ಕರ್ನಾಟಕದ ಸಂಸ್ಕೃತಿ ಮತ್ತು ನಾರೀಕತೆಗಳ ಇತಿಹಾಸದಲ್ಲಿಯೇ ಕನ್ನಡ ನಾಡಿನ ದಕ್ಷಿಣ ಭಾಗದ ಚಾಮರಾಜನಗರ ಗಡಿ ಪ್ರದೇಶವಾಗಿದ್ದು ಕೇರಳ, ತಮಿಳುನಾಡಿನಿಂದಲೂ, ಬಿಳಿಗಿರಿರಂಗನಬೆಟ್ಟಗಾಡು, ಪುಣಜನೂರು ಕಾಡು ಕರಿವರದರಾಯನಬೆಟ್ಟ & ಮಂಗಲದ ಗುಡ್ಡ ಮುಂತಾದವುಗಳಿಂದ ಸುತ್ತುವರೆಯಲ್ಪಟ್ಟಿದ್ದ, ಈ ಭೂಭಾಗವನ್ನು ಪ್ರಾಚೀನ ಕಾಲದಲ್ಲಿ ಎನ್ನೈನಾಡು, ಬಾಣನಾಡು, ಚತುರ್ವೇದಿ ಮಂಗಲ ಇತ್ಯಾದಿ ಹೆಸರುಗಳಿಂದ ಕರೆದಿರುವುದು ಚಾಮರಾಜನಗರದ ವೀರಭದ್ರ ದೇವಸ್ಥಾನದ ಮಹಾದ್ವಾರದ ಎಡಭಾಗದ ಜಗುಲಿಯ ಮೇಲಿರುವ ಶಾಸನದಲ್ಲಿ ಹಲವು ಗ್ರಾಮಗಳ ಬಾಡಿಗೆ & ಕಂದಾಯವನ್ನು ಅರಿಕೊಠಾರದ ಮುಖ್ಯಸ್ಥ (ಪ್ರಭುವಿಗೆ)ನಿಗೆ ಪಾವತಿಸುತ್ತಿದ್ದರು ಎಂದು ಅರಿಕುಠಾರದ ಬಗ್ಗೆ ಉಲ್ಲೇಖವಿದ್ದು, ಚಾಮರಾಜನಗರದ ಮೂಲ ಹೆಸರೆಂಬ ಅಭಿಪ್ರಾಯಕ್ಕೆ ನಾವು ಬರಬಹುದು. ಚಾಮರಾಜನಗರದ ಹರಳುಕೋಟೆ, ಹರದನಹಳ್ಳಿ ಮತ್ತು ಅರಿಕುಠಾರ ಬಭ್ರುವಾಹನನ ಆಳ್ವಿಕೆ ಮತ್ತು ರಾಮಾಯಣ ಮಹಾಭಾರತದ ಹಲವು ಐತಿಹ್ಯಗಳನ್ನು ಇಲ್ಲಿ ಕಾಣಬಹುದು.
ಗಂಗರು, ಚೋಳರು,ಹೊಯ್ಸಳರು ವಿಜಯನಗರ ಸಾಮ್ರಾಜ್ಯದ ಪ್ರಾಂತ್ಯರಸರು ಹಾಗೂ ಮಹೋನ್ನತ ಮೈಸೂರು ಮಹಾರಾಜರ ಆಳ್ವಿಕೆಗೊಳಪಟ್ಟಿದ್ದ ಇಂದಿನ ಚಾಮರಾಜನಗರದ ಮೂಲ ಹೆಸರು ಇಲ್ಲಿನ ಪುರಾತನ ದೇವಾಲಯಗಳಾದ ಶ್ರೀ ವೀರಭದ್ರೇಶ್ವರ , ಭುಜಂಗೇಶ್ವರ, ಶ್ರೀ ಲಕ್ಷ್ಮೀಕಾಂತಸ್ವಾಮಿ, ಪಾರ್ಶ್ವನಾಥ ಬಸದಿ ಹಾಗೂ ಮೈಸೂರು ಮಹಾರಾಜರ ಬಗ್ಗೆ ಬರೆದಿರುವ ಗ್ರಂಥಗಳು ಮತ್ತು ಚಾಮರಾಜನಗರದಲ್ಲಿ ದೊರೆತಿರುವ ಬಹುತೇಕ ಶಾಸನಗಳಲ್ಲಿ ʼಅರಿಕುಠಾರʼವೆಂಬ ಹೆಸರಿನ ಉಲ್ಲೇಖಗಳಿರುವುದರಿಂದ ʼಅರಿಕುಠಾರʼ ಚಾಮರಾಜನಗರದ ಮೂಲ ಹೆಸರು ಎಂಬ ತೀರ್ಮಾನಕ್ಕೆ ಬರಬಹುದು.
ಕಾಲಕ್ರಮೇಣ ಬೆಟ್ಟದ ಚಾಮರಾಜ ಒಡೆಯರಿಗೆ ಸಂತಾನವಿಲ್ಲದ ಕಾರಣ ಮೈಸೂರು ಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಜಟಿಲ ಸಮಸ್ಯೆ ಎದುರಾದಾಗ ಸಿಂಹಾಸನಕ್ಕೆ ಯೋಗ್ಯವಾದವನೊಬ್ಬನನ್ನು ಆಯ್ಕೆ ಮಾಡಲು ಒಂದು ವಿಧಾನವನ್ನು ಅನುಸರಿಸಿ ರಾಜ್ಯದ ಎಲ್ಲಾ ತರಹದ ವಸ್ತುಗಳನ್ನು ಪ್ರದರ್ಶನಕ್ಕಿಟ್ಟು ಎಲ್ಲಾ ಪ್ರಾಂತ್ಯಗಳಿಂದಲೂ ಬಂದ ಹುಡುಗರಿಗೆ ತನಗೆ ಬೇಕಾದ ವಸ್ತುಗಳನ್ನು ಆಯ್ಕೆಮಾಡಿಕೊಳ್ಳುವಂತಹ ಆದೇಶವನ್ನು ನೀಡಲಾಯಿತು ಆಗ ಅರಿಕುಠಾರದ ದೇವರಾಜ ಅರಸುಕುಮಾರ ಚಾಮೇ ಅರಸನು ಅಲ್ಲಿಗೆ ಬಂದಿದ್ದು ತಾನು ಕತ್ತಿ, ನಿಂಬೆಹಣ್ಣುಗಳನ್ನು ಆಯ್ಕೆಮಾಡಿಕೊಳ್ಳಲಾಗಿ ಇವನೇ ಮೈಸೂರು ಸಿಂಹಾಸನವನ್ನು ಅಲಂಕರಿಸಲು ಯೋಗ್ಯವಾದವನೆಂದು ತಿಳಿದು ಮೈಸೂರು ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ಮಾಡಿದರು.
ಇವರೇ ಮುಂದೆ ಖಾಸ ಚಾಮರಾಜ ಒಡೆಯರೆಂದು ಖ್ಯಾತಿ ಪಡೆದರು ಇವರ ಪುತ್ರ ಮುಮ್ಮಡಿ ಕೃಷ್ಣರಾಜ ಒಡೆಯರ್ (ಇವರ ಜನ್ಮನಾಮ ನಂಜರಾಜ) ಈ ಐತಿಹಾಸಿಕ ಹಿನ್ನಲೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು 1818 ರಲ್ಲಿ ಚಾಮರಾಜನಗರ ಎಂದು ನಾಮಕರಣ ಮಾಡಿ 1826 ರಲ್ಲಿ ಖಾಸ ಚಾಮರಾಜ ಒಡೆಯರ ಸವಿನೆನಪಿಗಾಗಿ ಅರಿಕುಠಾರದಲ್ಲಿ ಶ್ರೀ ಚಾಮರಾಜೇಶ್ವರ ದೇವಾಲಯವನ್ನು ನಿರ್ಮಿಸಲಾಗಿ ಅರಿಕುಠಾರವು-ಚಾಮರಾಜನಗರವಾಯಿತು.
ಚಾಮರಾಜನಗರವೆಂದು ಅರಿಕುಠಾರಕ್ಕೆ ಮರು ನಾಮಕರಣ ಮಾಡಿದರೂ ಇಲ್ಲಿನ ಜನ ಅರಿಕುಠಾರವೆಂದೇ ಕರೆಯುತ್ತಿದ್ದುದನ್ನು ಗಮನಿಸಿದ ರಾಜರು ಇಂದಿನ ಸಂತೇಮರಹಳ್ಳಿ ವೃತ್ತವೆಂದು ಕರೆಸಿಕೊಳ್ಳುವ ನಂಜನಗೂಡು – ಮೈಸೂರು ಮತ್ತು ಟಿ.ನರಸೀಪುರ-ಮೈಸೂರು ದಿಕ್ಕುಗಳಲ್ಲಿ ಸೈನಿಕರುಗಳನ್ನು ನೇಮಿಸಿ ಅರಿಕುಠಾರವೆಂದವರಿಗೆ ಛಡಿ ಏಟು ನೀಡಿ ಚಾಮರಾಜನಗರ ಎಂದು ರೂಢಿ ಮಾಡಿಸಿದರು ಎಂದು ಇಲ್ಲಿನ ಪೂರ್ವಿಕರು ಹೇಳುತ್ತಿದ್ದರು ಎಂಬ ಮಾತು ಇಂದಿಗೂ ಜೀವಂತವಾಗಿದೆ. ಹೀಗೆ ಅರಿಕುಠಾರವೆಂಬುದು ಚಾಮರಾಜನಗರವಾಯ್ತು.
ಶಾಲೀವಾಹನ ಶಕ 1750 ರಲ್ಲಿ ಸರ್ವಧಾರಿ ನಾಮ ಸಂವತ್ಸರ ಆಷಾಡ ಮಾಸದ ದ್ವಿತೀಯ ಸೋಮವಾರದಂದು ತಂದೆ ಚಾಮರಾಜ ಒಡೆಯರ್ ಹೆಸರಿನಲ್ಲಿ ಶ್ರೀ ಚಾಮರಾಜೇಶ್ವರನೆಂಬ ಅಭಿದಾನದ ಶೃಂಗೇರಿ ಮಠದಿಂದ ತಂದಿದ್ದ ನರ್ಮದಾ ಲಿಂಗವನ್ನು ಪ್ರತಿಷ್ಠಾಪಿಸುವುದರ ಮೂಲಕ ಚಾಮರಾಜೇಶ್ವರ ದೇವಾಲಯವನ್ನು ಕಟ್ಟಿಸಿದರು. ಶೈವಾಗಮ ದ್ರಾವಿಡ ಶೈಲಿಯಲ್ಲಿರುವ ಈ ಭವ್ಯ ದೇವಾಲಯದಲ್ಲಿ ಈಶ್ವರನ ಗುಡಿಯ ಇಕ್ಕೆಲಗಳಲ್ಲಿ ಚಾಮುಂಡೇಶ್ವರಿ & ಕೆಂಪನಂಜಮಾಂಬ ಹೆಸರಿನ ಪಾರ್ವತಿ ಗುಡಿ ಇದೆ, ನಾರಾಯಣಸ್ವಾಮಿ,ಅನ್ನಪೂರ್ಣೇಶ್ವರಿ,ದಕ್ಷಿಣಾಮೂರ್ತಿ, ಪ್ರಸನ್ನ ನಂಜರಾಜೇಶ್ವರ {ಮುಮ್ಮಡಿ ಕೃಷ್ಣರಾಜರ ನೆನಪಿಗಾಗಿ) ಸಹಸ್ರ ಲಿಂಗೇಶ್ವರ, ಅರ್ಧನಾರೀಶ್ವರ,ಮಾರ್ಕಾಂಡೇಶ್ವರ,ಲಿಂಗೋದ್ಭವಮೂರ್ತಿ ಹಾಗೂ ಪೂರ್ವ ಭಾಗದ ಕಡೆಗೆ ಎಲ್ಲವೂ ಈಶ್ವರನ ಶಿವಲಿಂಗಗಳು ಮತ್ತು ಉತ್ತರಕಡೆಯ ಸಾಲುಗುಡಿಯಲ್ಲಿ ಎಲ್ಲವೂ ಈಶ್ವರನ ವಿವಿಧ ಲೀಲಾಮೂರ್ತಿಗಳು, ಬೃಹದಾಕರವಾದ ನಂದಿ, ಬೃಹದಾಕರವಾದ ಮಹಾದ್ವಾರವುಳ್ಳ ಮುಂಛಾವಣಿ, ಮುಖಮಂಟಪವುಳ್ಳ ಪಂಚಕಳಶಗಳ ದ್ರಾವಿಡ ಶೈಲಿಯ ರಾಜಗೋಪುರ ಮುಂದಿನ ಏಕಶಿಲಾ ನಂದಿಕಂಬ, ದೇವಾಲಯದ ಪ್ರಾಕಾರದ ದಕ್ಷಿಣಾಭಾಗದಲ್ಲಿ 63 ಶೈವ ಪುರಾತನರ ಸಾಲುಗಳು, ಪಶ್ಚಿಮದ ದಿಕ್ಕಿನ ಸಾಲು ಗುಡಿಗಳಲ್ಲಿ ಮುದ್ದಾದ ವಿವಿಧ ಶಿವಲಿಂಗಗಳು, ಉತ್ತರ ಭಾಗದ ಸಾಲುಗುಡಿಗಳಲ್ಲಿ ಶಿವನ 25 ಲೀಲೆಗಳು ಅಧಿಕ ಸಂಖ್ಯೆಯಲ್ಲಿ ಕಲ್ಲಿನ ಕಂಬಗಳು ಇವುಗಳ ಮೇಲೆ ಉಬ್ಬು ಶಿಲ್ಪಗಳು, ಭವ್ಯವಾದ ದ್ವಾರಪಾಲಕರುಗಳು, ಮುಖ್ಯ ಮುಖ ಮಂಟಪದಲ್ಲಿನ ಮುಮ್ಮಡಿಕೃಷ್ಣರಾಜ ಒಡೆಯರ್ ಮತ್ತು ಪತ್ನಿಯರು ವಿಗ್ರಹಗಳು, ಉತ್ತಮ ಶಿಲಾನ್ಯಾಸ ಹಾಗೂ ದೇವಾಲಯದ ಹೊರಭಾಗದಲ್ಲಿನ ದೇವರ ಗೂಡುಗಳು ಉತ್ತರದ ಕಡೆಗೆ ಇರುವ ಹೊರಭಾಗದಲ್ಲಿ ಎಲ್ಲವೂ ಗಣಪತಿಯ ವಿವಿಧ ಲೀಲೆ ಅವತಾರಗಳುಳ್ಳ ದೇವಕೋಷ್ಠಕಗಳು ಇವೆಲ್ಲವೂ ನಿಜಕ್ಕೂ ಚಾಮರಾಜನಗರ ಮತ್ತು ಕರ್ನಾಟಕಕ್ಕೆ ತಿಲಕಪ್ರಾಯವಾಗಿವೆ.
ಚಾಮುಂಡೇಶ್ವರಿ ವಿಗ್ರಹ ಧಾರವಾಡದ್ದು,ನಾರಾಯಣಸ್ವಾಮಿ ವಿಗ್ರಹ ಶ್ರೀರಂಗಪಟ್ಟಣದ ಬಳಿ ಇರುವ ಬಲಮುರಿಯದು,ಪಾರ್ವತಿಯ ವಿಗ್ರಹ ಮೈಸೂರಿನದು, ಮುಖ್ಯ ಶಿವಲಿಂಗ ಶೃಂಗೇರಿ ಮಠದ್ದು ಹಾಗೂ ಕೆಲವು ವಿಗ್ರಹಗಳು ತೆರಕಣಾಂಬಿಯದ್ದು ಆಗಿರುವುದರಿಂದ ಈ ದೇವಾಲಯವು ಕರ್ನಾಟಕವನ್ನು ಪ್ರತಿನಿಧಿಸುತ್ತದೆ ಈ ದೇವಾಲಯ ನಿರ್ಮಾಣವಾದ್ದರಿಂದಲೇ ʼಅರಿಕುಠಾರವುʼ ಚಾಮರಾಜನಗರವಾಗಿದೆ.
ವರ್ಷವಿಡೀ ದೇವರ ಪೂಜೆ ಕಾರ್ಯಗಳು ಅಲಂಕೃತ ಆನೆಯಿಂದೊಡಗೂಡಿದ ದೇವರ ಪೂಜಾ ಉತ್ಸವಗಳು, ವಿಶೇಷ ದಿನಗಳಾದ ಗಿರಿಜಾ ಕಲ್ಯಾಣ ರಥೋತ್ಸವ ಮತ್ತು ಇನ್ನೂ ಹಲವಾರು ಆಕರ್ಷಣೀಯ ಉತ್ಸವಗಳು, ದೇವಾಲಯದೊಳಗಿನ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಎಡೆಬಿಡದೆ ನಡೆದುಕೊಂಡು ಹೋಗುತ್ತಿದ್ದವು ಹಾಗಾಗಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಬಿಟ್ಟರೆ ನಮ್ಮ ನಾಡಿನಲ್ಲಿ ಈ ಬೃಹದಾಕಾರವುಳ್ಳ ದ್ರಾವಿಡ ಶೈಲಿ ದೇವಾಲಯವು ಎರಡನೆಯದೆಂದು ಚಾಮರಾಜನಗರದ ಜಿಲ್ಲೆಯ ಅತ್ಯಂತ ದೊಡ್ಡ ದೇವಾಯವೆಂದು ಪರಿಗಣಿಸಬಹುದು.
ದೊಡ್ಡಂಗಡಿಬೀದಿ, ಚಿಕ್ಕಂಗಡಿಬೀದಿ, ರಥದಬೀದಿ ಮತ್ತು ಜನನ ಮಂಟಪವನ್ನು ಹೊಂದಿದ್ದು ಈ ದೇವಾಲಯದ ಕಾರ್ಮಿಕರು “ಒಂದು ನಯಾಪೈಸೆ, ಒಂದಿಡಿ ಹುರುಳಿ,ರಾಗಿ ಅಂಬಲಿ ಪಡೆದು ಕಟ್ಟಡದ ಕಾರ್ಯದಲ್ಲಿ ಪಾಲ್ಗೊಂಡರು” ಹಾಗೂ ಸ್ವತಃ ಮುಮ್ಮಡಿ ಕೃಷ್ಣರಾಜ ಒಡಯರೇ “ಈ ದೇವಾಲಯವನ್ನು ಕಟ್ಟಿಸಿದ್ದು ದೊಡ್ಡದಲ್ಲ ಯಾರು ಈ ದೇವಾಲಯದ ದೀಪ ಹಚ್ಚಿ ಸೇವೆ ಮಾಡಿಕೊಂಡು ಹೋಗುವರೋ ಅವರ ಪಾದ ನನ್ನ ತಲೆಯ ಮೇಲೆ” ಎಂದು ನುಡಿದಿರುವುದು ಶ್ಲಾಘನೀಯ.
ಆಷಾಡಮಾಸದಲ್ಲಿ ಕರ್ನಾಟಕದಲ್ಲಿ ಜರುಗುವ ಏಕೈಕ ಚಾಮರಾಜೇಶ್ವರ ರಥೋತ್ಸವ :-
ಕರ್ನಾಟಕವನ್ನು ʼರಥೋತ್ಸವ ಸಂಸ್ಕೃತಿ ಸಂಪ್ರದಾಯಗಳ ನಾಡುʼ ಎಂದು ಹೇಳಬಹುದು ಏಕೆಂದರೆ ಭಾರತದ ಹಲವಾರು ರಾಜ್ಯಗಳಲ್ಲಿ ರಥೋತ್ಸವಗಳು ಜರುಗಿದರೆ ಕರ್ನಾಟಕದಲ್ಲಿಯೇ ಅಧಿಕ ಸಂಖ್ಯೆಯಲ್ಲಿ ರಥೋತ್ಸವಗಳು ಜರುಗುತ್ತವೇ ಅಂತೆಯೇ ಚಾಮರಾಜೇಶ್ವರ ರಥೋತ್ಸವವು ʼಆಷಾಡ ಮಾಸದಲ್ಲಿʼ ಜರುಗುವ ಏಕೈಕ ರಥೋತ್ಸವವಾಗಿದ್ದು ಕಾರಣ ನಿರ್ಮಾತೃಗಳಾದ ಕೃಷ್ಣರಾಜರು ಆಷಾಡಮಾಸದ ಶ್ರಾವಣ ನಕ್ಷತ್ರದಲ್ಲಿ ಜನಿಸಿದ್ದರಿಂದಲೂ , ಶ್ರಾವಣ ನಕ್ಷತ್ರದಲ್ಲಿ ತೀರ್ಥ ಸ್ನಾನ ಮಾಡುವ ದಿನಕ್ಕೆ ಒಂದೆರೆಡು ದಿನ ಮುಂಚೆ ರಥೋತ್ಸವ ಜರುಗಬೇಕಾಗಿರುವುದರಿಂದಲೂ ಆಷಾಡಮಾಸದಲ್ಲಿಯೇ ರಥೋತ್ಸವ ಜರುಗುತ್ತದೆ.
ನಗಾರಿ,ತಮಟೆ,ಮದ್ದಳೆ,ಕಹಳೆ,ನಂದಿಕಂಬ,ಗೊರವರ ಕುಣಿತ,ವೀರಭದ್ರ ದೇವರ ಕುಣಿತ,ವಾದ್ಯ,ಸಂಗೀತ ಮೊದಲಾದವುಗಳಿಂದ ಎಲ್ಲಾ ಸಮುದಾಯದ ಜನಕೈಗೂಡಿಸಿ ಎಳೆಯುತಿದ್ದ ಹಗ್ಗ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಂತಯ್ಯನವರ ಕಾಲದಲ್ಲಿ ಬೆಂಗಳೂರಿನ ಕೇಂದ್ರ ಕಾರಗೃಹದ ಖೈದಿಗಳು ಹಣೆದು ಮಾಡಿದ್ದಾರೆ ಹೀಗಾಗಿ ಈ ತೇರಿಗೆ ಕೆಂಗಲ್ ಹನುಮಂತಯ್ಯನವರ ಕೊಡುಗೆಯೂ ಇರುವುದಾಗಿಯೂ ತಿಳಿಯಬಹುದು.
ನವದಂಪತಿಗಳು ಇಲ್ಲಿಗೆ ಬರುವುದು ವಿಶೇಷವಾಗಿದ್ದು ರಥೋತ್ಸವದ ಸಮಯದಲ್ಲಿ ಬಂದು ತೇರಿಗೆ ಹಣ್ಣು ಜವನ ಎಸೆದರೆ ಶಿವ ಪಾರ್ವತಿಯರು ನವದಂಪತಿಗಳಿಗೆ ಆಶೀರ್ವಾದ ನೀಡುತ್ತಾರೆಂಬ ನಂಬಿಕೆ ಇದ್ದು, ಉಳಿದಂತೆ ಬೆಳ್ಳಿ ಚಿತ್ರಮಂಟಪದ ರಥವು ಗಣೇಶನನ್ನು ಪ್ರತಿಷ್ಠಾಪಿಸಿಕೊಂಡು ಸುಂದರ ಸಣ್ಣ ರಥವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಧರ್ಮಪತ್ನಿ ಸುಮುಖದ ತೊಟ್ಟಿ ಮುದ್ದು ಕೃಷ್ಣಾಜಮ್ಮಣ್ಣಿಯವರು ಶಾಲಿವಾಹನ ಶಕ 1780 ನೇ ಕಾಳಯುಕ್ತಿ ಸಂವತ್ಸರದ ಮಾಘ ಬಹುಳ 14 ಗುರುವಾರದಂದು ಅರ್ಪಿಸಿರುವುದನ್ನು ಶಾಸನಗಳಲ್ಲಿ ಕಾಣಬಹುದು.
ಅಮ್ಮನವರ ತೇರನ್ನು ಹಿಂಬಾಲಿಸಿಕೊಂಡು ಪಾರ್ವತಿ ತೇರನ್ನು ಊರ ಪ್ರದಕ್ಷಣೆ ಮಾಡಿಸುತ್ತಾರೆ ಕೆಲವು ವರ್ಷಗಳ ಹಿಂದೆ ಆಕಸ್ಮಿಕ ಬೆಂಕಿ ಅವಘಡದಲ್ಲಿ ಚಾಮರಾಜೇಶ್ವರ ಹಳೆಯ ತೀರು ಬೆಂಕಿಯಲ್ಲಿ ಸುಟ್ಟು ಹೋಗಿ ಕೆಲವು ವರ್ಷಗಳ ಕಾಲ ಚಾಮರಾಜೇಶ್ವರ ರಥೋತ್ಸವ ನಿಂತು ಹೋಗಿದ್ದ ಕಹಿ ನೆನಪೂ ಕೂಡ ಇದೆ ಹಾಗಾಗಿ ಆಷಾಡ ಮಾಸದಲ್ಲಿ ಜರುಗುವ ಕರ್ನಾಟಕ ಈ ಏಕೈಕ ರಥೋತ್ಸವ ನಮ್ಮ ಸಾರ್ವತ್ರಿಕ ಜಾನಪದ ಸಾಂಸ್ಕೃತಿಕ ಉತ್ಸವಾಗಿದೆ.

– ಕೆ.ಶ್ರೀಧರ್(ಕೆ.ಸಿರಿ),
ಚಾಮರಾಜನಗರ

[…] […]