ಹಾಸನ, ಮಾ.17: ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ಜಿಲ್ಲಾ ಘಟಕ ಹಾಸನ ಹಾಗೂ ಉದಯ ವರದಿ ಪತ್ರಿಕಾ ಬಳಗದ ಸಹಯೋಗದಲ್ಲಿ ಹಾಸನದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಭಾನುವಾರ ಆಯೋಜಿಸಿದ್ದ ಯುಗಾದಿ ಕಾವ್ಯ ಸಂಭ್ರಮ ಕಾವ್ಯ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ 35ಕ್ಕೂ ಹೆಚ್ಚು ಕವಿಗಳು ಮತ್ತು ಕವಯಿತ್ರಿಯರು ಭಾಗವಹಿಸಿ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿ ಮೆಚ್ಚುಗೆ ಪಡೆದರು.

ಕಾರ್ಯಕ್ರಮವನ್ನು ಆಯೋಜಿಸಿದ್ದ ಬರಹಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುಂದರೇಶ್ ಡಿ. ಉಡುವಾರೆ, ಗೌರವಾಧ್ಯಕ್ಷರು ಹಾಗೂ ಉದಯ ವರದಿ ಪತ್ರಿಕಾ ಸಂಪಾದಕರಾದ ವೆಂಕಟೇಶ್, ಚನ್ನರಾಯಪಟ್ಟಣ ತಾಲ್ಲೂಕು ಅಧ್ಯಕ್ಷ ಡಾ. ಬರಾಳು ಶಿವರಾಂ, ಜಿಲ್ಲಾ ಕಾರ್ಯದರ್ಶಿ ದಿಬ್ಬೂರು ರಮೇಶ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಆರ್ ಹಾಗೂ ಗ್ಯಾರಂಟಿ ರಾಮಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾವ್ಯ ಸ್ಪರ್ಧೆಗೆ ಸಾಹಿತಿ ಗೊರೂರು ಅನಂತರಾಜು, ಕವಿ ಎನ್.ಎಲ್. ಚನ್ನೇಗೌಡ ಹಾಗೂ ಕವಯಿತ್ರಿ ರಾಜೇಶ್ವರಿ ಹುಲ್ಲೇನಹಳ್ಳಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸ್ಪರ್ಧೆಯಲ್ಲಿ ಶೈಲಜಾ ಲೋಕೇಶ್ ಗೌಡ (ಮಡಬಲು) ಪ್ರಥಮ, ಚಂದ್ರಕಲಾ (ಆಲೂರು) ದ್ವಿತೀಯ ಹಾಗೂ ಲಲಿತಾ ಎಸ್. (ಸಕಲೇಶಪುರ) ತೃತೀಯ ಸ್ಥಾನ ಪಡೆದು ಪ್ರಶಸ್ತಿ ಗಳಿಸಿದರು.
ಯುಗಾದಿ ಹಬ್ಬದ ಅಂಗವಾಗಿ ನಡೆದ ಈ ಕಾವ್ಯ ಸಂಭ್ರಮ ಸಾಹಿತ್ಯಾಸಕ್ತರಲ್ಲಿ ಉತ್ಸಾಹ ಮೂಡಿಸಿದ್ದು, ಕವಿತೆಯ ಮೂಲಕ ಹೊಸ ಚಿಂತನೆಗಳಿಗೆ ವೇದಿಕೆಯಾಗಿತು.
