ತುಮಕೂರು: ಸಿದ್ದಗಂಗಾ ಮಠದ 63ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಫೆಬ್ರವರಿ 06 ರಿಂದ 20ರವರೆಗೆ ನಡೆಯಲಿದೆ ಎಂದು ವಸ್ತುಪ್ರದರ್ಶನ ಟ್ರಸ್ಟ್ ಕಾರ್ಯದರ್ಶಿ ಬಿ.ಗಂಗಾಧರಯ್ಯ ತಿಳಿಸಿದ್ದಾರೆ.
ವಸ್ತು ಪ್ರದರ್ಶನದ ಆವರಣದಲ್ಲಿ ವಸ್ತು ಪ್ರದರ್ಶನಕ್ಕೆ ಸಂಬಂಧಿಸಿದ ಭಿತ್ತಿಪತ್ರ ಬಿಡುಗಡೆ ಮಾಡಿ,ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಠದ ಭಕ್ತರಾದ ಗ್ರಾಮೀಣ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಡಾ.ಶ್ರೀಶಿವಕುಮಾರಸ್ವಾಮೀಜಿಗಳು 1964ರಲ್ಲಿ ಆರಂಭಿಸಿದ ವಸ್ತು ಪ್ರದರ್ಶನ ಅಂದಿನಿಂದ ಇಂದಿನವರೆಗೆ ಬಹಳ ಸುಸೂತ್ರವಾಗಿ ನಡೆದುಕೊಂಡು ಬರುತ್ತಿದ್ದು,ಇದು ಕೃಷಿ, ಕೈಗಾರಿಕೆಗಳ ಮಾಹಿತಿಯ ಜೊತೆಗೆ,ಮನರಂಜನೆಯನ್ನು ವಸ್ತು ಪ್ರದರ್ಶನಕ್ಕೆ ಬರುವ ಜನರಿಗೆ ಒದಗಿಸಲಿದೆ ಎಂದರು.
ವಸ್ತು ಪ್ರದರ್ಶನದಲ್ಲಿ ಈ ಬಾರಿ ರಾಜ್ಯ ಮತ್ತು ಕೇಂದ್ರ ಸರಕಾರದ 21 ಮಳಿಗೆಗಳು ಹಾಗೂ ಗೃಹಯೋಪಯೋಗಿ ಹಾಗೂ ಆಹಾರ ಪದಾರ್ಥಗಳು ಸೇರಿದ 175 ಖಾಸಗಿ ಮಹಿಳೆಗಳು ಸೇರಿದಂತೆ ಒಟ್ಟು 195 ಮಳಿಗೆಗಳು ಈ ಭಾರಿ ವಸ್ತು ಪ್ರದರ್ಶನದಲ್ಲಿ ನೋಡುಗರಿಗೆ ದೊರೆಯಲಿದ್ದು,ಇದರ ಜೊತೆಗೆ ಸಿದ್ದಗಂಗಾ ಆಸ್ಪತ್ರೆಯಿಂದ ಸಹ ವೈದ್ಯಕೀಯ ಶಿಕ್ಷಣದ ಬದಲಾವಣೆಗಳ ಕುರಿತು ಮಳಿಗೆ ತೆರೆದು ಮಾಹಿತಿ ನೀಡಲಿದೆ ಎಂದು ಬಿ.ಗಂಗಾಧರಯ್ಯ ತಿಳಿಸಿದರು.
ವಸ್ತು ಪ್ರದರ್ಶನ ಟ್ರಸ್ಟ್ನ ಜಂಟಿ ಕಾರ್ಯದರ್ಶಿ ಕೆಂ.ಬಾ.ರೇಣುಕಯ್ಯ ಮಾತನಾಡಿ, 20 ದಿನಗಳ ಕಾಲ ನಡೆಯುವ ಸಿದ್ದಗಂಗಾ ವಸ್ತು ಪ್ರದರ್ಶನದ ತೆರೆದ ರಂಗಮಂದಿರದಲ್ಲಿ 31 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ.ಇವುಗಳಲ್ಲಿ 13 ನಾಟಕಗಳ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಿದ್ದು, ಇದರಲ್ಲಿ 7 ಸಾಮಾಜಿಕ ನಾಟಕಗಳಿಗೆ ಅವಕಾಶ ನೀಡಲಾಗಿದೆ.ಅಲ್ಲದೆ ಬೆಳ್ಳಿ ಪಲ್ಲಕ್ಕಿ ದಿನ ಮಿಮುಕ್ರಿ ಗೋಪಿ ಅವರ ತಂಡದಿಂದ ಇಡೀ ರಾತ್ರಿ ನೆಗೆ ಹಬ್ಬಕಾರ್ಯಕ್ರಮಏರ್ಪಡಿಸಲಾಗಿದೆ.ಅಲ್ಲದೆ ಶಿವರಾತ್ರಿ ದಿನ ಶ್ರೀಮಠದ ವತಿಯಿಂದ ಪ್ರದರ್ಶನಗೊಳ್ಳುವ ಶ್ರೀಬಸವೇಶ್ವರ ನಾಟಕವನ್ನುಇಡೀರಾತ್ರಿ ಪ್ರದರ್ಶನ ಮಾಡಲಾಗುವುದು ಎಂದರು.
ಕೃಷಿ ಮತ್ತುಕೈಗಾರಿಕಾ ವಸ್ತು ಪ್ರದರ್ಶನವೂ ಫೆ.06 ರಂದು ಸಂಜೆ 6:30ಕ್ಕೆ ಆರಂಭವಾಗಲಿದ್ದು, ಶ್ರೀಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಶ್ರೀಸಿದ್ದಲಿಂಗಸ್ವಾಮೀಜಿಗಳ ದಿವ್ಯ ಸಾನಿಧ್ಯ ಹಾಗೂ ಕಿರಿಯ ಶ್ರೀಗಳಾದ ಶ್ರೀಶ್ರೀಶಿವಸಿದ್ದೇಶ್ವರಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಗ್ರಾಮಾಂತರ ವಿಧಾನಸಭಾಕ್ಷೇತ್ರದ ಶಾಸಕರಾದ ಬಿ.ಸುರೇಶಗೌಡ ವಹಿಸಲಿದ್ದಾರೆ. ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್.ಕೆ.ವಿ, ಪಾಲಿಕೆ ಆಯುಕ್ತರಾದ ಶ್ರೀಮತಿ ಶುಭ.ಬಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ದಗಂಗಾ ಮಠದ ವ್ಯವಸ್ಥಾಪಕರಾದ ಎಸ್.ವಿಶ್ವನಾಥಯ್ಯ, ಎಸ್.ಶಿವಕುಮಾರ್, ಕೆ.ಬಿ.ರೇಣುಕಯ್ಯ, ಸಮನ್ವಯಾಧಿಕಾರಿ ಆನಂದ್, ಸಂಚಾಲಕರಾದ ಉಮಾಮಹೇಶ್ ಮತ್ತಿತರರು ಪಾಲ್ಗೊಂಡಿದ್ದರು.
– ಕೆ.ಬಿ.ಚಂದ್ರಚೂಡ
