
ನನಗೆ ಪ್ರತಿ ವರ್ಷದ ಫೆಬ್ರವರಿ ಹದಿನಾಲ್ಕನೇ ದಿನಾಂಕ ಬಂದಾಗ ಮೈ ಜುಂ ಎನ್ನುತ್ತದೆ. ಯಾವುದೋ ಒಂದು ಟಾರ್ಗೆಟ್ ರೀಚಾಗಲೇ ಬೇಕು ಎಂಬಂಥಹ ಭಾವದ ಭಯ ಮನ ವನ್ನು ಬೆದರಿಸುತ್ತದೆ…!!!
ನೀ ನನ್ನ ಜೀವನದೊಳಗೆ ಬಂದ ಮೇಲೆ ನನ್ನ ಬರ್ತಡೆ , ನಿನ್ನ ಬರ್ತಡೇ , ಮ್ಯಾರೇಜು ಆನಿವರ್ಸರಿ ಮತ್ತು ಈ ಫೆಬ್ರವರಿ ತಿಂಗಳ ವೈಕುಂಠ ವ್ಯಾಲೆಂಟೇನು ದಿನ ಗಳು ಜ್ಞಾಪಕ ಮಾಡಿ ಜೇಬು ಬಿಸಿ ಮಾಡುತ್ತದೆ….!!!
ನೀ ನನಗಿದ್ದರೆ ಸಾಕು ನಾ ನಿನಗಾದರೆ ಸಾಕು ಎಂಬುದು ಎಲ್ಲಾ ಪ್ರೇಮಿಗಳ ಆರಂಭಿಕ ಹಂತದ ಸ್ಲೋ ಗನ್ನು… ಆ ಮೇಲೆ ಬೇಡಿಕೆಗಳ ಈಡೇರಿಕೆಯ ಟ್ರಿಗರ್ ನ ಹಿಡಿಯುತ್ತದೆ ಪ್ರೇಮದ ಗನ್ನು…..
ಪ್ರೇಮಿ ಜೋಬು ಸ್ಯಾಟಸಿಫ್ಯಾಕ್ಷನ್ ಇದ್ದರೆ ಪ್ರೇಮ ವಿವಾಹ ಜೀವನ ಸಕ್ಸಸ್ಸು… ಇಲ್ಲ ವಾದರೆ ಪ್ರೇಮ ನಿರ್ವಹಣೆ ಯ ಸರ್ಕಸ್ಸು …..
“ನಾನು ಬಡವ ಅವಳು ಬಡವಿ ಒಲವೇ ನಮ್ಮ ಜೀವನ ” ಎಂಬ ಕವಿ ವಾಣಿ ಒಲವು ಆರಂಭದ ಚಂದದ ಫೋರ್ಟಿಕೋ ದಾಟಿ ಮುಂಬಾಗಿಲ ಹೊಸಿಲು ದಾಟಿ ಒಳ ಬರುವುದೇ ಇಲ್ಲ…!!!
ಮದುವೆಗೆ ಮುಂಚೆನಲ್ಲೇ ಮುಂದೆ ನಮ್ಮ ಊಟಕ್ಕೆ ತೊಂದರೆ ಯಾಗುವಂತಹ ಪರಿಸ್ಥಿತಿ ಬಂದರೇ…
ಎಂದು ನಾನಂದಾಗ ಅವಳು ಊಟವೇ ಮುಖ್ಯ ವಾ…? ಪ್ರೇಮ ದ ನೋಟ ವೊಂದಿದ್ದರೆ ಸಾಕು… ” ಎಂದಿದ್ದವಳು ಮದುವೆಯ ನಂತರ ಯಕಶ್ಚಿತ್ ನಾನು ಪೇಟೆಯಿಂದ ಪಾನಿಪುರಿ ಪಾರ್ಸೆಲ್ ತರದ್ದದ್ದಕ್ಕೆ ಬೀರುತ್ತಾಳೆ “ಉಗ್ರನೋಟ”..!!.
ಮದುವೆಗೆ ಮುಂಚೆ ನನ್ನವಳಿಗೆ ನಾನು “ನಲ್ಲೇ ನಮ್ಮ ಮನೆಯಲ್ಲಿ ಫ್ರಿಡ್ಜ್ ಇಲ್ಲ ವಾಷಿಂಗ್ ಮಿಷಿನ್ ಇಲ್ಲ” ಎಂದಾಗ ಅವಳು… ” ಅದೆಲ್ಲಾ ಬೇಕಿಲ್ಲ.. ನಲ್ಲ…!! ಕೈ ಕಾಲು ಇಲ್ವಾ.. ಬಟ್ಟೆ ಒಗೆದು ಕೊಳ್ಳುವ … ದಿನ ದಿನದ ಅಡಿಗೆ ಮಾಡಿಕೊಳ್ಳುವ… ಹಳಸಲು ಪೆಟ್ಟಿಗೆ ಯಾಕೆ…?”
ಎಂದವಳು ಈಗ ಮದುವೆ ನಂತರ ಫ್ರಿಡ್ಜ್ ವಾಷಿಂಗ್ ಮಿಷನ್ ಇನ್ನೊಂದು ತಿಂಗಳಲ್ಲಿ ಮನೆಯಲ್ಲಿ ಇರಬೇಕು.. ನೀ ತರದಿದ್ದರೆ ನಾನು ಆಗುವೆ “ತವರ ಪಾಲು”…!! ಎಂಬ ಬೆದರಿಕೆ….!!!
ಮದುವೆ ಗೆ ಮುಂಚೆ ನೀನೇ ಬಂಗಾರ …
ನಿನ್ನಂಥ ಬಂಗಾರ ನನಗೆ ದಕ್ಕಿದ ಮೇಲೆ ಇನ್ನೇಕೆ ಲೋಹದ ಬಂಗಾರ…? ಎನ್ನುತ್ತಿದ್ದವಳು ಈಗ ಮದುವೆಯ ನಂತರ ನನಗೆ ಬಂಗಾರದೊಡವೆ ಬೇಕೇ ಬೇಕು…
ಇನ್ನೆರಡು ತಿಂಗಳಲ್ಲಿ ನನ್ನ ಕೊರಳಲ್ಲಿ ಬಂಗಾರದ ಹಾರ ಇರದಿದ್ದರೆ ನನ್ನ ಕೊರಳಲ್ಲಿ ಉರುಳಾಗುತ್ತದೆ ನೈಲಾನ್ ದಾರ…!! ” ಎಂಬ ಬ್ಲಾಕ್ ಮೇಲು ಮಾಡುತ್ತಾಳೆ…!??!
ಒ ವ್ಯಾಲೆಂಟೇನು ಮಹಾಶಯ…? ಎಲ್ಲಿ ಹೋಯಿತು ಹೃದಯದ ಭಾವದ ಒಲವು..???
ಇವತ್ತು ವೈಕುಂಠ (14) ವ್ಯಲಂಟೇನು…
ನಮ್ಮದಲ್ಲ ಕಣೆ ಈ ವ್ಯಾಲೆಂಟೇನು… !!
ಎಂದರೆ ನನ್ನವಳು.. ” ನಿನಗೆ ಉಡುಗೊರೆ ಕೊಡಿಸಲು ಯೋಗ್ಯತೆ ಇಲ್ಲದಿದ್ದರೆ ದೀಪಾವಳಿಗೆ ಎರಡು ಎಳ್ಳಣ್ಣೆ ದೀಪ ಹಚ್ಚಿದರೆ ಸಾಕು.. ಗಣೇಶ ಹಬ್ಬಕ್ಕೆ ಕಡಲೆ ಬೆಲ್ಲ ಮೆದ್ದರಾಯಿತು… ಎನ್ನುತ್ತೀ…?? ಹೆಂಡತಿಗೆ ಅವಳಿಷ್ಟದ ಉಡುಗೊರೆ ನೀಡಲು ಶಕ್ತಿ ಇಲ್ಲದ ಮೇಲೆ ನಿನ್ನಂಥ ವರಿಗೇಕೆ ಮದುವೆ ಹಬ್ಬ….?????” ಎಂಬಂತೆ
ಪ್ರಶ್ನೆ ಕೇಳುತ್ತಾಳೆ ಕೆಕ್ಕರಿಸಿ..!!!
ಅವಳ ರೌದ್ರಾವತಾರ ನೋಡಲಾಗದೇ ನಾನು ತಲೆ ತಗ್ಗಿಸುತ್ತೇನೆ…
ಮತ್ತೆ…
ಮದುವೆಯ ಮೊದಲ ದಿನಗಳ ನಮ್ಮ ಸಂವಹನ ಜ್ಞಾಪಸಿಕೊಂಡು ಹೀಗಿದ್ದರೆಷ್ಟು ಚಂದವಿತ್ತು…
ಈ ವ್ಯಾಲಂಟೇನಿನ ರಾತ್ರಿ ನಾನು ಅವಳು ಅಂಗಳದಲ್ಲಿ ಕೂತು ಆಗಸದಲ್ಲಿ ಹೊಳೆವ ಪೂರ್ಣ ಚಂದ್ರನ ನೋಡುತ್ತಾ ಪ್ರೇಮಿಗಳ ದಿನವನ್ನು ಆನಂದಿಸಬಹುದಿತ್ತು….
ಹಬ್ಬ ಹರಿದಿನಗಳು ಆನಿವರ್ಸರಿ ಮದುವೆ ವಾರ್ಷಿಕೋತ್ಸವಗಳು ಉಡುಗೊರೆ ಗುರಿ ಗಳಾಗಿ ನನ್ನ ಹೆಂಡತಿ ಯೇ ಗುರಿಕಾರಳಾಗಿ ನಾನೇ ಬಲಿಪಶುವಾದ ಗುರುತಿನ ದಿನಗಳಾದವೇನೋ..!! ಅನಿಸುತ್ತಿದೆ…!!
ಎಲ್ರ ಒಲವೂ ಹೀಗಿರೋಲ್ಲ…!!
ನಿಜವಾದ ಒಲವು ಹಣ ಕೇಂದ್ರಿತವಲ್ಲ…
ನಿಜವಾದ ಪ್ರೇಮಿಗಳಿಗೆ ಉಡುಗೊರೆ ಟಾರ್ಗೆಟ್ ಗಳಿರೋಲ್ಲ…
ಸಹೃದಯಿ ಪ್ರೇಮಿಗಳಿಗೆ ಅನುಕ್ಷಣವೂ ಅನವರತ ಅನುರಾಗ….
ಅದಕ್ಕೊಂದು ದಿನವಿರೋಲ್ಲ….!!!
ಅದು ಅನುಗಾಲ ಅನುಭಾವ ….!!!….
….ಶುಭಾಶಯಗಳು…
– ಪ್ರಬಂಧ ಅಂಬುತೀರ್ಥ