ಅಧ್ಯಾಯ-2
ಶ್ಲೋಕ – 44
ಭೋಗೈಶ್ವರ್ಯಪ್ರಸಕ್ತಾನಾಂ ತಯಾSಪಹೃತಚೇತಸಾಮ್ ।
ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ ॥೪೪॥
ಭೋಗ ಐಶ್ವರ್ಯ ಪ್ರಸಕ್ತಾನಾಮ್ ತಯಾ ಅಪಹೃತ ಚೇತಸಾಮ್ ವ್ಯವಸಾಯ ಆತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ-
ಐಷಾರಾಮದ ಐಸಿರಿಯಲ್ಲಿ ಮುಳುಗಿ, ವೇದ ಓದಿಯೇ ತಲೆ ಕೆಡಿಸಿಕೊಂಡ ಇಂಥವರಿಗೆ, ಹದಗೊಂಡ ತಿಳಿನುಡಿ ಕೂಡ ಮನಸ್ಸಿನ ಸಮಸ್ಥಿತಿಗೆ ನೆರವಾಗದು. ಮೇಲಿನ ಮೂರು ಶ್ಲೋಕ ಅತ್ಯಂತ ಮುಖ್ಯವಾದುದು. ಹೆಚ್ಚಿನವರಿಗೆ ಇದು ಅರ್ಥವೇ ಆಗುವುದಿಲ್ಲ. ಅರ್ಥವಾಗದೆ ಈ ಶ್ಲೋಕವನ್ನು ಟೀಕಿಸಿದವರೂ ಇದ್ದಾರೆ! ಪ್ರಾಚೀನ ಗ್ರಂಥಗಳಲ್ಲಿ, ವೇದಗಳಲ್ಲಿ, ಶ್ರುತಿಗಳಲ್ಲಿ, ಕೇವಲ ಅಧ್ಯಾತ್ಮವಲ್ಲದೆ ಅನೇಕ ಲೌಕಿಕ ವಿಷಯಗಳು ತುಂಬಿಕೊಂಡಂತೆ ಕಾಣುತ್ತದೆ.ಬರಿಯ ವೇದ ಗ್ರಂಥಗಳನ್ನು ಓದುವುದರಿಂದ ನನ್ನನ್ನು ತಿಳಿಯಲು ಸಾಧ್ಯವಿಲ್ಲ ಎನ್ನುತ್ತಾನೆ ಕೃಷ್ಣ. ಕೃಷ್ಣ ಹೇಳುತ್ತಾನೆ ವೇದವಾದಿಗಳಾದವರು ವೇದದ ಮೇಲ್ನೋಟದ ಅರ್ಥವೆಂಬ ಹೂವನ್ನು ಕಿತ್ತು ತೆಗೆದುಕೊಂಡು ಆಳವಾದ ಜ್ಞಾನ ಸಾಗರವೆಂಬ ಹಣ್ಣಿನಿಂದ ವಂಚಿತರಾಗುತ್ತಾರೆ ಎಂದು.
ವೇದವನ್ನು ಆಳವಾಗಿ ಅರ್ಥ ಮಾಡಿಕೊಳ್ಳದೆ, ಕೇವಲ ಮೇಲ್ನೋಟದ ಅರ್ಥದಲ್ಲೇ ನಿಂತು ವೇದವೆಂದರೆ ಇಷ್ಟೇ ಎಂದು ಹೇಳುವವರಿಗೆ ಕೃಷ್ಣ ಈ ಮಾತನ್ನು ಹೇಳಿದ್ದಾನೆ. ಇಲ್ಲಿ ‘ವೇದವಾದರು’ ಎಂದರೆ ವೇದದ ಅರ್ಥ ತಿಳಿಯದೆ ಅದರ ಬಗ್ಗೆ ವಿವಾದ ಮಾಡುವವರು. ವೇದವನ್ನು ಬಾಯಿಪಾಠ ಮಾಡಿ ಅದರ ಅರ್ಥ ತಿಳಿಯದೆ ಮಾತನಾಡುವವರು. ವೇದದ ಮೇಲ್ನೋಟದ ಅರ್ಥದಲ್ಲೇ ನಿಂತವರು. ಇವರು ಮೇಲಿನಿಂದ ಈಜುವವರು. ಇವರಿಗೆ ತಳದಲ್ಲಿರುವ ಮುತ್ತು ರತ್ನಗಳ ಅರಿವಿಲ್ಲ. ವೇದವನ್ನು ನಿಜವಾಗಿ ಅರಿತುಕೊಳ್ಳದೆ, ಅದರ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡು, ಅದನ್ನೇ ಜನರಿಗೆ ಹೇಳುವುದು ನರಕಕ್ಕೆ ನೇರ ದಾರಿ. ಪೌರೋಹಿತ್ಯ ಕೂಡಾ ಹೀಗೆ. ನಿಜವಾದ ಜ್ಞಾನವಿಲ್ಲದೆ, ಮಂತ್ರದ ಅರ್ಥ ಗೊತ್ತಿಲ್ಲದೆ ಪೌರೋಹಿತ್ಯ ಮಾಡುವುದು ಕೂಡಾ ಅಷ್ಟೇ ಅಪಾಯಕಾರಿ.
ಪೌರೋಹಿತ್ಯ ಒಂದು ಜವಾಬ್ದಾರಿಯುತ ಕೆಲಸ. ಒಬ್ಬ ಮನುಷ್ಯನ ಪಾಪವನ್ನು ಪರಿಹರಿಸಿ ಅವನನ್ನು ಎತ್ತರಕ್ಕೇರಿಸಬೇಕಾದರೆ ಪೌರೋಹಿತ್ಯ ಮಾಡುವವನೂ ಕೂಡಾ ಎತ್ತರದಲ್ಲಿರಬೇಕು. ವೇದ ಮಂತ್ರದ ರಹಸ್ಯ ತಿಳಿದವನಾಗಿರಬೇಕು. ಕೃಷ್ಣ ಇಲ್ಲಿ ಹೇಳುತ್ತಾನೆ: “ವೇದದ ಅಂತರಂಗದ ಅರ್ಥ ತಿಳಿಯದಿದ್ದರೆ ಎಲ್ಲವೂ ಅಪಾರ್ಥವಾಗುತ್ತದೆ. ಯಾರು ಪ್ರಾಚೀನ ಗ್ರಂಥಗಳ ಮೇಲ್ನೋಟದ ಅರ್ಥವನ್ನು ಹೇಳಿ ಸಮಾಜಕ್ಕೆ ಮೋಸ ಮಾಡುತ್ತಾರೋ ಅವರು ಅವಿಪಶ್ಚಿತರು” ಎಂದು.
‘ವಿಪಶ್ಚಿತರು’ ಎಂದರೆ ಜ್ಞಾನ ಸ್ವರೂಪವಾದ ಆತ್ಮವನ್ನು ಕಂಡವರು, ಆತ್ಮ ಜ್ಞಾನಿಗಳು. ಅವಿಪಶ್ಚಿತರು ಶಾಸ್ತ್ರಕ್ಕೆ ಮೇಲ್ನೋಟದ ಅರ್ಥವನ್ನು ಹೇಳುವವರು-ಅವರು ತಿಳಿಗೇಡಿಗಳು ಎನ್ನುತ್ತಾನೆ. ಕೃಷ್ಣ! ಈ ಮಾತು ಪ್ರಪಂಚದ ಪ್ರತಿಯೊಂದು ಧರ್ಮ ಗ್ರಂಥಗಳಲ್ಲಿದೆ.

[…] […]