ತುಮಕೂರು: ಓದುಗರೇ ನಾಯಕರು ಎಂಬ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಓದುವ ಸಂಸ್ಕೃತಿಯನ್ನು ಬಲಪಡಿಸುವ ಆಶಯದೊಂದಿಗೆ ನಗರದ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಬಿರ್ಲಾ ಸಭಾಂಗಣದಲ್ಲಿ ಈ ತಿಂಗಳ 26ರಿಂದ ಮೂರು ದಿನಗಳ ಕಾಲ ಅಂತರರಾಷ್ಟ್ರೀಯ ಗ್ರಂಥಾಲಯ ಸಮ್ಮೇಳನ ಏರ್ಪಾಟಾಗಿದೆ.
ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಸ್.ಎಲ್. ಕಾಡದೇವರಮಠ ಅವರು ಬುಧವಾರ ಎಸ್ಐಟಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿ, ರಾಜ್ಯ ಗ್ರಂಥಾಲಯ ಸಂಘ, ತುಮಕೂರು ವಿಶ್ವವಿದ್ಯಾಲಯ, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ, ಬೆಂಗಳೂರಿನ ಎಲ್ಐಎಸ್ ಅಕಾಡೆಮಿ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ‘ರೀಡರ್ಸ್ ಆರ್ ಲೀಡರ್ಸ್’ ಎನ್ನುವ ವಿಷಯದ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿ, ಸಾರ್ವಜನಿಕರಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಗ್ರಂಥಾಲಯಗಳ ಪಾತ್ರ ತಿಳಿಸುವುದರ ಜೊತೆಗೆ ನಾಯಕತ್ವ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಗ್ರಂಥಾಲಯಗಳು ಹೇಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ಚರ್ಚೆ ನಡೆಸುವ ಸಂಬಂಧ ವೇದಿಕೆ ಒದಗಿಸುವ ಉದ್ದೇಶ ಇದಾಗಿದೆ. ಇದೇ 26ರಿಂದ 28ರವರೆಗೆ ನಡೆಯುವ ಮೂರು ದಿನಗಳ ಈ ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ ಅತಿಥಿಗಳು, ಶಿಕ್ಷಣ ತಜ್ಞರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಹೇಳಿದರು.
26ರಂದು ಬೆಳಿಗ್ಗೆ 10.30ಕ್ಕೆ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಕುಮಾರಿ ಎನ್.ಮಂಜುಶ್ರೀ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೆಚ್.ಬಸವರಾಜೇಂದ್ರ ಮುಂತಾದವರು ಉಪಸ್ಥಿತರಿರುವರು, ಅಂಕೇಗೌಡ ಅವರನ್ನು ಸನ್ಮಾನಿಸಲಾಗುವುದು ಎಂದು ಡಾ.ಎಸ್.ಎಲ್. ಕಾಡದೇವರಮಠ ಹೇಳಿದರು.
ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಧ್ಯಕ್ಷತೆ ವಹಿಸುವರು. ವಾಗ್ಮೀ, ಲೇಖಕ ಗುರುರಾಜಕರ್ಜಗಿ ದಿಕ್ಸೂಚಿ ಭಾಷಣ ಮಾಡುವರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ, ಎಲ್ಐಎಸ್ ಅಕಾಡೆಮಿಯ ಪ್ರೊ. ಪಿ.ವಿ.ಕೊಣ್ಣೂರ್, ಎಸ್ಐಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶಿವಕುಮಾರಯ್ಯ, ಎಸ್ಐಟಿ ಪ್ರಾಂಶುಪಾಲರಾದ ಡಾ.ಎಸ್.ವಿ.ದಿನೇಶ್ ಮೊದಲಾದವರು ಭಾಗವಹಿಸುವರು ಎಂದರು.
ಎಸ್ಐಟಿಯ ಪ್ರಾಂಶುಪಾಲರಾದ ಡಾ.ಎಸ್.ವಿ.ದಿನೇಶ್ ಮಾತನಾಡಿ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮುಂದೆ ಗ್ರಂಥಾಲಯಗಳು ಭೌತಿಕವಾಗಿ ಇಲ್ಲವಾಗುತ್ತವೆಯೇನೊ ಎನಿಸಿಬಿಟ್ಟಿದೆ. ಹಾಗಾಗಲು ಬಿಡದೆ ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸಿ ಗ್ರಂಥಾಲಯಕ್ಕೆ ಕರೆತರಬೇಕು ಎಂದು ಹೇಳಿದರು.
ಡಾ.ರಾಜೇಶ್ ಎನ್.ತುರಮರಿ, ಹೆಚ್.ಪಿ.ಶೇಖರ್, ಮೋಹನ್ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
