ತುಮಕೂರು: ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜಒಡೆಯರ್ ರವರು ಪ್ರಾರಂಭಿಸಿದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್ ಲಿಮಿಟೆಡ್ ನಿಂದ ಸಾವಿರಾರು ಜನರಿಗೆ ಉದ್ಯೋಗ ನೀಡಿ ರಾಜ್ಯದ ಜನರಿಗೆ ಉತ್ತಮ ಸೋಪುಗಳನ್ನು ನೀಡುವ ಅವರ ದೂರದೃಷ್ಠಿತ್ವವನ್ನು ನೋಡಿದರೆ ನಮಗೆ ಹೆಮ್ಮೆ ಎನ್ನಿಸುತ್ತದೆ, ಶ್ರೀಗಂಧ ಮರಗಳನ್ನು ಬೆಳೆಸಿ ಅದರ ಲಾಭವನ್ನು ರೈತರಿಗೆ ನೀಡುತ್ತಿರುವ ಸಂಸ್ಥೆಯು ಬಹಳ ಎತ್ತರಕ್ಕೆ ಬೆಳೆದಿದೆ ಕಳೆದ 108 ವರ್ಷಗಳ ಸುದೀರ್ಘ ಇತಿಹಾಸವುಳ್ಳ ಸಂಸ್ಥೆಗೆ ನೌಕರರು,ಅಧಿಕಾರಿಗಳ ಕೊಡುಗೆ ಸಹ ದೊಡ್ಡದಿದೆ,ಸಾಬೂನು ಮೇಳದಿಂದ ಗ್ರಾಹಕರಿಗೆ ಹೆಚ್ಚು ಪ್ರಯೋಜನವಾಗಲಿದೆ,ಸಿಬ್ಬಂದಿಗಳ ಪ್ರಾಮಾಣಿಕತೆಯಿಂದ ಸಂಸ್ಥೆ ಇಂದು ಈ ಎತ್ತರಕ್ಕೆ ಬೆಳೆದಿದೆ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಚಿಲುಮೆ ಸಮುದಾಯಭವನದಲ್ಲಿ ಆಯೋಜಿಸಿದ್ದ ಮೈಸೂರು ಸ್ಯಾಂಡಲ್ ಸೋಪ್ ನ ಸೋಪ್ ಮೇಳವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪತ್ರಕರ್ತರಾದ ಡಾ||ಎಸ್.ನಾಗಣ್ಣನವರು ಕೆ.ಎಸ್.ಡಿ.ಎಲ್.ಸಂಸ್ಥೆಯು ನೂರಾರು ಕೋಟಿ ರೂಗಳ ಲಾಭವನ್ನು ಗಳಿಸಿ ಸರ್ಕಾರಕ್ಕೆ ಡಿವಿಡೆಂಟ್ ರೂಪದಲ್ಲಿ ನೀಡುತ್ತಿರುವುದು ಸಂಸ್ಥೆಯ ಕಾರ್ಯವೈಖರಿ,ಬದ್ಧತೆ ಎಲ್ಲರೂ ಮೆಚ್ಚುವಂತದ್ದು,ಎಲ್ಲ ಜಿಲ್ಲೆಗಳಲ್ಲಿ ಸೋಪ್ ಸಂತೆ ನಡೆಯುತ್ತಿರುವುದು ಶ್ಲಾಘನೀಯ,ಗ್ರಾಹಕರಿಗೆ ಸಂಸ್ಥೆಯ ಉತ್ಪನ್ನಗಳನ್ನು ಪರಿಚಯಿಸುವ ಈ ಕಾರ್ಯದಿಂದ ಸಂಸ್ಥೆಯ ವಹಿವಾಟು ಹೆಚ್ಚಿ,ಲಾಭವೂ ಹೆಚ್ಚುತ್ತದೆ ಎಂದರು.
ಸಂಸ್ಥೆಯ ಸಹಾಯಕ ವ್ಯವಸ್ಥಾಪಕರಾದ ಅರವಿಂದ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಳೆದ 10-15 ವರ್ಷಗಳಿಂದ ಕಂಪೆನಿಯ ವಹಿವಾಟು ಹೆಚ್ಚುತಾ ಲಾಭವೂ ಚೆನ್ನಾಗಿದೆ, ಪ್ರತಿವರ್ಷ ಶೇ 14% ನಿವ್ವಳ ಲಾಭ ಬರುತ್ತಿದೆ,2024-25ರಲ್ಲಿ 450 ಕೋಟಿ ನಿವ್ವಳ ಲಾಭ ಬಂದಿದೆ,2025-26ನೇ ಸಾಲಿನಲ್ಲಿ 2100ಕೋಟಿ ವ್ಯವಹಾರ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ,ದೇಶದ ಎಲ್ಲ ರಾಜ್ಯಗಳಲ್ಲಿ ನಮ್ಮ ಉತ್ಪನ್ನಗಳು ಮಾರಾಟವಾಗುತ್ತಿದೆ, ಗ್ರಾಹಕರಿಗೆ ಉತ್ಕೃಷ್ಟ,ಗುಣಮಟ್ಟದ ವಸ್ತುಗಳನ್ನು ಕೊಡುತ್ತಿದ್ದೇವೆ ಗ್ರಾಹಕರು ನಮ್ಮ ಸ್ವದೇಶಿ ಸಂಸ್ಥೆಯಾದ ಮೈಸೂರು ಸ್ಯಾಂಡಲ್ ಉತ್ಪನ್ನಗಳನ್ನು ಬಳಸಬೇಕೆಂದು ಮನವಿ ಮಾಡುತ್ತಾ ಗ್ರಾಹಕರು ಇಂದಿನಿಂದ ನವೆಂಬರ್ 4ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸಿ ಆನಂದಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ನಿರ್ವಾಹಕರಾದ ಶ್ರೀಮತಿ ಆರ್.ಸುಷ್ಮಾ,ಡಿವೈಎಸ್.ಪಿ.ಪರಮೇಶ್ ಮುಂತಾದವರು ಉಪಸ್ಥಿತರಿದ್ದರು.
ವಾಣಿಸೋಮಶೇಖರ್ ಪ್ರಾರ್ಥಿಸಿ,ಸಿದ್ದಾನಾಯಕ್ ಸ್ವಾಗತಿಸಿ,ಆರ್.ಸುಷ್ಮಾರವರು ವಂದಿಸಿದರು.
- ಕೆ.ಬಿ.ಚಂದ್ರಚೂಡ್
