ಹಾಸನ, ಅಕ್ಟೋಬರ್ 10: ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ವೇಳೆ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಸರ್ಕಾರಿ ನೌಕರರನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಅಮಾನತ್ತಿನಲ್ಲಿಟ್ಟಿದ್ದಾರೆ.
ಮಹೋತ್ಸವದ ಸಂದರ್ಭದಲ್ಲಿ ದೇವಾಲಯದ ಸ್ವಚ್ಛತೆಯ ಮೇಲ್ವಿಚಾರಣೆಯ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಆನಂದ್ (ವಾರ್ಡನ್, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ದೊಡ್ಡಬೆಮ್ಮತ್ತಿ, ಅರಕಲಗೂಡು) ಹಾಗೂ ರಮೇಶ್ (ವಾರ್ಡನ್, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಹಳೆಬೀಡು, ಬೇಲೂರು) ಅವರು ತಮ್ಮ ಗುರುತಿನ ಚೀಟಿಗಳನ್ನು ಬೇರೆಯವರಿಗೆ ನೀಡಿ, ಅನ್ಯ ವ್ಯಕ್ತಿಗಳನ್ನು ದೇವಾಲಯದ ಆವರಣದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದ್ದರೆಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಘಟನೆ ಕುರಿತು ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ಸರ್ಕಾರಿ ನೌಕರರ ನಡತೆ ನಿಯಮಾವಳಿಯ ಉಲ್ಲಂಘನೆ ಎಸಗಿರುವುದು ಸ್ಪಷ್ಟವಾಗಿದ್ದು, ಇದನ್ನು ಕರ್ತವ್ಯ ಲೋಪ ಮತ್ತು ಅಧಿಕಾರದ ದುರುಪಯೋಗ ಎಂದು ಪರಿಗಣಿಸಲಾಗಿದೆ.
ಅಮಾನತ್ತಿನ ಅವಧಿಯಲ್ಲಿ ಇವರಿಗೆ ನಿಯಮಾನುಸಾರ ಜೀವನಾಧಾರ ಭತ್ಯೆ (subsistence allowance) ನೀಡಲು ಜಿಲ್ಲಾ ಆಡಳಿತವು ಅನುಮತಿ ನೀಡಿದೆ.
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಈ ರೀತಿಯ ಕರ್ತವ್ಯ ಲೋಪದಿಂದ ಭದ್ರತಾ ವ್ಯವಸ್ಥೆಗೆ ಧಕ್ಕೆ ಉಂಟಾಗಬಹುದೆಂಬ ಕಾರಣಕ್ಕೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ

[…] […]