ತುಮಕೂರು: ಜಾಗತೀಕರಣದ ಪ್ರಭಾವದಿಂದ ಭಾರತವು ಇಂದು ಜಾಗತಿಕ ಕಾರ್ಪೊರೇಟ್ ಹಬ್ ಆಗಿ ಹೊರಹೊಮ್ಮಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕಟ್ಟುನಿಟ್ಟಾದ ಶಿಸ್ತು, ವೃತ್ತಿ ನೈತಿಕತೆ ಮತ್ತು ಉನ್ನತ ಗುಣಮಟ್ಟದ ಮಾನದಂಡಗಳನ್ನು ಅನುಸರಿಸುತ್ತವೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ದೈನಂದಿನ ಅಭ್ಯಾಸ ಮತ್ತು ಕೌಶಲ್ಯ ವೃದ್ಧಿಯ ಮೂಲಕ ಉದ್ಯಮದ ನಿರೀಕ್ಷೆಗಳಿಗೆ ತಕ್ಕಂತೆ ಸಜ್ಜಾಗಬೇಕು,” ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್.ಬಿ.ಪ್ರದೀಪ್ ಕುಮಾರ್ ಅವರು ಹೇಳಿದರು.
ನಗರದ ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯಲ್ಲಿ ಬಿಬಿಎ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ “ಕಾರ್ಪೊರೇಟ್ ಎಟಿಕೆಟ್ ಮತ್ತು ಕಾರ್ಪೊರೇಟ್ ಶಿಷ್ಟಾಚಾರ” ಕುರಿತು ವಿಶೇಷ ತಜ್ಞರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ಕ್ಷೇತ್ರದಲ್ಲಿ ನಿಮ್ಮ ವಸ್ತ್ರಧಾರಣೆ, ದೇಹಭಾಷೆ ಮತ್ತು ಇಂಗ್ಲಿಷ್ ಭಾಷೆಯ ಉಚ್ಛಾರಣೆಗಳು ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಇಂದಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಲ್ಲಾ ಕ್ಷೇತ್ರಗಳಲ್ಲೂ ಪ್ರಾಮುಖ್ಯತೆ ಪಡೆಯುತ್ತಿದ್ದು, ವಿದ್ಯಾರ್ಥಿಗಳು ತಾಂತ್ರಿಕವಾಗಿ ತಮ್ಮನ್ನು ಅಪ್ಗ್ರೇಡ್ ಮಾಡಿಕೊಳ್ಳುವುದು ಅನಿವಾರ್ಯ,” ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಕ್ಸಾನ್ ಮೊಬಿಲ್ ಸಂಸ್ಥೆಯ ರೆವೆನ್ಯೂ ಮತ್ತು ರಾಯಲ್ಟಿ ವಿಶ್ಲೇಷಕರಾದ ಸುಘೋಷ್ ಆರ್ಯ ಅವರು ಮಾತನಾಡಿ, “ಇಂದಿನ ಜಾಗತಿಕ ಉದ್ಯಮ ರಂಗದಲ್ಲಿ ಕೇವಲ ತಾಂತ್ರಿಕ ಜ್ಞಾನವಿದ್ದರೆ ಸಾಲದು, ಅದರೊಂದಿಗೆ ಒಬ್ಬ ವ್ಯಕ್ತಿ ತನ್ನನ್ನು ತಾನು ಹೇಗೆ ಪ್ರಸ್ತುತಪಡಿಸಿಕೊಳ್ಳುತ್ತಾನೆ ಎಂಬುದು ಅಷ್ಟೇ ಮುಖ್ಯ. ಕಾರ್ಪೊರೇಟ್ ಶಿಷ್ಟಾಚಾರ ಎಂಬುದು ಕೇವಲ ಸೌಜನ್ಯವಲ್ಲ, ಅದು ವೃತ್ತಿಪರ ಯಶಸ್ಸಿನ ಮೆಟ್ಟಿಲು,” ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅಮೂಲ್ಯ ಜಿ., ಡಾ.ಟಿ.ಎಂ.ಪ್ರಸನ್ನಕುಮಾರ್ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
