ತುಮಕೂರು:ಹವ್ಯಕ ಬ್ರಾಹ್ಮಣ ಸಮುದಾಯದ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಧಾರ್ಮಿಕ ಆಚರಣೆಗಳು ಸಮೃದ್ಧವಾಗಿದ್ದು, ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತುಮಕೂರು ಜಿಲ್ಲಾ ಹವ್ಯಕ ಸಮುದಾಯದ ಅಧ್ಯಕ್ಷೆ ಮುಕ್ತಾ ಹೆಗಡೆ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಶ್ರೀ ಶಂಕರಮಠದಲ್ಲಿ ಆಯೋಜಿಸಿದ್ದ ತುಮಕೂರು ಜಿಲ್ಲಾ ಹವ್ಯಕ ಸಮುದಾಯದ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಹವ್ಯಕ ಸಮುದಾಯದ ವ್ಯಕ್ತಿಗಳು ತಮ್ಮ ಸ್ವಸಾಮರ್ಥ್ಯ, ಪರಿಶ್ರಮ, ಪ್ರತಿಭೆಯಿಂದ ನಾಡಿನ ವಿವಿಧೆಡೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಯಕ್ಷಗಾನ, ಕಲೆ, ಸಾಹಿತ್ಯ, ತಾಳಮದ್ದಳೆ, ನೃತ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಇಂತಹ ಶ್ರೀಮಂತ ಹವ್ಯಕ ಸಮುದಾಯದ ಆಚಾರ-ವಿಚಾರಗಳನ್ನು ಉಳಿಸಿ, ಬೆಳೆಸುವುದರ ಜೊತೆಗೆ ಅದನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಇದನ್ನು ಓದಿ: ತುಮಕೂರು: ಯುಪಿಎಸ್ಸಿ ಸಾಧಕರ ಅನುಭವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ- ಮುರಳೀಧರಹಾಲಪ್ಪ
ಮುಖ್ಯ ಅತಿಥಗಳಾಗಿದ್ದ ಜಿಲ್ಲಾ ಬ್ರಾಹ್ಮಣಸಭಾದ ಅಧ್ಯಕ್ಷ ಹೆಚ್.ಎನ್. ಚಂದ್ರಶೇಖರ್ ಮಾತನಾಡಿ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲಿ ಅತ್ಯಂತ ಸಕ್ರಿಯರಾಗಿರುವ ಹವ್ಯಕ ಸಮುದಾಯ ಶ್ರೀಮಂತ ಪರಂಪರೆ ಹೊಂದಿದೆ. ಇದೇ ರೀತಿ ಬ್ರಾಹ್ಮಣ ಸಮುದಾಯಕ್ಕೆ ಸಂಘಟನೆ ಅತ್ಯಗತ್ಯ ಹಾಗೂ ಅನಿವಾರ್ಯವಾಗಿದ್ದು ಎಲ್ಲ ಉಪಪಂಗಡಗಳು ಒಂದಾಗಿ ಕಾರ್ಯೋನ್ಮುಖವಾಗಬೇಕಿದೆ ಎಂದರು.
ಹವ್ಯಕ ಸಮುದಾಯ 25 ವರ್ಷಗಳನ್ನು ಪೂರೈಸಿದ ನೆನಪಿಗೆ ‘ರಜತ ರಥ’ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಡಾ. ಲಲಿತಾಅವಧಾನಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಡಾ. ಪ್ರಶಾಂತ್ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
– ಚಂದ್ರಚೂಡ ಕೆ.ಬಿ
