ತುಮಕೂರು: ಭಾರತದಲ್ಲಿ ಹೆಣ್ಣಿಗೆ ದೊಡ್ಡ ಗೌರವವಿದೆ. ಸ್ತ್ರೀಶಕ್ತಿಯು ಇಚ್ಛಾಶಕ್ತಿಯಾಗಿ ರೂಪುಗೊಂಡು ಮಹಿಳೆಯರು ಸಮಾಜ ಪರಿವರ್ತನೆಗೆ ನೆರವಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಲ್ಲಿ ಮಹಿಳೆಯರ ಜವಾಬ್ದಾರಿ ಹೆಚ್ಚಾಗಿದೆ ಎಂದು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ, ಜಿಲ್ಲಾ ಮಹಿಳಾ ಘಟಕ ಹಾಗೂ ವಿವಿಧ ಘಟಕಗಳ ಆಶ್ರಯದಲ್ಲಿ ಶನಿವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಹೆಣ್ಣನ್ನು ಗೌರವಿಸುವ ಶ್ರೇಷ್ಠ ಸಂಸ್ಕೃತಿ ನಮ್ಮದು ಎಂದರು.
ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಮಾತನಾಡಿ, ಲಿಂಗ ತಾರತಮ್ಯ ನಿವಾರಣೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಮಾನ ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಆರಂಭವಾದ ಮಹಿಳಾ ದಿನಾಚರಣೆ ಇಂದು ಸಾಮಾಜಿಕ ಜಾಗೃತಿಗೂ ಕಾರಣವಾಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಶಕ್ತವಾಗಿ ತೊಡಗಿಕೊಂಡು ಯಶಸ್ವಿಯಾಗುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಮಹಿಳೆಯರಿಗೆ ಮತದಾನದ ಹಕ್ಕು ಇಲ್ಲದ ಹಕ್ಕು ಇಲ್ಲದ ಸಂದರ್ಭದಲ್ಲಿ ಹಕ್ಕು, ಸಮಾನತೆಗಾಗಿ ರೂಪುಗೊಂಡ ಹೋರಾಟವನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಾಧನೆಗಳನ್ನು ಸಂಭ್ರಮಿಸುವ ಆಚರಣೆಯಾಗಿದೆ ಎಂದರು.
ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಎಲ್ಲೆಡೆ ಸಮರ್ಥವಾಗಿ ತೊಡಗಿಕೊಂಡಿದ್ದಾರೆ. ಅನೇಕ ದೊಡ್ಡ ಕಂಪನಿಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿ ಸಂಸ್ಥೆ ನಿಭಾಯಿಸುತ್ತಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರ ಪ್ರಾಬಲ್ಯ ಹೆಚ್ಚಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರ ಇಂಗಿತವಾಗಿದ್ದು, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡಬೇಕೆಂಬ ಮಸೂದೆ ಜಾರಿಯಾಗಲಿದೆ ಎಂದು ಹೇಳಿದರು.
ಡಾ. ಪ್ರೇಮಾ ಸಿದ್ಧರಾಜು,ಮುಕ್ತಾಂಬ, ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಎಸ್. ಪರಮೇಶ್, ಕೆ.ಎಸ್. ಸಿದ್ಧಲಿಂಗಪ್ಪ, ಮಮತಾ ದಿವಾಕರ್, ಶಿಲ್ಪ ನವೀನ್ ಹಿರೇಮಠ್, ಡಾ.ದರ್ಶನ್ ಕೆ.ಎಲ್, ತಳವಾರನಹಳ್ಳಿ ವಿಜಯಕುಮಾರ್ ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
