ತುಮಕೂರು : ಇತಿಹಾಸ ಪ್ರಸಿದ್ದ ಹರಳೂರು ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವಯುತವಾಗಿ ನಡೆಯಿತು.ಚೋಳರ ಕಾಲದದೇವಾಲಯ ಇದಾಗಿದ್ದು. ಐದು ನೂರು ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷಯುಗಾದಿ ಹಬ್ಬದ ನಂತರದ 15 ದಿನಗಳಿಗೆ ಆರಂಭವಾಗುವ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ, ಸುಮಾರು ಒಂದು ವಾರಗಳ ನಡೆಯುವುದು ವಾಡಿಕೆ. ರಥೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆಯಿಂದಲೇ ರಥ ಹೋಮ, ರಥ ಪ್ರತಿಷ್ಠಾಪನೆ ನಡೆದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಹರಳೂರು ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಮಹಾ ರಥೋತ್ಸವ ನಡೆಯಿತು.
ಸರ್ವಾಲಂಕೃತನಾದ ಶ್ರೀ ವೀರಭದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸಿ ಭಕ್ತಾರ ಹರ್ಷೋದ್ಘಾರದ ನಡುವೆ ರಥವನ್ನು ಎಳೆಯಲಾಯಿತು. ರಥೋತ್ಸವದ ನಂತರ ಶ್ರೀ ವೀರಭದ್ರ ಸ್ವಾಮಿಗೆ ಧೂಳೋತ್ಸವ, ಪುಷ್ಪಾಲಂಕಾರ, ಪಾನಕ ಸೇವೆ ನಡೆಯಿತು. ರಾತ್ರಿ 8.30ಕ್ಕೆ ಸಿಂಹ ವಾಹನೋತ್ಸವ, ನವಿಲು ವಾಹನ, ಬೆಳ್ಳಿ ಪಲ್ಲಕ್ಕಿ ಉತ್ಸವ, ನಂದಿ ವಾಹನ ಸೇವೆಗಳು ನೆರವೇರಿಸುವ ಮೂಲಕ ರಥೋತ್ಸವದ ಕಾರ್ಯಕ್ರಮಗಳು ಮುಕ್ತಾಯಗೊಂಡವು.
ರಥೋತ್ಸವದಲ್ಲಿ ಶ್ರೀ ವೀರಭದ್ರಸ್ವಾಮಿ ಸೇವಾ ಸಮಿತಿ, ಶ್ರೀ ವೀರಭದ್ರೇಶ್ವರ ದಾಸೋಹ ಟ್ರಸ್ಟ್ ಹಾಗೂ ಸಮುದಾಯ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಪದಾಧಿಕಾರಿಗಳು, ನಿರ್ದೇಶಕರುಗಳು, ಹರಳೂರು ಶಿವಕುಮಾರ್ ಇಡ್ಲಿ ಹೋಟೆಲ್ ಮಾಲೀಕರಾದ ಮನು,ಶ್ರೀಮತಿ ಕಲಮ್ಮ, ಹಂಸ, ಶ್ರೀಮತಿ ಪೂಜ,ವಿರೂಪಾಕ್ಷ,ಪಾಪಣ್ಣ,ಎಸ್.ದೇವಿಕ ಸೇರಿದಂತೆ ಅಸಂಖ್ಯಾತ ಭಕ್ತಾಧಿಗಳು ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
