ತುಮಕೂರು:ಮಹಾನಗರ ಪಾಲಿಕೆಯ ಆಯುಕ್ತರಾದ ಶುಭ.ಬಿ.ರವರು ತುಮಕೂರು ನಗರದ ವಾರ್ಡ್ ನಂಬರ್ 31ರ ಜಯನಗರ ಪಶ್ಚಿಮ, ನೃಪತುಂಗ ಬಡಾವಣೆಯಲ್ಲಿ ಮಿಂಚಿನ ಸಂಚಾರವನ್ನು ನಡೆಸಿದರು.
ಈ ಸಂದರ್ಭದಲ್ಲಿ ನಾಗರೀಕ ಸಮಿತಿಯ ಪದಾಧಿಕಾರಿಗಳು,ನಾಗರೀಕರು ಮತ್ತು ಸಾರ್ವಜನಿಕರು,ವ್ಯಾಪಾರಸ್ಥರು,ಮಹಿಳೆಯರು,ಹಿರಿಯ ನಾಗರೀಕರು ದೂರುಗಳ ಮಹಾಮಳೆಯನ್ನೇ ಸುರಿಸಿದರು. ಉದ್ಯಾನವನಗಳ ಸ್ವಚ್ಛತೆ ಇಲ್ಲ, ಚರಂಡಿಗಳ ಸ್ವಚ್ಛತೆ ಇಲ್ಲ, ಬೀದಿ ದೀಪಗಳ ನಿರ್ವಹಣೆ ಸರಿ ಇಲ್ಲ,ಬೀದಿ ನಾಯಿಗಳ ಆರ್ಭಟ,ಪ್ರತಿ ಬೀದಿಗಳಲ್ಲಿ ಕನಿಷ್ಠ 50 ಬೀದಿ ನಾಯಿಗಳಿವೆ,ಮಕ್ಕಳು,ದ್ವಿಚಕ್ರ ವಾಹನ ಸವಾರರ ಮೇಲೆ ನಾಯಿಗಳು ಎರಗುತ್ತಿವೆ,ರಾತ್ರಿ ಹೊತ್ತು ಓಡಾಡುವುದೇ ದುಸ್ತರವಾಗಿದೆ,ಉದ್ಯಾನವನಗಳ ಒತ್ತುವರಿ, ಪಾದಾಚಾರಿ ಮಾರ್ಗದ ಒತ್ತುವರಿ,ಮಿನಿ ಮಾರುಕಟ್ಟೆ ಮುಂದೆ ಪಾದಾಚಾರಿ ಮಾರ್ಗದ ಒತ್ತುವರಿ,ಅಂಗಡಿಗಳ ಮಾಲೀಕರುಗಳು ತರಕಾರಿ ಮಾರುವವರು ಪಾದಾಚಾರಿ ಮಾರ್ಗದ ಒತ್ತುವರಿ,ಕೆಲವರು ಪಾಲಿಕೆಗೆ ಸೇರಿದ ಉದ್ಯಾನವನಗಳಲ್ಲಿ ಮನೆಗಳನ್ನು ಸಹ ಕಟ್ಟಿದ್ದಾರೆ ಎಂದು ಆಯುಕ್ತರ ಗಮನಕ್ಕೆ ತಂದರು,ಚರಂಡಿಗಳ ಮೇಲೆ ಮನೆಯ ಮಾಲೀಕರು ಮೆಟ್ಟಿಲು ಕಟ್ಟಿರುವುದನ್ನು ಕಂಡು ಆಯುಕ್ತರು ಗರಂ ಆದರು, ಆಯುಕ್ತರು ತಕ್ಷಣವೇ ಇವುಗಳ ನಿರ್ವಹಣೆಯನ್ನು ಸ್ಥಳದಲ್ಲಿದ್ದ ಕಾರ್ಯಪಾಲಕ ಅಭಿಯಂತರರಾದ ಕೆ.ಎಸ್.ಸಂದೀಪ್, 31ನೇ ವಾರ್ಡಿನ ಸಹಾಯಕ ಅಭಿಯಂತರಾದ ಪಲ್ಲವಿ, ಪರಿಸರ ಇಂಜಿನಿಯರ್ ನಿಖಿತಾ ಇತರ ಪಾಲಿಕೆಯ ಸಿಬ್ಬಂದಿಗಳಿಗೆ ಸೂಚಿಸಿದರು.
ಜಯನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಆರ್.ಎಸ್.ವೀರಪ್ಪದೇವರು ಆಯುಕ್ತರಿಗೆ ಮನವಿ ಮಾಡುತ್ತಾ ಜಯನಗರ ಪಶ್ಚಿಮ ಬಡಾವಣೆಯ 1ನೇ ಮುಖ್ಯರಸ್ತೆಯ 3ನೇ ಕ್ರಾಸ್ ನಲ್ಲಿರುವ ಹಳೆಯ ಪೋಲೀಸ್ ಠಾಣೆ ನಾಗರೀಕ ಸಮಿತಿಗೆ ಸೇರಿದ್ದು ಇದು ಪಾಲಿಕೆಯ ಜಾಗ,ನಾವೇ ಈ ಹಿಂದೆ ಪೋಲೀಸ್ ಇಲಾಖೆಗೆ ನೀಡಿದ್ದೆವು,ನಮ್ಮ ಹಣದಲ್ಲಿ ಪೋಲೀಸ್ ಠಾಣೆ ನಿರ್ಮಿಸಿದ್ದೆವು ಈಗ ಸಿಎ ನಿವೇಶನದಲ್ಲಿ 2ಕೋಟಿ ವೆಚ್ಚದಲ್ಲಿ ನೂತನ ಪೋಲೀಸ್ ಠಾಣೆ ಆಗಿದ್ದು ಅವರು ಖಾಲಿ ಮಾಡಿದ್ದಾರೆ ಸದರಿ ಕಟ್ಟಡ ಈಗ ಖಾಲಿ ಇದೆ,ಆದ್ದರಿಂದ ಹಳೆಯ ಪೋಲೀಸ್ ಠಾಣೆಯನ್ನು ದಯಮಾಡಿ ನಮ್ಮ ನಾಗರೀಕ ಸಮಿತಿಗೆ ಪುನಃ ನೀಡಬೇಕು ಇಲ್ಲಿ ನಾಗರೀಕರಿಗೆ ಗ್ರಂಥಾಲಯ,ಯೋಗ ಮಾಡಲು ಕಟ್ಟಡ ಕಟ್ಟಲಾಗುವುದು,ಇತರೆ ಸಮಾಜಮುಖಿ ಕೆಲಸಗಳಿಗೆ ಈ ಜಾಗವನ್ನು ಬಳಸಿಕೊಳ್ಳಲಾಗುವುದು, ಇದಕ್ಕೆ ಪಾಲಿಕೆಯಿಂದ ಇ ಖಾತಾ ಮಾಡಿಕೊಡಬೇಕೆಂದು ಈ ಬಗ್ಗೆ ನಾವು ಈ ಹಿಂದೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತು ಉಸ್ತುವಾರಿ ಸಚಿವ ಡಾ||ಜಿ.ಪರಮೇಶ್ವರ್ ರವರಿಗೆ ಸಹ ಮನವಿ ಸಲ್ಲಿಸಲಾಗಿದೆ ಎಂದು ಗಮನಕ್ಕೆ ತಂದರು.ಇದಕ್ಕೆ ಆಯುಕ್ತರು ಸಕರಾತ್ಮಕವಾಗಿ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿ ಸದಸ್ಯರಾದ ಸಿ.ಎನ್. ರಮೇಶ್ ಜಯನಗರ ನಾಗರೀಕ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಆರ್.ಎಸ್.ವೀರಪ್ಪ ದೇವರು, ಪ್ರಕಾಶ್ ಭಾರದ್ವಾಜ್, ವೆಂಕಟೇಶ್ ಮುಂತಾದವರು ಹಾಜರಿದ್ದರು.