Bhagavad Gita
ಶ್ಲೋಕ – 24
ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ ।
ನತು ಮಾಮಭಿಜಾನಂತಿ ತತ್ತ್ವೇನಾತಶ್ಚ್ಯವಂತಿ ತೇ ॥೨೪॥
ನಾನೆ ಅಲ್ಲವೆ ಎಲ್ಲ ಪೂಜೆಗಳನ್ನು ಕೊಳ್ಳುವವನು ಮತ್ತು ನಡೆಸುವವನು. ನಿಜವಾಗಿ ಅವರು ನನ್ನನ್ನು ಚನ್ನಾಗಿ ತಿಳಿದಿಲ್ಲ. ಅದರಿಂದ ಜಾರಿ ಬೀಳುತ್ತಾರೆ.
ಹಿಂದೆ ವಿಶ್ಲೇಶಿಸಿದಂತೆ ಕೆಲವರು ತಮ್ಮ ಬಯಕೆಗಳನ್ನು ಈಡೇರಿಸುವಂತೆ ಕೋರಿ ದೇವತೆಗಳನ್ನು ಪ್ರಮುಖವಾಗಿ (ಭಗವಂತನಿಗಿಂತ ಬಿನ್ನವಾಗಿ) ಪೂಜಿಸುತ್ತಾರೆ. ಹೀಗೆ ಮಾಡಿದಾಗ ಏನಾಗುತ್ತದೆ ಎನ್ನುವ ಪ್ರಶ್ನೆ ನಮಗೆ ಮೂಡಬಹುದು. ಹಿಂದೆ ಕೃಷ್ಣ ಹೇಳಿದ್ದ “ಎಲ್ಲವುದರಲ್ಲೂ ಇರುವವನು ನಾನು” ಎಂದು. ಯಾರನ್ನು ಪ್ರಮುಖವಾಗಿ ಪೂಜಿಸಿದರೂ ಕೂಡಾ ಅದು ಸಲ್ಲುವುದು ಭಗವಂತನನ್ನೇ. ಇಲ್ಲಿ ಸಮಸ್ಯೆ ಎಂದರೆ ಪೂಜೆ ಮಾಡುವವರಿಗೆ ಆ ಅರಿವು ಇಲ್ಲದಿರುವುದು. ಇದರಿಂದ ತಪ್ಪು ಅನುಸಂಧಾನ. ಅರಿವಿಲ್ಲದೇ ಮಾಡುವ ಭಕ್ತಿ ಪೂರ್ಣ ಭಕ್ತಿಯಾಗಲಾರದು. ಪರತತ್ವದ ಎಚ್ಚರ ಇಲ್ಲದೆ ಮಾಡುವ ಪೂಜೆ ಎಂದೂ ನಮ್ಮನ್ನು ಉನ್ನತಿಗೇರಿಸಲಾರದು.
ಕೃಷ್ಣ ಹೇಳುತ್ತಾನೆ “ಈ ರೀತಿಯ ಪೂಜೆಯಿಂದ ಪುಣ್ಯ ಗಳಿಸುವ ಬದಲು, ಪುಣ್ಯ ಕರ್ಮ ಮಾಡಿಯೂ ಜಾರಿ ಬಿದ್ದಂತೆ” ಎಂದು. ಆದ್ದರಿಂದ ಯಾವ ಪೂಜೆಯನ್ನೇ ಆಗಲಿ ಪರತತ್ವದ ಎಚ್ಚರದಿಂದ ಮಾಡಿದಾಗ ಮಾತ್ರ ಅದು ಸಾರ್ಥಕ. ಯಾರನ್ನೇ ಪೂಜಿಸಿದರೂ ಆ ಪೂಜೆ ಅಂತತಃ ಸಲ್ಲುವುದು ಭಗವಂತನನ್ನೇ. ಏಕೆಂದರೆ ಸರ್ವ ಯಜ್ಞಗಳ ಭೊಕ್ತಾರ ಭಗವಂತ. ಇದು ಯಜ್ಞದ ಹಿಂದಿರುವ ಯಜ್ಞಪುರುಷನ ರಹಸ್ಯ. ಪುರುಷಸೂಕ್ತದಲ್ಲಿ ಹೇಳುವಂತೆ “ಯಜ್ಞೇನ ಯಜ್ಞ ಮಯಜಂತ ದೇವಾಃ”-ಯಜ್ಞದಿಂದ ಯಜ್ಞ ನಾಮಕ ಭಗವಂತನ ಆರಾಧನೆ. ಯಜ್ಞಗಳ ಭೊಕ್ತ, ಯಜ್ಞಗಳ ಸ್ವಾಮಿ, ಯಜ್ಞ ಶಬ್ದವಾಚ್ಯನಾದ ಭಗವಂತನ ಆರಾಧನೆಯಿಂದ ನಾವು ಭಗವಂತನನ್ನು ಸೇರಬಹುದು.
ಹೀಗಿದ್ದರೂ ಕೂಡಾ ಸಮಾಜದಲ್ಲಿ ನಾವು ಅನೇಕ ರೀತಿಯಲ್ಲಿ ದೇವತಾ ಆರಾದನೆ ಮಾಡುವವರನ್ನು ನೋಡುತ್ತೇವೆ. ಅಂತವರು ಆ ದೇವತೆಯನ್ನು ಪೂಜಿಸುವುದರಲ್ಲೇ ಶ್ರದ್ಧೆ ಇಟ್ಟಿರುತ್ತಾರೆ. ಆ ರೀತಿ ಪೂಜೆ ಮಾಡುವವರ ಗತಿ ಏನು? ಇದಕ್ಕೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.
