದೆ. ಅಂದಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ ನೆಹರೂ ಅವರು ಶಿಕ್ಷಣಕ್ಕೆ ಒತ್ತು ನೀಡಿದ ಪರಿಣಾಮ ಎಂದ ಅವರು, ಪ್ರಾಚೀನ ಭಾರತದಿಂದಲೂ ತಕ್ಷಶಿಲಾ, ನಳಂದ ವಿಶ್ವವಿದ್ಯಾಲಯಗಳಿಂದಲೂ ದೇಶದಲ್ಲಿ ಶಿಕ್ಷಣ ಕ್ರಾಂತಿ ನಡೆದಿದೆ ಎಂದರು.
ಇಂದಿನ ಯುವ ಸಮುದಾಯ ಆಧುನಿಕ ಜಗತ್ತಿಗೆ ಒಗ್ಗಿಕೊಳ್ಳಬೇಕಿದೆ ಎಂದ ಅವರು, ಎಐ ಮತ್ತು ರೋಬೋಟಿಕ್ ತಂತ್ರಜ್ಞಾನದಂತಹ ಹೊಸ ಅನ್ವೇಷಣೆಗಳತ್ತ ಗಮನ ಹರಿಸಬೇಕು. ಬದಲಾವಣೆಗೆ ಒಗ್ಗಿಕೊಳ್ಳಬೇಕು ಎಂದರು.
ತುಮಕೂರು ಜಿಲ್ಲೆ ಈಗಾಗಲೇ ಶಿಕ್ಷಣ ಕಾಶಿ ಎಂಬುದನ್ನು ಸಾಬೀತು ಮಾಡಿದೆ. ಮೂರು ವೈದ್ಯಕೀಯ ಕಾಲೇಜುಗಳು, ಎಂಜಿನಿಯರಿಂಗ್ ಕಾಲೇಜುಗಳು, ಪ್ರತಿ ತಾಲೂಕಿನಲ್ಲೂ ಪದವಿ ಕಾಲೇಜುಗಳು ಇದ್ದು, ಗ್ರಾಮೀಣ ಪ್ರದೇಶದ ಬಡವರಿಗೆ, ಪರಿಶಿಷ್ಟ ಹಾಗೂ ಹಿಂದುಳಿದ ಬಡ ವಿದ್ಯಾರ್ಥಿಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಅನುಕೂಲವಾಗುತ್ತಿದೆ ಎಂದರು.
ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ಗೆ ಹೆದ್ದಾರಿ ಸಂಪರ್ಕ ರಸ್ತೆ, ಬೋಧಕ ಸಿಬ್ಬಂದಿ ಸೇರಿದಂತೆ ಹಣಕಾಸಿನ ನೆರವು ಅಗತ್ಯವಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ಅಗತ್ಯ ನೆರವು ನೀಡಲಿದೆ ಎಂದರು.
ವಿಶ್ವವಿದ್ಯಾಲಯಗಳಿಗೆ ಪೂರಕ ಸೌಲಭ್ಯ:
ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ: ಎಂ.ಸಿ.ಸುಧಾಕರ್ ಮಾತನಾಡಿ, ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಬೇಡಿಕೆಗಳು ಬರುತ್ತಿವೆ. ಆದರೆ ಭೌತಿಕ ಕಟ್ಟಡಗಳನ್ನು ಕಟ್ಟಿಸಿದಾಕ್ಷಣ ಜ್ಞಾನಕೇಂದ್ರ ಆಗುವುದಿಲ್ಲ. ಅದಕ್ಕೆ ಪೂರಕ ಮೂಭೂತ ಸೌಲಭ್ಯ, ಬೋಧಕ ಸಿಬ್ಬಂದಿ ಸೇರಿದಂತೆ ಪೂರಕ ವಾತಾವರಣ ನಿರ್ಮಿಸಬೇಕು ಎಂದರು.
ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ 500 ಕೋಟಿ ರೂ.ಗಳ ವಿಸ್ತೃತ ಯೋಜನೆಯಿದ್ದು, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಪೂರೈಸಲಾಗುವುದು ಎಂದರು.
ರಾಜ್ಯದ ಬಡ ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗ ಕನಸಿನ ಮಾತಾಗಿತ್ತು. ಆದರೆ ರಾಜ್ಯ ಸರ್ಕಾರ ಬ್ರಿಟನ್ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದೇಶಿ ಶಿಕ್ಷಣ ಕೊಡಿಸಲು ಮುಂದಾಗಿದೆ. ಕಳೆದ ನವೆಂಬರ್ನಲ್ಲಿ ರಾಜ್ಯದ 6 ವಿಶ್ವವಿದ್ಯಾಲಯದ ತಲಾ ಐದು ವಿದ್ಯಾರ್ಥಿಗಳನ್ನು ಆಯ್ದು ಲಂಡನ್ ಪ್ರವಾಸಕ್ಕೆ ಕಳಿಸಲಾಗಿತ್ತು. ಮರಳಿ ಬಂದ ವಿದ್ಯಾರ್ಥಿಗಳಲ್ಲಿ ಹೊಸ ಬದಲಾವಣೆ ಬಂದಿದೆ ಎಂದ ಅವರು, ರಾಜ್ಯದ 8 ಸರ್ಕಾರಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣ ಕೊಡಿಸುವ ಸಂಬAಧ ಗ್ಲೋಬಲ್ ವೇಲ್ಸ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅಲ್ಲದೆ ಈಗಾಗಲೆ ಅಜೀಂ ಪ್ರೇಮ್ಜಿ ಫೌಂಡೇಶನ್ನಿAದ ರಾಜ್ಯದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೆ 37,000 ವಿದ್ಯಾರ್ಥಿನಿಯರು ನೋಂದಾಯಿಸಿಕೊಂಡಿದ್ದಾರೆ. ಜನವರಿಯಿಂದ ಮತ್ತೆ ನೋಂದಾಯಿಸಿಕೊಳ್ಳಲಾಗುವುದು. ಬಡ ವಿದ್ಯಾರ್ಥಿನಿಯರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಶಾಸಕ ಟಿ.ಬಿ. ಜಯಚಂದ್ರ, ಶಾಸಕರಾದ ಬಿ. ಸುರೇಶ್ ಗೌಡ, ಜಿ.ಬಿ. ಜ್ಯೋತಿಗಣೇಶ್, ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು, ಕುಲಸಚಿವೆ ನಹೀದಾ ಜಮ್ ಜಮ್, ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
