ತುಮಕೂರು- ಐತಿಹಾಸಿಕ ಪ್ರಸಿದ್ಧ ಸಿದ್ದಗಂಗೆಯಲ್ಲಿ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಶ್ರೀಕ್ಷೇತ್ರ ಸಿದ್ಧಗಂಗೆಯ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವಕ್ಕೆ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು ಸೋಮವಾರ ಮಧ್ಯಾಹ್ನ 12ಕ್ಕೆ ಸರಿಯಾಗಿ ಶುಭ ಅಭಿಜಿನ್ ಲಗ್ನದಲ್ಲಿ ರಥದ ಗಾಲಿಗೆ ತೆಂಗಿನಕಾಯಿ ಒಡೆದು ಹಾಗೂ ಶ್ರೀಸ್ವಾಮಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.
ರಥೋತ್ಸವದಲ್ಲಿ ಶ್ರೀಕ್ಷೇತ್ರದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್,ಸಿದ್ದಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಪರಮೇಶ್ ವಿವಿಧ ಮಠಾಧೀಶರುಗಳು.ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು, ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ರಥವನ್ನು ಮುಂದಕ್ಕೆ ಎಳೆದು ಭಕ್ತಿ ಸಮರ್ಪಿಸಿದರು.

ಇದಕ್ಕೂ ಮುನ್ನ ರಥಕ್ಕೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಃ, ಕಳಸಗಳ ಆರಾಧನೆ, ರಥಾಂಗ ಪೂಜೆ ಸೇರಿದಂತೆ ವಿವಿಧ ಪೂಜೆ ಸಲ್ಲಿಸಿ ಶ್ರೀಕ್ಷೇತ್ರದ ಆರಾಧ್ಯ ದೈವ ಸಿದ್ದಲಿಂಗೇಶ್ವರಸ್ವಾಮಿಯನ್ನು ರಥಕ್ಕೆ ಕೂರಿಸಿ ರಾಜೋಪಚಾರ ಮತ್ತು ಅಷ್ಟೋತ್ತರ ಪೂಜೆ ನೆರವೇರಿಸಲಾಯಿತು. ರಥದ ಮುಂಭಾಗದಲ್ಲಿ ಜಯಾದಿ ಹೋಮ, ಗಣ ಹೋಮ, ಮೃತ್ಯುಂಜಯ ಹೋಮ ಸಹ ಮಾಡಲಾಯಿತು.
ರಥವನ್ನು ಅಭೂತಪೂರ್ಣ ವಸ್ತ್ರ ಗಳಿಂದ ಸುವರ್ಣ ಕಲಶಗಳಿಂದ ಧಾರ್ಮಿಕ ಲಾಂಛನಗಳಾದ ಮಕರ, ತೋರಣ, ಕಲಶ, ಕನ್ನಡಿ ವಿವಿಧ ಬಗೆಯ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು.
ರಥ ಸಾಗಿದ ದಾರಿಯುದ್ದಕ್ಕೂ ನಂದಿಧ್ವಜ, ಕರಡಿ ಮಜಲು, ನಾಗಸ್ವರ, ವೀರಗಾಸೆ, ಪಟಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೆರೆದಿದ್ದ ಭಕ್ತ ಸಮೂಹವನ್ನು ಆಕರ್ಷಿಸಿದವು.

ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೆ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಮಾಡಿಕೊಂಡಿದ್ದ ಹರಕೆ ತೀರಿಸಲು ರಥಕ್ಕೆ ಬಾಳೆಹಣ್ಣು, ಹೂವು, ದವನ ಎಸೆದು ಭಕ್ತಿ ಸಮರ್ಪಿಸಿದರು.
ಶಿವರಾತ್ರಿ ಪ್ರಯುಕ್ತ ಜಾಗರಣೆಗಾಗಿ ನಾಡಿನಾದ್ಯಂತ ಸಹಸ್ರಾರು ಭಕ್ತಾದಿಗಳು ರಾತ್ರಿಯೇ ಶ್ರೀಮಠಕ್ಕೆ ಆಗಮಿಸಿದ್ದು ಇಂದು ನಡೆದ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು.
ರಥೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಧರ್ಮಸ್ಥಳ ಪಾದಯಾತ್ರಿಗಳ ಸಂಘ,ಶಾಸಕ ಜ್ಯೋತಿಗಣೇಶ್ ಅಭಿಮಾನಿಗಳ ಸಂಘದಿಂದ ಪಾನಕ, ಮಜ್ಜಿಗೆ, ಹೆಸರು ಬೇಳೆಯನ್ನು ವಿತರಿಸಲಾಯಿತು.
– ಕೆ.ಬಿ.ಚಂದ್ರಚೂಡ
