ತುಮಕೂರು: ಮೊಬೈಲ್ನ ಅತಿಯಾದ ಬಳಕೆ ಅನಾಹುತ ಹಾಗೂ ಅಪರಾಧ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದು, ಈ ಬಗ್ಗೆ ವಿದ್ಯಾರ್ಥಿ ಸಮೂಹ ಎಚ್ಚರದಿಂದ ಇರುವಂತೆ ಮನೋವೈದ್ಯರಾದ ಡಾ.ಲೋಕೇಶಬಾಬು ತಿಳಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ವಿಶ್ವವಿದ್ಯಾಲಯ ಕಲಾ ಕಾಲೇಜು, ವಿ.ವಿ. ಮಹಿಳಾ ವಿದ್ಯಾರ್ಥಿ ನಿಲಯ ಇವರ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ವಿ.ವಿ.ಕಲಾ ಕಾಲೇಜು ಮಹಿಳಾ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಮಾನಸಿಕ ಅರಿವು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊಬೈಲ್ ಬಳಕೆ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಬಹುತೇಕ ಮಂದಿ ಅಪರಾಧ ಚಟುವಟಿಕೆಗಳಲ್ಲಿ ಸಿಲುಕುತ್ತಿರುವುದು ಮೊಬೈಲ್ ಬಳಕೆಯಿಂದ ಎಂಬುದನ್ನು ನಾವು ಗಮನಿಸಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಯಾರು ಮೊಬೈಲ್ ಹೆಚ್ಚು ಬಳಸದೆ ಇರುವರೋ ಅವರು ಮಾತ್ರ ನೆಮ್ಮದಿಯಾಗಿ ಇದ್ದಾರೆ ಎಂದು ಹೇಳಬಹುದು ಎಂದು ವ್ಯಾಖ್ಯಾನಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ. ಲಲಿತ ಮಾತನಾಡಿ ದೈಹಿಕ ಆರೋಗ್ಯ ಹೇಗೆ ಮುಖ್ಯವೋ, ಮಾನಸಿಕ ಆರೋಗ್ಯವೂ ಅಷ್ಟೇ ಪ್ರಮುಖ. ದುರಂತವೆಂದರೆ ಹೆಚ್ಚು ತಿಳಿದವರು, ಓದಿದವರು, ನಾಗರಿಕರೆ ಹೆಚ್ಚು ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಮೌಢ್ಯತೆಗೆ ಆಸ್ಪದ ನೀಡುತ್ತಿದ್ದಾರೆ. ಮನುಷ್ಯ ಓದಿದಂತೆಲ್ಲಾ ಪ್ರಜ್ಞಾವಂತನಾಗಬೇಕೇ ಹೊರತು ಯಾರೋ ಹೇಳಿದ್ದನ್ನು ಕೇಳುವ ಮೂಢನಾಗಬಾರದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ 2025ರ ಜುಲೈ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ಮಹತ್ತರವಾದ 15 ಮಾರ್ಗಸೂಚಿಗಳನ್ನು ನೀಡಿದೆ. ಶಾಲಾ ಕಾಲೇಜುಗಳಲ್ಲಿ, ವಿದ್ಯಾರ್ಥಿಗಳು ಕಲಿಯುವ ಸಂಸ್ಥೆಗಳಲ್ಲಿ ಆತ್ಮಹತ್ಯೆ ತಡೆಗಟ್ಟುವ ಮಾರ್ಗೋಪಾಯಗಳ ಬಗ್ಗೆ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಈ ಮಾರ್ಗದರ್ಶಿ ಸೂಚಿಗಳಲ್ಲಿ ಹೇಳಿದೆ. ಶಾಲಾ ಕಾಲೇಜುಗಳು ಇದನ್ನು ಪಾಲಿಸಬೇಕು. ಆದರೆ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಕೇವಲ ಅಂಕಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಳೆದ 30 ವರ್ಷಗಳಿಂದ ವರದಕ್ಷಿಣೆ ವಿರೋಧಿ ವೇದಿಕೆ ಸಾಂತ್ವನ ಕೇಂದ್ರವು ವಿದ್ಯಾರ್ಥಿ ಸಮೂಹದಲ್ಲಿ ಆತ್ಮಹತ್ಯೆ ತಡೆ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿ.ವಿ. ಕಲಾ ಕಾಲೇಜು ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ ಜಿ. ಅವರು ವಿದ್ಯಾರ್ಥಿಗಳಲ್ಲಿ ಅತಿಯಾದ ಮೊಬೈಲ್ ಬಳಕೆ ಒಳ್ಳೆಯದಲ್ಲ. ಇದು ಅಪರಾಧಗಳಿಗೂ ಕಾರಣವಾಗುತ್ತಿದೆ. ಮನುಷ್ಯರ ನಕಾರಾತ್ಮಕ ಚಟುವಟಿಕೆಗಳಿಗೂ ಪ್ರೇರಣೆ ನೀಡುತ್ತಿದೆ. ಎಷ್ಟೋ ಮಂದಿ ಸೆಲ್ಫಿ ಗೀಳಿಗೆ ಒಳಗಾಗಿ ತಮ್ಮ ಬದುಕನ್ನೇ ಅಂತ್ಯಗೊಳಿಸಿಕೊAಡಿದ್ದಾರೆ. ಮೊಬೈಲ್ ಹಠ ಅಥವಾ ಅದರ ನಕಾರಾತ್ಮಕ ಬಳಕೆಯಿಂದಾಗಿ ಎಷ್ಟೋ ಆತ್ಮಹತ್ಯೆಗಳು ಸಂಭವಿಸಿವೆ. ಈ ಬಗ್ಗೆ ವಿದ್ಯಾರ್ಥಿನಿಯರು ಎಚ್ಚರಿಕೆಯಿಂದ ಇರಬೇಕು ಎಂದರು.
ಸಮಾರಂಭದಲ್ಲಿ ಪ್ರೊ.ಹೊನ್ನಗಾನಹಳ್ಳಿ ಕರಿಯಣ್ಣ ಬಾ.ಹ.ರಮಾಕುಮಾರಿ, ಡಾ.ಈ.ವನಜಾಕ್ಷಿ ಮುಂತಾದವರು ಉಪಸ್ಥಿತರಿದ್ದರು. ವರದಕ್ಷಿಣೆ ವಿರೋಧಿ ವೇದಿಕೆ – ಸಾಂತ್ವನ ಕೇಂದ್ರದ ಪಾರ್ವತಮ್ಮ, ಗಂಗಲಕ್ಷ್ಮಿ ಸಂಗಡಿಗರು ಮಾನವ ಗೀತೆ ಪ್ರಸ್ತುತಪಡಿಸಿದರು.
ವರದಿ : ಐ ಕೆ ಮಂಜುನಾಥ್
