ತುಮಕೂರು: ಹಿರಿಯ ಕ್ರೀಡಾಪಟು ಟಿ.ಕೆ. ಆನಂದ್ ಅವರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಆಸನಗಳನ್ನು ಕೊಡುಗೆಯಾಗಿ ನೀಡಿದರು.ಅಂತಾರಾಷ್ಟ್ರೀಯ ಅಥ್ಲೆಟಿಕ್ ಪಟುವಾಗಿ ಚಿನ್ನ, ಬೆಳ್ಳಿ ಪದಕ ಗೆದ್ದು ತುಮಕೂರಿಗೆ ಕೀರ್ತಿ ತಂದಿರುವ ಟಿ.ಕೆ.ಆನಂದ್ ಅವರು ನಿತ್ಯ ಇದೇ ಕ್ರೀಡಾಂಗಣದಲ್ಲಿ ಕ್ರೀಡಾ ಅಭ್ಯಾಸ ಮಾಡುತ್ತಾರೆ.ತಮ್ಮ ಸಾಧನೆಗೆ ನೆರವಾದ ಕ್ರೀಡಾಂಗಣಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.
ಮುಂಜಾನೆ ಗೆಳೆಯರ ಬಳಗ ಮಂಗಳವಾರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಟಿ.ಕೆ.ಆನಂದ್ ಅವರು ಕ್ರೀಡಾಂಗಣಕ್ಕೆ ಆಸನಗಳ ಕೊಡುಗೆ ಕೊಟ್ಟರು.ಈ ವೇಳೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿಶೇಷಾಧಿಕಾರಿ ಡಾ.ನಾಗಣ್ಣ, ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಟೂರ್ನಿಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಜಿಲ್ಲೆಗೆ ಕೀರ್ತಿ ತಂದಿರುವ ಟಿ.ಕೆ.ಆನಂದ್ ಅವರು ತಮ್ಮ ಯಶಸ್ಸಿಗೆ ಕಾರಣವಾದ ಕ್ರೀಡಾಂಗಣಕ್ಕೆ ಕೊಡುಗೆ ನೀಡುವ ಮೂಲಕ ಋಣ ಸಂದಾಯ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಟಿ.ಕೆ. ಆನಂದ ಮಾತನಾಡಿ, ಸ್ವತ: ಕ್ರೀಡಾಪಟುವಾಗಿರುವ ಸಚಿವ ಡಾ. ಪರಮೇಶ್ವರ್ ಅವರು ಮಹಾತ್ಮಗಾಂಧಿ ಕ್ರೀಡಾಂಗಣವು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಾಣವಾಗಲು ಕಾರಣರಾಗಿದ್ದಾರೆ.ಇಲ್ಲಿ ಟೆನ್ನಿಸ್ ಕೋರ್ಟ್, ಕುಸ್ತಿ, ಬಾಸ್ಕೆಟ್ ಬಾಲ್, ಕಬಡ್ಡಿ ಸೇರಿದಂತೆ ಬಹುತೇಕ ಕ್ರೀಡೆಗಳ ಅಭ್ಯಾಸಕ್ಕೆ ಗುಣಮಟ್ಟದ ಅಂಕಣ ನಿರ್ಮಾಣಕ್ಕೆ ಸಹಕರಿಸಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದಾರೆ,ಸಚಿವರಕೊಡುಗೆಯ ಗೌರವಾರ್ಥ ಅವರ ಹೆಸರಿನಲ್ಲಿ ಬೇಂಚ್ಗಳನ್ನು ಕೊಡುಗೆ ನೀಡಿದ್ದೇನೆ. ಕ್ರೀಡಾಪಟುಗಳು ಅಭ್ಯಾಸ ಮಾಡಿ ವಿಶ್ರಾಂತಿ ಪಡೆಯಲು ಬೇಂಚ್ಗಳ ಅವಶ್ಯಕತೆ ಇತ್ತು ಎಂದರು.
ಧನಿಯಾಕುಮಾರ್, ಮಧುಗೋಲ್ಡ್, ಶಿಪ್ರಸಾದ್, ನಟರಾಜಶೆಟ್ಟಿ, ಮಾರುತಿಪ್ರಸಾದ್, ಕೆ.ಹೆಚ್.ವೆಂಕಟೇಶ್, ಗಂಗಾಧರ್ ಸೇರಿದಂತೆ ಹಲವು ಕ್ರೀಡಾಪಟುಗಳು ಹಾಜರಿದ್ದರು.
– ಕೆ.ಬಿ.ಚಂದ್ರಚೂಡ
