ಹಾಸನ- ಕಾಶ್ಮೀರದ ಪಹಲ್ಗಾಮ್ನಲ್ಲಿ ಕನ್ನಡಿಗರೂ ಸೇರಿದಂತೆ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ನರಮೇಧ ಖಂಡಿಸಿ, ವಕ್ಪ್ ಕಾಯ್ದೆ ವಿರೋಧದ ಹೆಸರಿನಲ್ಲಿ ಪೂರ್ವ ಬಂಗಾಳದಲ್ಲಿ ಎದ್ದಿರುವ ಹಿಂಸಾಚಾರ ಖಂಡಿಸಿ ನಗರದಲ್ಲಿ ಮಾಜಿ ಸೈನಿಕರ ಸಂಘ, ಹಿಂದೂಪರ ಸಂಘಟನೆಗಳು, ಬಿಜೆಪಿ ಮತ್ತು ಇತರೆ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹೇಮಾವತಿ ಪ್ರತಿಮೆ ಬಳಿಯಿಂದ ಕೆಂಪು ಬಾವುಟ ಹಿಡಿದು ಹೊರಟ ನೂರಾರು ಮಂದಿ, ಉಗ್ರರನ್ನು ಸಂಪೂರ್ಣವಾಗಿ ಸದೆ ಬಡಿಯಬೇಕು, ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಾರ್ಗಮಧ್ಯೆ ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು, ಡಿಸಿ ಕಚೇರಿ ಎದುರಿಗೆ ಬಂದು ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಡಾ.ರಮೇಶ್, ಕಾಶ್ಮೀರ ಭಾರತದ ಮುಕುಟ ಮಣಿ ಎನಿಸಿದೆ. ಹಾಗೆಯೇ ಭಾರತ ಹಿಂದೂರಾಷ್ಟ್ರವಾಗಿದೆ. ಇದನ್ನು ಬದಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ನಾವೆಲ್ಲರೂ ಸಹೋದರರಂತೆ ಇದ್ದರೂ, ಧಾರ್ಮಿಕ ಭಯೋತ್ಪಾದನೆ ಮಾಡುವುದು ನಿಲ್ಲಬೇಕು. ಇದನ್ನು ಕೊನೆಗಾಣಿಸಬೇಕು. 134 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ, ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಕರೆ ನೀಡಿದರು. ಅಖಂಡ ಭಾರತ ಅಮರವಾಗಿರಬೇಕು, ಇಲ್ಲದಿದ್ದರೆ ಕಾಶ್ಮೀರದಲ್ಲಿ ನಡೆದ ನರಮೇಧ, ನಾಳೆ ಹಾಸನದಲ್ಲೂ ನಡೆಯಬಹುದು ಎಂದು ಎಚ್ಚರಿಸಿದರು. ಉಗ್ರರ ಹತ್ತಿಕ್ಕುವ ವಿಚಾರದಲ್ಲಿ ಕೇಂದ್ರ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಮಾತನಾಡಿದ ನಿವೃತ್ತ ಸೈನಿಕರು, ವಕ್ಫ್ ಕಾಯ್ದೆ ವಿರೋಧದ ಹೆಸರಿನಲ್ಲಿ ಪೂರ್ವ ಬಂಗಾಳವನ್ನು ಹಿಂಸಾಚಾರದ ಅಗ್ನಿಯಲ್ಲಿ ಸುಟ್ಟ ಹಾಕಲಾಗುತ್ತಿದ್ದು ಇದು ನಿಲ್ಲಬೇಕು ಎಂದು ಒತ್ತಾಯಿಸಿದರು.
ಜಿಹಾದಿ ಗುಂಪು 200ಕ್ಕಿಂತ ಅಧಿಕ ಹಿಂದೂಗಳ ಮನೆ ಮತ್ತು ಅಂಗಡಿಗಳನ್ನು ಬೆಂಕಿ ಹಚ್ಚಿ ನಾಶಮಾಡಿದೆ. ನೂರಾರು ಜನರನ್ನು ಗಂಭೀರವಾಗಿ ಗಾಯಗೊಳಿಸಿದೆ. ಮೂವರು ನಾಗರಿಕರನ್ನು ಕೊಂದು ಹಾಕಿತು. ಡಜನ್ಗಟ್ಟಲೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೂ ನಡೆದಿದೆ. ಪರಿಣಾಮವಾಗಿ 500ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಮುರ್ಶಿದಾಬಾದ್ ನಿಂದ ಪಲಾಯನ ಮಾಡಿವೆ.
ಅವರಿಗೆ ಭೇಟಿ ನೀಡಿ ಸಹಾಯ ಮಾಡುವ ಬದಲು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಂಗೆಗೆ ಕಾರಣಕರ್ತರಾದ ಇಮಾಮ್ ಗಳನ್ನು ಭೇಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ನಂತರ ಎಡಿಸಿ ಕೆ.ಟಿ.ಶಾಂತಲಾ ಅವರ ಮೂಲಕ ರಾಜ್ಯ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆಯ ವೇಣುಗೋಪಾಲ್, ಮಹಿಪಾಲ್, ಮುಖಂಡರಾದ ಆರ್.ಮೋಹನ್, ಚನ್ನಕೇಶವ ಮೊದಲಾದವರಿದ್ದರು.
