ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬೆಂಗಳೂರು ನಗರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರವೂ ಭರ್ಜರಿ ಮಳೆ ಸುರಿದಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮೇ 21ರಂದು ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅರ್ಲಟ್ ಕೊಟ್ಟಿದೆ.
ಈ ಜಿಲ್ಲೆಗಳಲ್ಲಿ ಮೇ 19ರಿಂದ ಮುಂದಿನ 2 ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗದಲ್ಲಿ ಮೇ 20 ಮತ್ತು ಮೇ 21ರಂದು ಬಿರುಸಾಗಿ ವರ್ಷಧಾರೆಯಾಗುವ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಕೊಡಲಾಗಿದೆ.
ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಿತ್ರದುರ್ಗ, ಕೊಪ್ಪಳ, ಮುಂದಿನ 2 ದಿನ ಯೆಲ್ಲೋ ಅಲರ್ಟ್ ಇರಲಿದೆ. ಉಳಿದೆಡೆ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಈ ವೇಳೆ ಕೆಲ ಜಿಲ್ಲೆಗಳಲ್ಲಿ ಗಾಳಿ ವೇಗವೂ ಅಧಿಕವಾಗಿರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ತಾಪಮಾನ ಇಳಿಕೆ: ಪೂರ್ವ ಮುಂಗಾರಿನ ಮಳೆ ಆರ್ಭಟದಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳ ತಾಪಮಾನ ಕುಸಿತವಾಗಿದೆ. ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ 40 ಡಿ.ಗ್ರಿ.ಅಸುಪಾಸಿನಲ್ಲಿ ದಾಖಲಾಗುತ್ತಿದ್ದ ಉಷ್ಣಾಂಶವು 33 ಡಿ.ಸೆ.ನಿಂದ 37 ಡಿ.ಸೆ.ವರೆಗೆ ವರದಿಯಾಗುತ್ತಿದೆ. ದಕ್ಷಿಣ ಕರ್ನಾಟಕ, ಕರಾವಳಿ ವ್ತಾಪ್ತಿಯ ಪ್ರದೇಶಗಳಲ್ಲಿ 35-36ರ ಅಸುಪಾಸಿನಲ್ಲಿ ಕಂಡುಬರುತ್ತಿದ್ದ ತಾಪಮಾನವು 31-33 ಡಿ.ಸೆ.ದಾಖಲಾಗುತ್ತಿದೆ. ಒಟ್ಟಿನಲ್ಲಿ ಮಳೆ ಪರಿಣಾಮ ತಂಪಾದ ವಾತಾವರಣ ಅನುಭವವಾಗುತ್ತಿದೆ.
