ಕೆ.ಆರ್.ಪೇಟೆ, ನ.6: ತಾಲ್ಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ವಿ.ಎಸ್.ಎಸ್.ಎನ್) ನೂತನ ಅಧ್ಯಕ್ಷರಾಗಿ ವಾಸು.ಆರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷ ಎ.ಜೆ. ಕುಮಾರ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ವಾಸು.ಆರ್ ಹೊರತುಪಡಿಸಿ ಇತರ ನಿರ್ದೇಶಕರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿದ್ದ ಸಂಘದ ಕಾರ್ಯದರ್ಶಿ ಸತೀಶ್ ಅವರು ವಾಸು.ಆರ್ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ನೂತನ ಅಧ್ಯಕ್ಷರ ಪ್ರತಿಕ್ರಿಯೆ:
ಅವಿರೋಧ ಆಯ್ಕೆಯಾದ ನಂತರ ಮಾತನಾಡಿದ ವಾಸು.ಆರ್ ಹೇಳಿದರು – “ನನ್ನ ಆಯ್ಕೆಗೆ ಶಾಸಕ ಹೆಚ್.ಟಿ. ಮಂಜು, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಜೆಡಿಎಸ್ ಮುಖಂಡ ಎ.ಆರ್. ರಘು ಹಾಗೂ ಎಲ್ಲಾ ನಿರ್ದೇಶಕರ ಸಹಕಾರ ಕಾರಣವಾಗಿದೆ. ಸಹಕಾರ ಕ್ಷೇತ್ರದಲ್ಲಿ ನನಗೆ ಇರುವ ಅನುಭವದಿಂದ ಮುಂದಿನ ದಿನಗಳಲ್ಲಿ ರೈತರಿಗೆ ಲಾಭವಾಗುವ ರೀತಿಯಲ್ಲಿ ಸೊಸೈಟಿಯ ಶ್ರೇಯೋಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುವೆ,” ಎಂದರು.
ಗ್ರಾಮ ಮುಖಂಡರ ಮಾತು:
ಬಳಿಕ ಮಾತನಾಡಿದ ಗ್ರಾಮದ ಮುಖಂಡ ಕೆ.ಬಿ. ಮಹೇಶ್ ಹೇಳಿದರು – “ಸಣ್ಣ ರೈತರಿಗೆ ಸಹಕಾರ ಸಂಘಗಳು ಅತ್ಯಂತ ಉಪಯುಕ್ತವಾಗಿವೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಸೇರಿದಂತೆ ಹಲವು ಯೋಜನೆಗಳಿವೆ. ರೈತರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನೂತನ ಅಧ್ಯಕ್ಷರು ಸಂಘವನ್ನು ಒಗ್ಗಟ್ಟಿನಿಂದ ಅಭಿವೃದ್ಧಿಪಡಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿ,” ಎಂದು ಆಶಿಸಿದರು.
ಗೆಲುವಿನ ಸಂಭ್ರಮ:
ವಾಸು.ಆರ್ ಅವರ ಅವಿರೋಧ ಆಯ್ಕೆ ಘೋಷಣೆಯಾದ ತಕ್ಷಣ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ರಘು, ಮಾಜಿ ಅಧ್ಯಕ್ಷ ಎ.ಜೆ. ಕುಮಾರ್, ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಬಿಜೆಪಿ ಮುಖಂಡ ಭರತ್ ಕುಮಾರ್, ಉಪಾಧ್ಯಕ್ಷ ಸುಬ್ಬಯ್ಯ, ನಿರ್ದೇಶಕರಾದ ಉದಯಕುಮಾರ್, ಮಹಾಲಿಂಗು, ಯೋಗೇಶ್, ಚಂದ್ರಪ್ಪ, ಜಗದೀಶ್ ಪಾಟೀಲ್, ಸುಜಾತ, ಅನಸೂಯಾ, ಗಂಗರಾಜು, ರಾಜೇಶ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್, ಎಂ.ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಆದಿಲ್ ಪಾಷಾ, ಹಿರಿಯ ಮುಖಂಡ ಕೆ.ಬಿ. ಮಹೇಶ್, ಜೆಡಿಎಸ್ ಮುಖಂಡ ಎ.ಎಂ. ನಾರಾಯಣಸ್ವಾಮಿ, ಸಾಕ್ಷಿಬೀಡು ಅಂಗಡಿ ಅಶೋಕ್, ಪದ್ಮನಾಭ, ನ್ಯಾಯಬೆಲೆ ಅಂಗಡಿ ಚನ್ನಪಾಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
– ಮನು, ಮಾಕವಳ್ಳಿ (ಕೆ.ಆರ್.ಪೇಟೆ)
