
ಒಂದೇ ಮನಸ್ಸಿನ ಎರಡು ಸ್ಥಿತಿಗಳು
ಬಿಲ್ ಗೇಟ್ಸ್, ಅಂಬಾನಿ,ರಜನಿಕಾಂತ್ ಅಂಥವರು ತಮ್ಮ ಸಾಧನೆಯಿಂದ ತಲುಪಿರುವ ಎತ್ತರವನ್ನು ನೋಡುವ ಜನರು ನಾವು ಸಹ ಹೀಗೆ ಅವರುಗಳು ತಲುಪಿರುವ ಎತ್ತರಕ್ಕೆ ತಲುಪಬೇಕು ಎಂದು ಅಂದುಕೊಳ್ಳುತ್ತಾರೆ. ನಂತರ ಆ ಗುರಿಯನ್ನು ತಲುಪಲು ಇರುವ ಅಗಾಧ ಸ್ವರೂಪದ ಮಾರ್ಗವನ್ನು (ಅಂದರೆ ಕಷ್ಟಗಳು ಹಾಗೂ ಅಡೆತಡೆಗಳು) ನೋಡಿ ಅದು ಸಾದ್ಯವೇ? ಎನ್ನುವ ಸಂಶಯದಿಂದಲೋ ಅಥವಾ ನನ್ನಿಂದ ಅಸಾಧ್ಯವೆಂಬ ನಿರ್ಣಯಕ್ಕೆ ಬರುತ್ತಾನೆ….
ಹೌದಲ್ಲವಾ….ಮನುಷ್ಯನು ತನ್ನ ಜೀವನದಲ್ಲಿ ಬರುವ ಎಲ್ಲಾ ಭೌತಿಕ ಅಭೌತಿಕ ವಿಷಯಗಳು- ಅಭಿರುಚಿಗಳು ಹಾಗೂ ತನ್ನೆಲ್ಲ ಕಲ್ಪನೆಗಳ ವಿಷಯಗಳು, ಪ್ರಾಥಮಿಕ ಹಂತದಲ್ಲಿ ಸರಿ ಅನಿಸುತ್ತವೇ ಮತ್ತು ಮನಸ್ಸಿಗೆ ಇಷ್ಟವಾಗುತ್ತವೆ ಕಾರಣ ಆ ವಿಷಯಗಳ ಸ್ವಭಾವವು ಹಾಗೂ ಅದರಲ್ಲಿನ ಸಕಾರಾತ್ಮಕ ಗುಣದ ಆಯಾಮಗಳನ್ನು ಮಾತ್ರವೇ ನೋಡಿ ಹಾಗೂ ಅದು ಮನಸ್ಸಿನಲ್ಲಿ ಉಂಟು ಮಾಡುವ ಸಂತೋಷದ ಕಾರಣಕ್ಕೆ ಆ ಎಲ್ಲಾ ವಿಷಯಗಳು ಸರಿ ಎನ್ನುವ ನಿರ್ಧಾರಕ್ಕೆ ಬಂದು ಅದರೊಳಗೆ ಸ್ವಲ್ಪ ಸಮಯ ಜೀವಿಸುತ್ತಿರುತ್ತಾನೆ.
ಹೀಗೆ ಸಮಯವು ಸರಿದ ನಂತರ ತಾನು ಸರಿ ಎಂದುಕೊಂಡು ಸುಖ ಪಡುತ್ತಿರುವ ವಿಷಯದಲ್ಲಿನ ನಿರಂತರ ಒಳಗೊಳ್ಳುವಿಕೆಯಿಂದ ಆ ಎಲ್ಲಾ ವಿಷಯಗಳ ಅಗಾಧ ಸ್ವರೂಪ ತನ್ನ ಅರಿವಿಗೆ ಬರತೊಡಗಿದ ನಂತರ, ತನ್ನ ಸಾಮರ್ಥ್ಯ ಅರಿವಿನ ಜೊತೆಗೆ ಆ ಎಲ್ಲಾ ವಿಷಯಗಳನ್ನು ಒಪ್ಪಿಕೊಳ್ಳಲು ಆಗದೆ ಅದನ್ನು ಬಿಟ್ಟಿರಲು ಆಗದೆ ಒಂದು ರೀತಿಯ ಕೆಟ್ಟ ಅನುಭವಕ್ಕೆ ಒಳಗಾಗುತ್ತಾನೆ.
ಅಂದರೆ ಉದಾಹರಣೆಗೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಯುವಜನತೆ, ಪ್ರೀತಿಯಲ್ಲಿ ಬೀಳುವಾಗ, ಮೊದಲು ಆ ವ್ಯಕ್ತಿಯನ್ನು ಒಂದೇ ಆಯಾಮದಿಂದ ನೋಡಿ, ಅವರು ಒಬ್ಬರಿಗೊಬ್ಬರು, ಸರಿಯಾದ ಜೋಡಿಯಾಗುತ್ತೇವೆ ಎಂಬ ಕ್ಷಣಿಕ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಪ್ರೀತಿಯು ಮದುವೆ ಅಂತಕ್ಕೇ ತಲುಪಿ ಅವರೊಂದಿಗೆ ಜೀವನ ಪರ್ಯಂತ ಜೀವಿಸಬೇಕು ಎಂದಾಗ ಮಾತ್ರವೇ ಅವರ, ಜಾತಿ ಅವರ ತಂದೆ ತಾಯಿಗಳ ಅಭಿರುಚಿಗಳು, ತನ್ನ ಕುಟುಂಬಕ್ಕೆ ಹೊಂದಿಕೆಯಾಗುತ್ತದೆಯೇ ? ಹಾಗೂ ಈ ಸಂಬಂಧವನ್ನು ನಿಭಾಯಿಸುವ ಸಾಮರ್ಥ್ಯ ತನಗೆ ಇದೆಯಾ ? ಎಂಬ ಪ್ರಶ್ನೆ ಉದ್ಭವಿಸಿ, ಆ ಸಂಬಂಧವನ್ನು ಮುಂದುವರೆಸುವುದಾಗಲಿ ಅಥವಾ ಒಪ್ಪಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪುತ್ತಾನೆ.
ಹೀಗೆ ಇದೇ ಮನುಷ್ಯ ತನ್ನ ಪ್ರಾಥಮಿಕ ಹಂತದಲ್ಲಿ ತನಗೆ ಇಷ್ಟವಾದ ವಿಷಯಗಳ ಜೊತೆ ಖುಷಿಪಟ್ಟು ನಂತರ ತನ್ನ ನಿರ್ಧಾರವನ್ನೇ ತಾನೇ ಒಪ್ಪಿಕೊಳ್ಳಲಾಗದೆಯಿರುವುದಕ್ಕೆ ಮುಖ್ಯ ಕಾರಣ ಆ ವಿಷಯದ ಮೇಲಿನ ಒಂದೇ ರೀತಿಯ ಆಯಾಮದ ಗ್ರಹಿಕೆ. ಅಂದರೆ ಮನುಷ್ಯರು ಪ್ರಾರಂಭದಲ್ಲಿ ಆ ವಿಷಯದ ಎಲ್ಲಾ ಆಯಾಮಗಳನ್ನು ಅರ್ಥಮಾಡಿಕೊಳ್ಳದೆ ತನಗೆ ಇಷ್ಟವಾದುದನ್ನು ಮಾತ್ರವೇ ನೋಡಿ ಆ ವಿಷಯ ಸರಿಯಾಗಿದೆ ಎಂದು ನಿರ್ಧರಿಸಿಬಿಡುತ್ತಾನೆ. ನಂತರ ತಾನೇ ಸರಿ ಎಂದುಕೊಂಡಿದ್ದನ್ನು ತಾನೇ ಒಪ್ಪಿಕೊಳ್ಳಲಾಗದ ಸಂದಿಗ್ದತೆಯಲ್ಲಿರುತ್ತಾನೆ.
ಇಲ್ಲಿ ಈ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಮಾಡಬೇಕಿರುವುದು ಏನಂದರೆ, ಮೊದಲು ನಾವು ಗ್ರಹಿಸುವ, ನೋಡುವ ಅಥವಾ ಇಷ್ಟಪಡುವ ಆಯಾಮ ಬದಲಾಗಬೇಕು ಹಾಗೂ ಆ ವಿಷಯಕ್ಕೆ ಸಂಬಂಧಿಸಿದ ಒಂದು ಕನಿಷ್ಠ ಸಾಮರ್ಥ್ಯ ನನ್ನಲ್ಲಿ ಇದೆಯಾ ಎನ್ನುವುದನ್ನು ತಿಳಿದುಕೊಳ್ಳಬೇಕು ಹಾಗೂ ಆ ವಿಷಯವನ್ನು ಸರಿಯಾಗಿ ನಿಭಾಯಿಸಲು ಬೇಕಾಗಿರುವ ಕೆಲವು ಪೂರಕ ವಿಷಯಗಳನ್ನು ಹೊಂದಿರಬೇಕಾಗುತ್ತದೆ ನಂತರವೇ ಆ ವಿಷಯದೊಂದಿಗೆ ಗುರುತಿಸಿಕೊಳ್ಳುವುದು ಒಳ್ಳೆಯದು. ಅಂದರೆ ಒಬ್ಬ ವ್ಯಕ್ತಿ ಉತ್ತಮ ಓಟಗಾರ, ಆಗಬೇಕೆಂದರೆ ಕನಿಷ್ಠ ಪಕ್ಷ ಅವನ ಕಾಲುಗಳು ಸದೃಢವಾಗಿರಬೇಕು. ಅವನ ಆರೋಗ್ಯವು ಸ್ಥಿರವಾಗಿರಬೇಕು ಅಂದರೆ ಒಂದು ಸಾಮಾನ್ಯ ಅರ್ಹತೆಯನ್ನು ಹೊಂದಿರಬೇಕು. ನಂತರವೇ ಆ ವಿಷಯವನ್ನು ಇಷ್ಟಪಟ್ಟು ಅದರೊಂದಿಗೆ ಮುಂದುವರೆಯುವುದು ಉತ್ತಮವಲ್ಲವೇ……!
– ಕೀರ್ತಿ ಎಂ. ಹಾಸನ