ತುಮಕೂರು: ವೀರಶೈವ ಲಿಂಗಾಯತರ ಧರ್ಮ ಹಿಂದೂ. ದೇವರ ಪೂಜೆ ಮಾಡುವವರು, ಹಣೆಗೆ ತಿಲಕ ಇಡುವವರೆಲ್ಲಾ ಹಿಂದೂಗಳೇ. ಹಿಂದೂ ಧರ್ಮ ನಮ್ಮ ಡಿಎನ್ಎನಲ್ಲೇ ಇದೆ. ಕೆಲವರು ವೀರಶೈವ ಲಿಂಗಾಯತರು ಹಿಂದುಗಳಲ್ಲ ಎಂದು ಗೊಂದಲ ಮೂಡಿಸುತ್ತಿದ್ದಾರೆ, ಅದು ತಪ್ಪು ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರ ವೀರಶೈವ ಸಮಾಜ ಸೇವಾ ಸಮಿತಿ ಗುರುವಾರ ನಗರದ ರೇಣುಕಾ ವಿದ್ಯಾಪೀಠ ಆವರಣದಲ್ಲಿ ಏರ್ಪಡಿಸಿದ್ದ ಶಮೀ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಕೆಲವರು ವೀರಶೈವರು ಬೇರೆ, ಲಿಂಗಾಯತರೂ ಬೇರೆ ಎಂದು ಮತ್ತಷ್ಟು ಗೊಂದಲ ಮೂಡಿಸುತ್ತಿದ್ದಾರೆ. ಸಿದ್ಧಗಂಗಾ ಮಠದ ಶಿವೈಕ್ಯರಾದ ಡಾ.ಶಿವಕುಮಾರ ಸ್ವಾಮೀಜಿಗಳೇ ಹೇಳಿದ್ದರು, ವೀರಶೈವರು, ಲಿಂಗಾಯತ ಬೇರೆಬೆರೆಯಲ್ಲ, ಎರಡೂ ಒಂದೇ ಎಂದು. ಹಳ್ಳಿಗಳಲ್ಲಿ ಲಿಂಗಾಯತರೆಂದು, ನಗರಗಳಲ್ಲಿ ವೀರಶೈವರೆಂದು ಹೇಳಿಕೊಳ್ಳುತ್ತಾರೆ, ಎರಡೂ ಒಂದೇ ಎಂದು ಹೇಳಿದರು.
ಕನಿಷ್ಠ ಧಾರ್ಮಿಕ ಸಮಾರಂಭಗಳಲ್ಲಾದರೂ ನೀವೆಲ್ಲಾ ಸಾಂಪ್ರದಾಯಕ ಉಡುಪುಗಳನ್ನು ಧರಿಸಿ ಬರಬೇಕು. ನಿಮ್ಮನ್ನು ಮಕ್ಕಳು ಅನುಸರಿಸಬೇಕು. ಮಕ್ಕಳಿಗೆ ನಮ್ಮ ಸಂಸ್ಕಾರ, ಆಚಾರವಿಚಾರ ಅನುಸರಿಸಲು ತಿಳಿಸುವುದು ಬಹುಮುಖ್ಯವಾಗಿದೆ. ವೀರಶೈವರು ಕಡ್ಡಾಯವಾಗಿ ಇಷ್ಟಲಿಂಗ ಧರಿಸಬೇಕು. ಮಠದಿಂದ ನಾವೇ ಇಷ್ಟಲಿಂಗ ಗಣತಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.
ಸೊಗಡು ಶಿವಣ್ಣ ಕೋರಿ ಮಂಜುನಾಥ್, ಟಿ.ಬಿ.ಹರೀಶ್, ಗೌರವ ಕಾರ್ಯದರ್ಶಿ ಡಿ.ಜೆ.ಶಶಿಧರನ್, ಜಿ.ಕೆ.ಸ್ವಾಮಿ, ತುಮಕೂರು ವೀರಶೈವ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಬಿ.ಎಸ್.ಮಂಜುನಾಥ್, ಹೆಚ್.ಆರ್.ನಾಗೇಶ್, ಟಿ.ಆರ್.ಸದಾಶಿವಯ್ಯ, ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
