ಉಡುಪಿ: ಪ್ರವಾಸಕ್ಕೆಂದು ಉಡುಪಿ ಬಂದಿದ್ದ ಹಾಸನದ ಯುವಕರ ಪೈಕಿ ಇಬ್ಬರು ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದ ದುರ್ಘಟನೆ ಶುಕ್ರವಾರ ಸಂಜೆ ಮಲ್ಪೆ ಬೀಚ್ನಲ್ಲಿ ನಡೆದಿದೆ.
ನಾಪತ್ತೆಯಾಗಿರುವ ಯುವಕನನ್ನು ಮಿಥುನ್ (19) ಎಂದು ಗುರುತಿಸಲಾಗಿದ್ದು, ಅವರು ದ್ವಿತೀಯ ಬಿಎ ವಿದ್ಯಾರ್ಥಿ. ಅವರ ಸ್ನೇಹಿತ ಶಶಾಂಕ್ (22), ಪದವಿ ಮುಗಿಸಿರುವ ಯುವಕನ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಹಿತಿಯ ಪ್ರಕಾರ, ಹಾಸನದಿಂದ 7 ಮಂದಿ ಯುವಕರ ತಂಡ ಗುರುವಾರ ರಾತ್ರಿ ಪ್ರವಾಸಕ್ಕಾಗಿ ಹೊರಟಿದ್ದರು. ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಕೊರಗಜ್ಜ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನದ ಊಟದ ನಂತರ ಸಂಜೆ ವೇಳೆ ಮಲ್ಪೆ ಬೀಚ್ಗೆ ಆಗಮಿಸಿದ್ದರು.
ಇದನ್ನು ಓದಿ: ಭಾರತಕ್ಕೆ ಬರುತ್ತಿದೆ ಬ್ರಹ್ಮೋಸ್ ಮೀರಿಸುವ ಹೈಪರ್ಸಾನಿಕ್ ಕ್ಷಿಪಣಿ – ಪಾಕಿಸ್ತಾನದಲ್ಲಿ ಆತಂಕ
ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ವೇಳೆ, 6 ಮಂದಿ ನೀರಿಗೆ ಇಳಿದಿದ್ದರು. ಈ ವೇಳೆ ಮಿಥುನ್ ಮತ್ತು ಶಶಾಂಕ್ ನೀರಿನ ಒಳಗೆ ಸ್ವಲ್ಪ ದೂರ ಈಜುತ್ತ ಮುಂದೆ ಹೋಗಿದ್ದು, ಅಕಸ್ಮಾತ್ ಬೃಹತ್ ಅಲೆಯ ಸೆಳೆತಕ್ಕೆ ಸಿಲುಕಿ ಇಬ್ಬರೂ ಕೊಚ್ಚಿ ಹೋಗಿದ್ದಾರೆ.
ಸ್ಥಳೀಯರು ಹಾಗೂ ಈಶ್ವರ ಮಲ್ಪೆ ಲೈಫ್ಗಾರ್ಡ್ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ಶಶಾಂಕ್ರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಮಿಥುನ್ ಕಾಣೆಯಾಗಿದ್ದು, ಮುಳುಗು ತಜ್ಞರು, ಈಶ್ವರ ಮಲ್ಪೆ ತಂಡ ಮತ್ತು ಪೊಲೀಸ್ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಘಟನೆಯಿಂದ ಪ್ರವಾಸಿಗರು ಆತಂಕಕ್ಕೀಡಾಗಿದ್ದು, ಮಲ್ಪೆ ಬೀಚ್ನಲ್ಲಿ ಎಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
