ತುಮಕೂರು: ಶಿಕ್ಷಣ ವ್ಯಕ್ತಿತ್ವ ವಿಕಸನ ಮತ್ತು ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಿದೆ ಹಾಗೂ ಶಿಕ್ಷಣವು ಸ್ವಾವಲಂಬನೆಗೆ ದಾರಿ ಮಾಡಿಕೊಡಲಿದೆ ಎಂದು ರಾಷ್ಟçಪತಿ ದ್ರೌಪದಿ ಮುರ್ಮು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ಲಿಂಗೈಕ್ಯ ಡಾ|| ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಅಥವಾ ವಿದ್ಯೆ ವ್ಯಕ್ತಿತ್ವ ವಿಕಸನ ಮತ್ತು ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಿದ್ದು, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಶಿಕ್ಷಣ ಒದಗಿಸುವ ಮೂಲಕ ಸಮಾಜಕ್ಕೆ ಶ್ರೀ ಸಿದ್ದಗಂಗಾ ಮಠವು ಅತ್ಯಂತ ಅಮೂಲ್ಯ ಕೊಡುಗೆ ನೀಡುತ್ತಿರುವುದು ಅತ್ಯಂತ ಪ್ರಶಂಸನೀಯ ಎಂದು ಅವರು ಅಭಿಪ್ರಾಯಿಸಿದರು.
ಶ್ರೀ ಮಠವು ಬಸವಣ್ಣನವರ ಆದರ್ಶಗಳನ್ನು ಅನುಸರಿಸುವ ಮೂಲಕ ತಾರತಮ್ಯದ ಸಾಮಾಜಿಕ ವ್ಯವಸ್ಥೆ ಮತ್ತು ಸಾರ್ವತ್ರಿಕ ಭಾಗವಹಿಸುವಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕೈಗನ್ನಡಿಯಾಗಿದೆ ಎಂದರು.
‘ದಯವೇ ಧರ್ಮದ ಮೂಲವಯ್ಯ’ ಎಂಬ ಬಸವಣ್ಣನವರ ಆಶಯದಂತೆ ಸಿದ್ದಗಂಗಾ ಮಠವು ಎಲ್ಲಾ ಸಮುದಾಯದ ಎಲ್ಲಾ ಜನವರ್ಗಗಳಿಗೆ ಅನ್ನ, ಅಕ್ಷರ, ಆಶ್ರಯದ ಮೂಲ ಮಂತ್ರದೊಂದಿಗೆ ಸಂಸ್ಕಾರವನ್ನು ನೀಡುತ್ತಿದೆ. ಎಲ್ಲಾ ನಂಬಿಕೆಗಳ ಆಧಾರ ಕರುಣೆ. ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಇಡೀ ಪ್ರಪಂಚದ ಬಗ್ಗೆ ಪ್ರೀತಿ ಮತ್ತು ಕರುಣೆಯ ಭಾವನೆ ಇರಬೇಕು. ಈ ನಿಟ್ಟಿನಲ್ಲಿ ಸಿದ್ದಗಂಗೆ ಮಠದ ಲಿಂಗೈಕ್ಯ ಡಾ: ಶಿವಕುಮಾರ ಸ್ವಾಮೀಜಿ ಅವರು ತಮ್ಮ ಜನ್ಮ ಶತಮಾನೋತ್ಸವ ಆಚರಿಸಿದ ನಂತರ ಹಲವು ವರ್ಷಗಳ ಕಾಲ ತಮ್ಮ ಆಧ್ಯಾತ್ಮಿಕ ಚಟುವಟಿಕೆಯಿಂದ ಮಾನವೀಯತೆಯನ್ನು ಶ್ರೀಮಂತಗೊಳಿಸಿದ್ದರು ಎಂದು ಕೇಳಲ್ಪಟ್ಟಿದ್ದೇನೆ. ಬಡವರು ಹಾಗೂ ದುರ್ಬಲರ ಸೇವೆಗೆ ತಮ್ಮ ಇಡೀ ಆಯುಷ್ಯವನ್ನು ಮುಡಿಪಾಗಿಟ್ಟಿದ್ದರು. ರಾಷ್ಟ್ರ ನಿರ್ಮಾಣ, ಲೋಕೋಪಕಾರ ಮತ್ತು ಕರ್ತವ್ಯ ನಿಷ್ಠೆಯ ಮಾರ್ಗವನ್ನು ಅನುಸರಿಸಿದರೆ ಮಾತ್ರ ನಾವು ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ರಾಷ್ಟ್ರ ನಿರ್ಮಾಣದ ಪ್ರಮುಖ ಕೇಂದ್ರ:
ಕಠಿಣ ಪರಿಶ್ರಮ, ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆ ಪರಸ್ಪರ ಸಂಬಂಧ ಹೊಂದಿವೆ. ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆಗೆ ಆಧ್ಯಾತ್ಮಿಕತೆಯು ಬಲವಾದ ಅಡಿಪಾಯ ಒದಗಿಸುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕವು ಸಾರ್ವಜನಿಕ ಸೇವೆ, ರಾಷ್ಟ್ರೀಯ ಸೇವೆ, ಆಧ್ಯಾತ್ಮಿಕತೆ ಹಾಗೂ ಆಧುನಿಕ ಪ್ರಗತಿಯ ಕೆಲವು ಪ್ರಭಾವಶಾಲಿ ಉದಾಹರಣೆಗಳನ್ನು ನೀಡುತ್ತದೆ. ಇದಕ್ಕಾಗಿ ಕರ್ನಾಟಕದ ಶ್ರಮಶೀಲ ಮತ್ತು ಪ್ರತಿಭಾನ್ವಿತ ನಿವಾಸಿಗಳು ಅಭಿನಂದನೆಗೆ ಅರ್ಹರು. ಕರ್ನಾಟಕದ ಜನರು ನಿರಂತರವಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ಕರ್ನಾಟಕವು ರಾಷ್ಟ್ರ ನಿರ್ಮಾಣದ ಪ್ರಮುಖ ಕೇಂದ್ರವಾಗಬಹುದು ಎಂಬುದು ನನ್ನ ನಂಬಿಕೆ ಎಂದರು.
ಶ್ರೀ ಶಿವಕುಮಾರ ಸ್ವಾಮೀಜಿಯವರ ಸತ್ಕಾರ್ಯಗಳ ಪರಂಪರೆಯನ್ನು ಇಂದಿನ ಶ್ರೀಗಳು ಮುಂದುವರೆಸಿಕೊಂಡು ಹೋಗುತ್ತಿದ್ದು, ಮಠದೊಂದಿಗಿನ ಭಕ್ತರ ಬಾಂಧವ್ಯ ಶ್ರೀಮಠದಿಂದ ಗ್ರಾಮೀಣ ಮಕ್ಕಳಿಗೆ ಮತ್ತು ಗ್ರಾಮೀಣ ಜನತೆಗೆ ಸಿಗುತ್ತಿರುವ ತ್ರಿವಿಧ ದಾಸೋಹ ಮತ್ತು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಸಿಗುತ್ತಿರುವ ವಿಶೇಷ ಸೌಲಭ್ಯಗಳು ಮತ್ತಷ್ಟು ಉನ್ನತ ಮಟ್ಟದಲ್ಲಿ ನಡೆಯಲಿ ಎಂದು ಆಶಿಸಿದ ಅವರು, ಇಂತಹ ಶ್ರೇಷ್ಠ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಮಗೆ ಅತ್ಯಂತ ಸಂತೋಷದ ದಿನವಾಗಿದೆ ಎಂದರು.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಮಾತನಾಡಿ, ಲಿಂಗೈಕ್ಯ ಡಾ: ಶ್ರೀ ಶಿವಕುಮಾರ ಸ್ವಾಮೀಜಿ ಅವರು ಆದರ್ಶ ಜೀವಿಗಳು. ಸರಳತೆ ಮತ್ತು ಮಾನವೀಯತೆಯ ಮೂಲಕ ಬಡವರಿಗೆ ತ್ರಿವಿಧ ದಾಸೋಹದ ಮೂಲಕ ಸೇವೆಯನ್ನು ಮಾಡುವ ಮೂಲಕ ಆದರ್ಶಪ್ರಾಯರಾಗಿದ್ದಾರೆ ಎಂದರು.
ದಿವ್ಯ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಶ್ರೀ ಸಿದ್ಧಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, 111 ವರ್ಷಗಳ ಸುದೀರ್ಘ ತಮ್ಮ ಜೀವಿತಾವಧಿಯಲ್ಲಿ 79 ವರ್ಷಗಳ ಸುದೀರ್ಘ ಸೇವೆಯನ್ನು ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಮಾಜ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದರು. ಇದು ಅವರ ಆದರ್ಶ, ಆಚಾರ, ವಿಚಾರ, ವಿಸ್ಮಯ, ಪವಾಡ ಎಂದರೆ ತಪ್ಪಾಗಲಾರದು. ಗ್ರಾಮಾಂತರ ಭಾಗದ ಬಡ ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬುದು ಶ್ರೀಗಳ ಮಹತ್ತರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಭಕ್ತರಿಗೆ ಸನ್ಮಾರ್ಗವನ್ನು ತೋರುವ ಮೂಲಕ ಶ್ರೀ ಮಠವು ನಿರಂತರ ಸೇವೆಯನ್ನು ಮುಂದುವರೆಸಿದೆ ಎಂದರು.
ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಸಚಿವ ಪ್ರಹ್ಲಾದ ಜೋಶಿ ಅವರು ಮಾತನಾಡಿ, ಶ್ರೀ ಸಿದ್ಧಗಂಗಾ ಮಠವು ಕೇವಲ ಆಧ್ಯಾತ್ಮಿಕ ಕೇಂದ್ರವಲ್ಲದೆ, ಆಧುನಿಕ ಸಂಶೋಧನಾ ಕೇಂದ್ರವಾಗಿದೆ. ಸಂಸ್ಕಾರವನ್ನು ಕೊಡುವ ಮೂಲಕ ಭಕ್ತರಿಗೆ ಸನ್ಮಾರ್ಗವನ್ನು ತೋರಿಸುವ ವಿಶ್ವದ ಏಕೈಕ ಮಠ. ಇದಕ್ಕೆ ಕಾರಣ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಹಸಿವಿನ ಅರ್ಥವಾಗಿತ್ತು. ಜಾತಿ, ಧರ್ಮವನ್ನು ಮೀರಿ ಬಡವರು ಹಸಿವಿನಿಂದ ನರಳಬಾರದು. ಹಣವಿಲ್ಲದವರು ಜ್ಞಾನದಿಂದ ವಂಚಿತರಾಗಬಾರದು ಎಂಬ ಧ್ಯೇಯವನ್ನು ಇಟ್ಟುಕೊಂಡಿರುವ ವಿಶ್ವದ ಏಕೈಕ ಮಠ ಇದಾಗಿದೆ. ಈ ಮೂಲಕ ಲಿಂಗೈಕ್ಯ ಶ್ರೀಗಳು ಮನುಷ್ಯನಿಂದ ಮಹಾದೇವರಾದರು ಎಂದರು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ಧೇಶ್ವರಸ್ವಾಮೀಜಿ,ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಚಿವರಾದ ಎಂ.ಬಿ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್,ಶಾಸಕ ಜಿ.ಬಿ.ಜ್ಯೋತಿಗಣೇಶ್,ಬಿ.ಸುರೇಶ್ ಗೌಡ ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
