ತುಮಕೂರು: ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ಅಧಿಕಾರ ಅಲ್ಲವೇ ಅಲ್ಲ, ಪಕ್ಷದ ವರಿಷ್ಠರು ತಮಗೆ ವಹಿಸಿರುವ ಜವಾಬ್ದಾರಿ ಎಂದು ಭಾವಿಸುತ್ತೇನೆ. ಅವರ ನಂಬಿಕೆ ಹುಸಿ ಮಾಡದಂತೆ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ಜೆಡಿಎಸ್ನ ನೂತನ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಹೆಚ್.ನಿಂಗಪ್ಪ ಹೇಳಿದರು.
ಬುಧವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷ ಆರ್.ಸಿ.ಆಂಜನಪ್ಪನವರಿಂದ ಅಧಿಕಾರ ಸ್ವೀಕಾರ ಮಾಡಿದ ಹೆಚ್.ನಿಂಗಪ್ಪ, ತಾವು ಈ ಹಿಂದೆ ಜಿಲ್ಲಾಧ್ಯಕ್ಷರಾಗಿದ್ದಾಗ ಜಿಲ್ಲೆಯಲ್ಲಿ ಜೆಡಿಎಸ್ ಉತ್ತುಂಗ ಸ್ಥಿತಿಯಲ್ಲಿತ್ತು. ಆದರೆ ಈಗಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಯೇ ಬೇರೆ, ಅದಕ್ಕೆ ಹೊಂದಿಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.

ಜಿಲ್ಲಾಧ್ಯಕ್ಷ ಸ್ಥಾನವನ್ನು ಅಧಿಕಾರ ಎಂದು ಭಾವಿಸಿಲ್ಲ, ಪಕ್ಷದ ಕೆಲಸ ಮಾಡಲು, ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಪಕ್ಷ ಕೊಟ್ಟಿರುವ ಹೊಣೆಗಾರಿಕೆ. ಎಲ್ಲಾ ಕಾರ್ಯಕರ್ತರು ಹೀಗೆ ಭಾವಿಸಿ ಪಕ್ಷವನ್ನು ಕಟ್ಟಿಬೆಳೆಸೋಣ ಎಂದ ಅವರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ನಂತರದ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ಮುಖಂಡರು, ಕಾರ್ಯಕರ್ತರು ಸಂಕಲ್ಪ ಮಾಡಬೇಕಾಗಿದೆ ಎಂದರು.
ಅಧಿಕಾರ ಹಸ್ತಾಂತರಿಸಿ ಮಾತನಾಡಿದ ನಿರ್ಗಮಿತ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಎಂಟು ವರ್ಷ ಕಾಲ ಪಕ್ಷವು ನನಗೆ ಜಿಲ್ಲಾಧ್ಯಕ್ಷ ಸ್ಥಾನದ ಅವಕಾಶ ನೀಡಿತ್ತು. ಈ ಅವಧಿಯಲ್ಲಿ ತಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿದ ಬಗ್ಗೆ ತೃಪ್ತಿ ಇದೆ. ಮುಂದೆ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತೇನೆ, ನೂತನ ಅಧ್ಯಕ್ಷರಿಗೆ ಬೆಂಬಲವಾಗಿರುತ್ತೇನೆ ಎಂದರು.
ತಮ್ಮ ಅವಧಿಯಲ್ಲಿ ನಡೆದ ವಿಧಾನಸಭೆ, ಲೋಕಸಭಾ ಚುನಾವಣೆಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್ ಸದೃಢವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಲ್ಲೂ ನಾವು ಗೆಲುವು ಪಡೆದು ಹೆಚ್.ಡಿ.ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಪಕ್ಷದ ಕೆಲಸ ಮಾಡೋಣ ಎಂದು ಹೇಳಿದರು.
ಡಿ.ನಾಗರಾಜಯ್ಯ, ಸುಧಾಕರಲಾಲ್, ಎಸ್.ಆರ್.ಗೌಡ, ಗುಬ್ಬಿನಾಗರಾಜು, ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಆರ್.ನಾಗರಾಜು, ಹೆಚ್ಡಿಕೆ ಮಂಜುನಾಥ್, ಧರಣೇಂದ್ರಕುಮಾರ್, ಮೋಹನ್ಕುಮಾರ್, ಟಿ.ಎಲ್.ಕುಂಭಯ್ಯ, ಕೊಂಡವಾಡಿಚAದ್ರಶೇಖರ್, ಜಗದೀಶ್ನಾಗರಾಜಯ್ಯ, ಸೋಲಾರ್ಕೃಷ್ಣಮೂರ್ತಿ, ಗಂಗಣ್ಣ, ಕೆಂಪರಾಜು, ಭೈರೇಶ್, ವಿಜಯ್ಗೌಡ, ಕುಸುಮಾಜಗನ್ನಾಥ್, ಲೀಲಾವತಿ, ತಾಹೇರಾ ಕುಲ್ಸಂ, ಮಧುಗೌಡ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
