ತುಮಕೂರು: ಸಹ ಶಿಕ್ಷಣ ಕೊಡುತ್ತಿರುವ ಶಿಕ್ಷಣ ಸಂಸ್ಥೆಯಾದ ಸಿದ್ಧಾರ್ಥ ಸಂಸ್ಥೆಯಲ್ಲಿ ಶೇ.60ರಷ್ಟು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಜಯರಾಮ್ ರಮೇಶ್ ತಿಳಿಸಿದರು.
ನಗರದ ಅಗಳಕೋಟೆಯ ಶಿಕ್ಷಣ ಭೀಷ್ಮ ಡಾ.ಎಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದ ವೇದಿಕೆಯಲ್ಲಿ ಸಾಹೇ (ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್) ಆಯೋಜಿಸಿದ್ದ 14ನೇ ಘಟಿಕೋತ್ಸವದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಜಯರಾಮ್ ರಮೇಶ್ ಮಾತನಾಡಿ,
ಮಹಿಳಾ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಲ್ಲಿ ಕೇವಲ ಹೆಣ್ಣು ಮಕ್ಕಳೇ ಶಿಕ್ಷಣ ಪಡೆಯುವುದು ಹೆಚ್ಚುಗಾರಿಕೆಯಲ್ಲ. ಸಹ ಶಿಕ್ಷಣ ನೀಡುತ್ತಿರುವ ಸಂಸ್ಥೆಯಲ್ಲಿ ಮೂರನೆ ಎರಡು ಭಾಗದಷ್ಟು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯ ಎಂದರು.
21 ನೇ ಶತಮಾನ ರಾಜಕೀಯ ಮತ್ತು ಧಾರ್ಮಿಕತೆಯಿಂದ ಗುರಿತಿಸಿಕೊಳ್ಳಬಾರದು. ಬದಲಾಗಿ ವಿಜ್ಞಾನ ಮತ್ತು ಆಧ್ಯಾತ್ಮದಿಂದ ಪ್ರೇರಣೆಗೊಳ್ಳಬೇಕು. ಭಾರತ ದೇಶವು ಬೇರೆಲ್ಲ ದೇಶಗಳಿಗಿಂತ ತನ್ನ ಧಾರ್ಮಿಕ, ಸಾಂಸ್ಕೃತಿಕ, ಭಾಷೆ, ಸಂವಿಧಾನದಲ್ಲಿ ವೈವಿಧ್ಯತೆಯಿಂದ ಗುರುತಿಸಿಕೊಂಡಿದೆ. ಹಾಗೆ ಆರ್ಥಿಕವಾಗಿ ಬೆಳವಣಿಗೆ ಕಾಣುತ್ತಿದೆ ಈ ಸಂದರ್ಭದಲ್ಲಿ ವೈವಿಧ್ಯತೆಯಲ್ಲಿ ಬಿರುಕು ಮೂಡದಂತೆ ಯುವಜನತೆ ಎಚ್ಚರ ವಹಿಸಬೇಕು. ವೈವಿಧ್ಯತೆ ಭಾರತೀಯರನ್ನು ವ್ಯಾಖ್ಯಾನಿಸಬೇಕು, ವಿಭಜಿಸಬಾರದು ಎಂದರು.
ಇದೇ ವೇಳೆ ಪಾವಗಡದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಸ್ಥಾಪಕರಾದ ಶ್ರೀ ಸ್ವಾಮಿ ಜಪಾನಂದಜಿ ಮಹಾರಾಜ್ ಹಾಗೂ ವಿಜ್ಞಾನಿ/ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಇಂಜಿನಿಯರಿಂಗ್ನ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಕೆ.ಪಿ.ಜೆ.ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ ಗೃಹ ಸಚಿವರು ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಸಾಹೇ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳ ಒಟ್ಟು 1086 ಮಂದಿಗೆ ಪದವಿ ಪ್ರದಾನ ಮಾಡಿದರು.
ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಕೆ.ಬಿ.ಲಿಂಗೇಗೌಡ, ಅವರು ಸಾಹೇ ವಿಶ್ವವಿದ್ಯಾನಿಲಯ ಪ್ರಗತಿನೋಟದ ವರದಿಯನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರಿ ಮತ್ತು ಡಾ.ಜಿ.ಎಸ್.ಆನಂದ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು.
ಕುಲಸಚಿವರಾದ ಡಾ. ಅಶೋಕ್ ಮೆಹತಾ, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕರಾದ ಡಾ.ಗುರುಶಂಕರ್ ಸಿ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಜಿ ಎನ್, ಉಪ ಕುಲಸಚಿವರು ಆದ ಡಾ.ಸುದೀಪ್ ಕುಮಾರ್, ಟಿ.ಬೇಗೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲರಾದ ಡಾ ದಿವಾಕರ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಡೀನ್ಗಳು, ಶೈಕ್ಷಣಿಕ ಮಂಡಳಿಯ ಸಮಿತಿ ಸದಸ್ಯರು, ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
