ತುಮಕೂರು: ಭಾರತದ ಒಕ್ಕೂಟ ವ್ಯವಸ್ಥೆಗೆ ಮೂಲ ಕಾರಣರಾಗಿರುವ ಸರ್ದಾರ್ ವಲ್ಲಭಾಭಾಯಿ ಪಟೇಲ್ ಅವರ ಕನಸಾದ ಐಕ್ಯ, ಬಲಿಷ್ಠ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಾಣದ ಅವರ ಸಂಕಲ್ಪ ಯುವಜನರಿಗೆ ಸ್ಫೂರ್ತಿದಾಯಕವಾಗಲಿ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲಿ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜು ಸಚಿವ ವಿ.ಸೋಮಣ್ಣ ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಶುಕ್ರವಾರ ನಗರದ ವಿಶ್ವವಿದ್ಯಾಲಯ ಬಳಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ವಲ್ಲಭಭಾಯಿ ಪಟೇಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಏಕತಾ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಸ್ವದೇಶಿ ಉತ್ಪನ್ನಗಳ ಬಳಕೆ, ಪ್ರೋತ್ಸಾಹ ಸಂಬಂಧ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ಸ್ವಾತಂತ್ರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಲ್ಲಭಭಾಯಿ ಪಟೇಲರು ಸ್ವಾತಂತ್ರ್ಯ ನಂತರ ಹರಿದುಹಂಚಿಹೋಗಿದ್ದ ಪ್ರದೇಶಗಳನ್ನು ದೇಶದಲ್ಲಿ ಏಕೀಕರಣಗೊಳಿಸುವ ಕಾರ್ಯದಲ್ಲಿ 550ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸುವ ಪ್ರಯತ್ನದಲ್ಲಿ ಸಫಲರಾದರು ಎಂದರು.
ಭಾರತದ ಮೊದಲ ಉಪ ಪ್ರಧಾನ ಮಂತ್ರಿಯಾಗಿ, ಗೃಹ ಸಚಿವರಾಗಿ ಅಖಿಲ ಭಾರತ ಸೇವಾ ವ್ಯವಸ್ಥೆಯನ್ನು ಬಲಿಷ್ಠವಾಗಿ ಸ್ಥಾಪನೆಯಾಗಲು ಕಾರಣರಾದರು. ಬಾರ್ಡೋಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ತಮ್ಮ ನಾಯಕತ್ವಕ್ಕಾಗಿ ಸರ್ದಾರ್ ಎಂಬ ಬಿರುದು ಪಡೆದರು. ಭಾರತ ರಾಷ್ಟ್ರೀಯ ಏಕೀಕರಣದ ಬಗ್ಗೆ ರಾಜೀಯಾಗದ ಅಜೇಯ ಮನೋಭಾವಕ್ಕಾಗಿ ಉಕ್ಕಿನ ಮನುಷ್ಯ ಎಂಬ ಬಿರುದು ಪಡೆದರು. ಸರ್ದಾರ್ ವಲ್ಲಭಭಾಯಿ ಪಟೆಲರ 150ನೇ ಜನ್ಮ ವಾರ್ಷಿಕೋತ್ಸವವನ್ನು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ. ಈ ಅಭಿಯಾನವು ಯುವಕರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರೀಕ ಜವಾಬ್ದಾರಿಯ ಮನೋಭಾವವನ್ನು ಉಂಟುಮಾಡುವುದರೊಂದಿಗೆ ಭಾರತದ ವಿಭಜಿತ ಪ್ರದೇಶಗಳನ್ನು ಒಂದೇ ರಾಷ್ಟçವಾಗಿ ಏಕೀಕೃತಗೊಳಿಸಿದ ಪಟೇಲ್ ಅವರ ಪರಂಪರೆಯನ್ನು ಗೌರವಿಸಲಾಗುವುದು. ಈ ಅಭಿಯಾನದ ಮೂಲಕ ಯುವಕರನ್ನು ಸಾಮಾಜಿಕವಾಗಿ ಪಾಲ್ಗೊಳ್ಳುವಿಕೆಯಲ್ಲಿ ಏಕ ಭಾರತ್ ಆತ್ಮನಿರ್ಭರ ಭಾರತ್ ಎಂಬ ಆದರ್ಶಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಎಚ್.ಎಸ್.ರವಿಶಂಕರ್ ಪ್ರೊ.ವೆಂಕಟೇಶ್ವರಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
