ತುಮಕೂರು: ಭಾರತದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆಯಾದರೆ ಜಗತ್ತಿನಲ್ಲಿಯೇ ಆರ್ಥಿಕ ವ್ಯವಸ್ಥೆಯಲ್ಲಿ ಮೊದಲನೇ ದೇಶವಾಗುವುದರಲ್ಲಿ ಸಂಶಯವಿಲ್ಲ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಅಭಿಪ್ರಾಯಪಟ್ಟರು.
ಶುಕ್ರವಾರ ಮಧುಗಿರಿ ಕನ್ನಡ ಭವನದಲ್ಲಿ ಪಾವಗಡ, ಸಿರಾ, ಮತ್ತು ಮಧುಗಿರಿ ತಾಲೂಕುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳು ನಿಷ್ಠೆಯಿಂದ ತಮ್ಮ ಕರ್ತವ್ಯದಲ್ಲಿ ತೊಡಗಿದರೆ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ. ರಾಷ್ಟçಕವಿ ಕುವೆಂಪು ಅವರು ಹೇಳಿದಂತೆ ‘ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು’ ಎಂಬ ತತ್ವದಂತೆ ಬದುಕಬೇಕು. ಸಂವಿಧಾನದ ಅನುಚ್ಛೇದ 14ರ ಅಡಿಯಲ್ಲಿ ಎಲ್ಲರೂ ಸಮಾನವಾಗಿ ಬಾಳಬೇಕು ಹಾಗೂ ಅನುಚ್ಛೇದ 21ರ ಅಡಿಯಲ್ಲಿ ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲವೂ ಗೌರವದಿಂದ ಬದುಕಲು ಅವಕಾಶವಿದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥದಿಂದಾಗಿ ಕೆರೆ ಮತ್ತು ಅರಣ್ಯ ಪ್ರದೇಶಗಳು ಒತ್ತುವರಿಯಾಗುತ್ತಿವೆ. ಮನುಷ್ಯ ತನ್ನ ದುರುದ್ದೇಶಗಳಿಗಾಗಿ ಅನ್ಯಾಯದ ಹಾದಿಯಲ್ಲಿ ಸಾಗುತ್ತಿದ್ದಾನೆ. ಇದನ್ನು ಹೋಗಲಾಡಿಸಲು ಹಲವಾರು ಕಾನೂನುಗಳಿದ್ದರೂ ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ವೀರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ಓದು: ತುಮಕೂರು: ಮಧುಗಿರಿಯ ವಿವಿಧ ಕಡೆ ಉಪಲೋಕಾಯುಕ್ತರಾದ ಜಸ್ಟೀಸ್ ಬಿ.ವೀರಪ್ಪನವರು ದಿಢೀರ್ ಭೇಟಿ
ಮನುಷ್ಯ ತನ್ನ ಹಕ್ಕುಗಳನ್ನು ಯಾವಾಗ ನೈಜವಾಗಿ ಚಲಾಯಿಸುತ್ತಾನೋ ಅಂದು ಸಮಾಜದಲ್ಲಿ ಮಹತ್ತರ ಬದಲಾವಣೆಯಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಲೋಕಾಯುಕ್ತದಲ್ಲಿ ಸದ್ಯ 25ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಈ ಪೈಕಿ 7 ರಿಂದ 8 ಸಾವಿರದವರೆಗೂ ಸುಳ್ಳು ಅಥವಾ ಆಧಾರರಹಿತ ಪ್ರಕರಣಗಳಿದ್ದು, ಸಮಸ್ಯೆಯನ್ನು ನಿವಾರಿಸಲು ಲೋಕಾಯುಕ್ತವು ಪ್ರತಿ ಜಿಲ್ಲೆಗೂ ಭೇಟಿ ನೀಡಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು.
ಸ್ವಾತಂತ್ರöತ್ರ್ಯ ಪೂರ್ವದಲ್ಲಿ ದೇಶಭಕ್ತರ ಸಂಖ್ಯೆ ಹೆಚ್ಚಾಗಿತ್ತು, ಆದರೆ ಇಂದಿನ ದಿನಗಳಲ್ಲಿ ದೇಶಭಕ್ತರ ಸಂಖ್ಯೆ ತುಂಬ ವಿರಳವಾಗುತ್ತಿದೆ. ಸ್ವಾತಂತ್ರ್ಯ ಪಡೆದು 79 ವರ್ಷಗಳಾದರೂ ನಾವು ಇಂದಿಗೂ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಇದೆ. ಅನ್ಯಾಯ ಕಂಡಲ್ಲಿ ಪ್ರತಿಯೊಬ್ಬರೂ ಕೂಡ ಧ್ವನಿ ಎತ್ತಬೇಕು, ಆಗ ಮಾತ್ರ ಸಮ ಸಮಾಜ ನಿರ್ಮಾಣಕ್ಕೆ ಸಾಧ್ಯ ಎಂದು ಹೇಳಿದರು.
ಚಿಕ್ಕನಾಯಕನಹಳ್ಳಿ ಒತ್ತುವರಿ ತೆರವು ಯಶಸ್ಸು
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 300 ಎಕರೆ ಅರಣ್ಯ ಪ್ರದೇಶವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿದ್ದರು. ಅದನ್ನು ಪರಿಶೀಲಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸಿ, ಅಲ್ಲಿ 83 ಸಾವಿರ ಸಸಿಗಳನ್ನು ನೆಡಲಾಗಿದ್ದು, ಪರಿಸರ ಸಂರಕ್ಷಣೆ ಮಾಡಲಾಗುತ್ತದೆ ಎಂದರಲ್ಲದೇ, ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು. ಇದರ ಜೊತೆಗೆ ಒಳ್ಳೆಯ ಸಂಸ್ಕಾರವನ್ನೂ ಬೆಳೆಸಬೇಕು. ಸಮಾಜದಲ್ಲಿ ಸಾರ್ವಜನಿಕರು ಬದಲಾದರೆ ಮಾತ್ರ ದೇಶದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ಅರವಿಂದ ಎನ್.ವಿ., ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀನಾರಾಯಣ, ಅಪರ ಜಿಲ್ಲಾಧಿಕಾರಿ ಡಾ: ಎನ್.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸಿಲ್ದಾರ್ ಶ್ರೀನಿವಾಸ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
