ತುಮಕೂರು: ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಶಿವಜ್ಞಾನದ ಅರಿವು ಮತ್ತು ಆಚರಣೆ ಮುಖ್ಯ. ಚಿಂತೆ ಚಿಂತನಗೊಂಡಾಗ ಬಾಳು ವಿಕಾಸಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಜರುಗಿದ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ-ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಚಿನ್ನವಿಲ್ಲದೇ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಲಾಗದು. ಶ್ರದ್ಧಾವಂತರಾದ ಭಾರತೀಯರು ಮಣ್ಣು, ನೀರು, ಗಾಳಿ, ಬೆಂಕಿ, ಕಲ್ಲುಗಳಲ್ಲಿ ದೇವರನ್ನು ಕಂಡು ಪೂಜಿಸಿದವರು. ದೇವರ ಮೇಲಿನ ನಂಬಿಕೆ ಶಾಶ್ವತ ನಂದಾದೀಪ. ನಂಬಿಗೆ ವಿಶ್ವಾಸಗಳನ್ನು ಎಂದಿಗೂ ಕಳೆದುಕೊಳ್ಳಬಾರದು. ಮನಸ್ಸೆಂಬ ಚಂಚಲ ಅಲೆಗಳ ಹೊಯ್ದಾಟವನ್ನು ಶಾಂತ ಪ್ರಶಾಂತಗೊಳಿಸುವ ಮಾರ್ಗವೇ ಆಧ್ಯಾತ್ಮವಾಗಿದೆ ಎಂದು ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಮನುಷ್ಯನಿಗೆ ಏನೆಲ್ಲ ಸಂಪತ್ತು ಸಂಪನ್ಮೂಲ ಸೌಲಭ್ಯಗಳಿದ್ದರೂ ಬದುಕು ಹರ್ಷದಾಯಕವಾಗಿಲ್ಲ. ಜ್ಯೋತಿ ಉರಿದು ಬೆಳಕು ಕೊಡುವಂತೆ ಸಂತ ಮಹಂತರು ಬದುಕಿ ಬಾಳುವ ಜನ ಸಮುದಾಯಕ್ಕೆ ಆದರ್ಶ ವಿಚಾರ ಧಾರೆಗಳನ್ನು ಕೊಟ್ಟಿದ್ದಾರೆ. ಅವರು ತೋರಿದ ದಾರಿಯಲ್ಲಿ ನಡೆದರೆ ಸಾಕು. ಜೀವನ ಸಾರ್ಥಕಗೊಳ್ಳುತ್ತದೆ. ತುಮಕೂರು ನಗರದಲ್ಲಿ ಧನುರ್ಮಾಸ ನಿಮಿತ್ಯ ಐದು ದಿನಗಳ ಕಾರ್ಯಕ್ರಮ ಸಂಯೋಜಿಸಿರುವುದು ತಮಗೆ ಹರುಷ ತಂದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾತನಾಡಿ ಸಂಘರ್ಷದಿಂದ ಕೂಡಿದ ಮನುಷ್ಯನ ಬಾಳಿಗೆ ನೆಮ್ಮದಿ ಶಾಂತಿ ದೊರಕಲು ಆಧ್ಯಾತ್ಮ ಚಿಂತನಗಳು ಅವಶ್ಯಕ. ಭಾರತೀಯ ಉತ್ಕೃಷ್ಟ ಸಂಸ್ಕೃತಿಯನ್ನು ನಾಡಿನ ಪೀಠ ಮಠಗಳು ಬೆಳೆಸುತ್ತಾ ಬಂದಿವೆ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಶ್ರೀ ರಂಭಾಪುರಿ ಪೀಠದ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ದೂರದೃಷ್ಟಿ ಮತ್ತು ವಿಶಾಲ ಚಿಂತನಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತಿವೆ. ಇಂದಿನ ಜಗದ್ಗುರುಗಳು ನಿರಂತರ ಶ್ರಮಿಸಿ ನಾಡು ನುಡಿ ಧರ್ಮ ಕಟ್ಟಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಸಂತೋಷ ಉಂಟು ಮಾಡುತ್ತದೆ ಎಂದರು.
ದಿನದರ್ಶಿನಿ ಬಿಡುಗಡೆ ಮಾಡಿದ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಸತ್ಕಾರ್ಯಗಳ ಮೂಲಕ ಮನುಷ್ಯ ಮುನ್ನಡೆದಾಗ ಎಲ್ಲೆಡೆ ಶಾಂತಿ ಸಮಾಧಾನ ನೆಲೆಗೊಳ್ಳಲು ಸಾಧ್ಯ. ಸತ್ಯ ಶುದ್ಧ ಕಾಯಕದಿಂದ ಬದುಕಿಗೆ ನಿಜವಾದ ಬೆಲೆ ಬರುತ್ತದೆ. ರಂಭಾಪುರಿ ಜಗದ್ಗುರುಗಳ ಶ್ರಮ ಸಂಚಾರ ಮತ್ತು ಬೋಧಾಮೃತ ನಮ್ಮೆಲ್ಲರ ಉನ್ನತಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ಟಿ.ಆರ್.ಸದಾಶಿವಯ್ಯ, ಡಾ.ಎಸ್.ಪರಮೇಶ್, ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕೆ.ಬಿ.ಜಯಣ್ಣ, ಅವರು ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ಜೀವನದಲ್ಲಿ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದೇ ಇದ್ದರೆ ಜೀವನ ವ್ಯರ್ಥ. ಸುಖ ಶಾಂತಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವರಿಗೂ ಅವಶ್ಯಕವಾಗಿವೆ ಎಂದರು. ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು, ಶಿವರುದ್ರ ಶಿವಾಚಾರ್ಯರು, ಅಂಬಲದೇವರಹಳ್ಳಿ ಮಠದ ಉಜ್ಜನೀಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
