ತುಮಕೂರು: ಪರಿಸರ ಉಳಿಸಬೇಕಾದ ಅಧಿಕಾರಿಗಳೇ ಪರಿಸರ ನಾಶಕ್ಕೆ ಕಾರಣವಾಗುತ್ತಿರುವುದು ಬೇಸರ ತರುತ್ತಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ಬೆಳಿಗ್ಗೆ ಅವರು ತುಮಕೂರು ನಗರದ ಹೊರವಲಯ ಅಮಲಾಪುರದಲ್ಲಿರುವ ಭೈರವ ಕ್ರಷರ್ಗೆ ಅನಿರೀಕ್ಷಿತ ಭೇಟಿ ನೀಡಿ, ಸ್ಥಳದಲ್ಲೇ ನಡೆಯುತ್ತಿರುವ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿರುವುದನ್ನು ಗಂಭೀರವಾಗಿ ಗಮನಿಸಿ ಮಾತನಾಡಿದ ಅವರು, ಕ್ರಷರ್ ಮಾಲೀಕರು ಬೆಟ್ಟ-ಗುಡ್ಡಗಳನ್ನು ಕೊರೆದು ಪರಿಸರವನ್ನು ಹಾಳುಮಾಡುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಬೆಟ್ಟಗಳನ್ನು ನಾಶಮಾಡಲು ನಿಮಗೆ ಯಾರು ಅನುಮತಿ ಕೊಟ್ಟಿದ್ದಾರೆ? ಬಫರ್ ವಲಯ ನಿಯಮವನ್ನೂ ಕೂಡ ಪಾಲಿಸದೇ ಗಣಿಗಾರಿಕೆ ನಡೆಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲು ಕಾರಣರಾಗುತ್ತಿದ್ದೀರಾ? ಎಂದು ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ಗಣಿ ಮತ್ತು ಭೂವಿಜ್ಞಾನ ಇಲಾಖೆ,ಕಂದಾಯ,ಮಾಲಿನ್ಯ ಇಲಾಖೆಗಳ ಸಮನ್ವಯದ ಕೊರತೆಯಿಂದ ಕ್ರಷರ್ ಮಾಲೀಕರಿಗೆ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರು.

ಅರಣ್ಯ, ಕಂದಾಯ, ಗಣಿಗಾರಿಕೆ ಸೇರಿದಂತೆ ಸಂಬAಧಿಸಿದ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಪರಿಸರವನ್ನು ಸಂರಕ್ಷಿಸಬೇಕಾದವರೇ ಕ್ರಷರ್ಗಳಿಗೆ ಅನುಮತಿ ನೀಡಿ ಪರಿಸರ ನಾಶಕ್ಕೆ ಮುಂದಾಗುತ್ತಿದ್ದಾರೆ. ಅಧಿಕಾರಿಗಳು ಇನ್ನು ಮುಂದಾದರೂ ಪರಿಸರ ಕಾಳಜಿವಹಿಸಿ ಸ್ಥಳೀಯ ಜನರ ಬದುಕಿಗೆ ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದರು.
ಕ್ರಷರ್ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬ ಕಾರ್ಮಿಕರಿಗೂ ಕ್ರಷರ್ ಮಾಲೀಕರು ಕಡ್ಡಾಯವಾಗಿ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.
ಇದೇ ವೇಳೆ ಅರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮಲಾಪುರದ ಹಕ್ಕಿ–ಪಿಕ್ಕಿ ಜನಾಂಗದ ನಿವಾಸಿಗಳನ್ನು ಭೇಟಿ ಮಾಡಿ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ 44 ಕುಟುಂಬಗಳಿಗೆ ಮನೆ, ಶಾಲೆ, ಬಿ.ಪಿ.ಎಲ್.ಪಡಿತರ ಚೀಟಿ, ವಿಧವಾ ವೇತನ, ವೃದ್ಧಾಪ್ಯ ವೇತನಗಳನ್ನು ಕಲ್ಪಿಸುವಂತೆ ತಹಸೀಲ್ದಾರ್ ಪಿ.ಎಸ್.ರಾಜೇಶ್ವರಿಗೆ ನಿರ್ದೇಶನ ನೀಡಿದರು.ಕೆರೆ ಒತ್ತುವರಿ ಆಗಿರುವುದನ್ನು ಸಹ ಪತ್ತೆ ಮಾಡಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗೆ ಇದನ್ನು ಸರಿಪಡಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಉಪರಿಜಿಸ್ಟ್ರಾರ್ ಎನ್.ವಿ.ಅರವಿಂದ್,ಅಪರ ಜಿಲ್ಲಾಧಿಕಾರಿ ಡಾ||ಎನ್.ತಿಪ್ಪೇಸ್ವಾಮಿ, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀ ನಾರಾಯಣ,ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
–ಚಂದ್ರಚೂಡ ಕೆ.ಬಿ.
