ತುಮಕೂರು: ಸಾರ್ವಜನಿಕ ಸೇವೆಗೆ, ಬಿಜೆಪಿ ಸಂಘಟನೆಗೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪಕ್ಷನಿಷ್ಠೆ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಗುರುವಾರ ನಗರದ ಬಿಜಿಎಸ್ ವೃತ್ತದಲ್ಲಿ ಯಡಿಯೂರಪ್ಪನವರ ಅಭಿಮಾನಿ ಆಟೋ ಯಡಿಯೂರಪ್ಪ(ಕೆ.ಎಂ.ಶಿವಕುಮಾರ್) ಅವರ ನೇತೃತ್ವದಲ್ಲಿ ಹಾಗೂ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪನವರ 50ನೇ ವರ್ಷದ ರಾಜಕೀಯ ಜೀವನದ ಸಂಭ್ರಮ ಹಾಗೂ ಅವರ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, 50 ವರ್ಷಗಳ ಕಾಲ ವಿರಮಿಸದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ಯಡಿಯೂರಪ್ಪನವರಿಗೆ ಹೆಚ್ಚಿನದಾಗಿ ಸಲ್ಲುತ್ತದೆ ಎಂದರು.
ತುಮಕೂರು ನಗರದಲ್ಲಿ ನಾನು ಶಾಸಕನಾಗಬೇಕಾದರೆ ಬಿಜೆಪಿಯ ಜೊತೆಗೆ ಯಡಿಯೂರಪ್ಪನವರ ವರ್ಚಸ್ಸೂ ಕಾರಣ. ಅವರ ಋಣ ನನ್ನ ಮೇಲಿದೆ ಎಂದು ಹೇಳಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿಯನ್ನು ಸಧೃಢವಾಗಿ ಕಟ್ಟಿ ಮತ್ತೆ ಅಧಿಕಾರಕ್ಕೆ ತರುವ ಮೂಲಕ ಕಾರ್ಯಕರ್ತರು ಯಡಿಯೂರಪ್ಪನವರಿಗೆ ಜನ್ಮದಿನದ ಕೊಡುಗೆ ನೀಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಈ ವೇಳೆ ಯಡಿಯೂರಪ್ಪ ಅಭಿಮಾನಿ ಬಳಗದಿಂದ ಹಿರಿಯ ಅಸಂಘಟಿತ ಕಾರ್ಮಿಕರನ್ನು ಸನ್ಮಾನಿಸಲಾಯಿತು ಹಾಗೂ ಆಟೋ ಚಾಲಕರಿಗೆ ಸಮವಸ್ತç ವಿತರಿಸಲಾಯಿತು.
ಕಾರ್ಯಕ್ರಮ ಆಯೋಜನೆ ಮಾಡಿದ್ದ ಯಡಿಯೂರಪ್ಪ ಅಭಿಮಾನಿ ಆಟೋ ಯಡಿಯೂರಪ್ಪ (ಕೆ.ಎಂ.ಶಿವಕುಮಾರ್), ಟಿ.ಕೆ.ಧನುಷ್, ವಿರೂಪಾಕ್ಷಪ್ಪ, ಹೆಚ್.ಎಂ.ರವೀಶಯ್ಯ, ನಿಸರ್ಗ ರಮೇಶ್, ಬಂಬೂ ಮೋಹನ್, ಸತ್ಯಮಂಗಲ ಜಗದೀಶ್, ನಂಜುಂಡಸ್ವಾಮಿ(ದಾಸಣ್ಣ), ಮಲ್ಲಿಕಾರ್ಜುನ್, ವಿಷ್ಣುವರ್ಧನ್, ಮುಖಂಡರಾದ ನಟರಾಜ್, ಸಿದ್ಧಗಂಗಯ್ಯ, ಅಂಜನಮೂರ್ತಿ, ಜಯಪ್ರಕಾಶ್, ವೆಂಕಟೇಶಾಚಾರ್, ಎಂ.ಗೋಪಿ, ರೇಖಾಶಿವಕುಮಾರ್, ಮಂಜುಳಾ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
