ಶ್ರವಣಬೆಳಗೊಳ: ಜೈನ ಧರ್ಮವು ಇಡೀ ವಿಶ್ವಕ್ಕೆ ಸತ್ಯ ಮತ್ತು ಅಹಿಂಸೆಯ ಬೋಧನೆ ನೀಡುತ್ತಿದ್ದು, ಶ್ರವಣಬೆಳಗೊಳದಲ್ಲಿರುವ ಬಾಹುಬಲಿ ಮೂರ್ತಿ ಶಾಂತಿಯ ಸಂಕೇತವಾಗಿದೆ ಎಂದು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನದಿಂದ ಗೊಮ್ಮಟನಗರದ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ನಡೆದ 20ನೇ ಶತಮಾನದ ಪ್ರಥಮಾಚಾರ್ಯ ಪ.ಪೂ. ಆಚಾರ್ಯ ಶ್ರೀ 108 ಶಾಂತಿಸಾಗರ ಮಹಾರಾಜರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಪರಾಷ್ಟ್ರಪತಿ ರಾಧಾಕೃಷ್ಣನ್ ಹೇಳಿದರು:
“ವಿಶ್ವದೆಲ್ಲೆಡೆ ಸಂಘರ್ಷ, ಹಿಂಸೆ ಮತ್ತು ಅಶಾಂತಿ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿ, ಜೈನ ಮುನಿಗಳ ಮಾರ್ಗದರ್ಶನದಿಂದ ಮಾತ್ರ ವಿಶ್ವ ಶಾಂತಿ ಸ್ಥಾಪಿಸಬಹುದು. ಶ್ರವಣಬೆಳಗೊಳ ಮತ್ತು ಕರ್ನಾಟಕವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಕೇಂದ್ರಗಳಾಗಿವೆ,” ಎಂದರು.
ಅವರು ಮುಂದುವರೆದು ಸರ್ಕಾರದ ಜ್ಞಾನಭಾರತಿ ಮಿಷನ್ ಅಡಿಯಲ್ಲಿ ಪ್ರಾಚೀನ ಭಾಷೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಪ್ರಾಕೃತ ಮತ್ತು ಕನ್ನಡ ಭಾಷೆಗೆ ಪಾರಂಪರಿಕ ಸ್ಥಾನಮಾನ ನೀಡಲಾಗಿದ್ದು, ಜೈನ ಧರ್ಮದ ಹಸ್ತಪ್ರತಿಗಳ ಸಂಶೋಧನೆಗೆ ಇದು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಹೇಳಿದರು:
“1925ರಲ್ಲಿ ಶ್ರೀ ಶಾಂತಿಸಾಗರ ಮಹಾರಾಜರು ಶ್ರವಣಬೆಳಗೊಳಕ್ಕೆ ಬಂದು ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದರು. ನೂರು ವರ್ಷಗಳ ಪೂರ್ಣಾವಧಿಯನ್ನು ಸ್ಮರಿಸಿ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅವರ ಜೀವನ ಸಂದೇಶ ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ನಾಲ್ಕನೇ ಬೆಟ್ಟಕ್ಕೆ ಅವರ ಹೆಸರನ್ನೂ ನೀಡಲಾಗಿದೆ,” ಎಂದು ತಿಳಿಸಿದರು.
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮಾತನಾಡಿ,
“ಭಗವಾನ್ ಮಹಾವೀರರು ‘ಬದುಕು ಮತ್ತು ಬದುಕಲು ಬಿಡಿ’ ಎಂಬ ದೈವಿಕ ಸಂದೇಶ ನೀಡಿದರು. ಬಾಹುಬಲಿ ಮಹಾತ್ಮರು ಅಹಿಂಸೆ, ತ್ಯಾಗ, ಸ್ನೇಹ ಮತ್ತು ಧ್ಯಾನದ ನಾಲ್ಕು ತತ್ವಗಳ ಮೂಲಕ ಮಾನವಜೀವನದ ಶಾಂತಿ ಮತ್ತು ಉನ್ನತಿಗೆ ದಾರಿ ತೋರಿಸಿದರು,” ಎಂದು ಶ್ಲಾಘಿಸಿದರು.
ಅವರು ಮುಂದುವರೆದು,
“ಜೈನ ಧರ್ಮವು ಋಷಭದೇವರಿಂದ ಆರಂಭಗೊಂಡ ಶ್ರವಣ ಸಂಪ್ರದಾಯದ ಆಧಾರಿತ ಧರ್ಮವಾಗಿದೆ. 24ನೇ ತೀರ್ಥಂಕರ ಮಹಾವೀರ ಸ್ವಾಮಿಗಳು ಅದನ್ನು ವ್ಯವಸ್ಥಿತ ರೂಪಕ್ಕೆ ತಂದರು. ಅವರ ‘ಅಹಿಂಸಾ ಪರಮೋ ಧರ್ಮಃ’ ಎಂಬ ಉಪದೇಶ ಇಂದಿನ ಸಮಾಜಕ್ಕೂ ಮಾರ್ಗದರ್ಶನವಾಗಿದೆ,” ಎಂದರು.
ರಾಜ್ಯಪಾಲರು ಶಾಂತಿಸಾಗರ ಮಹಾರಾಜರನ್ನು “ಸಂಯಮದ ಜೀವಂತ ಸಾಕಾರ” ಎಂದು ವರ್ಣಿಸಿ, ಅವರ ಜೀವನ ಶಾಂತಿ ಮತ್ತು ಧ್ಯಾನದ ಆದರ್ಶದ ಪ್ರತೀಕವಾಗಿತ್ತು ಎಂದು ಹೇಳಿದರು.
ಇದನ್ನು ಓದು: ಬೇಲೂರು- ಜಗಬೋರನಹಳ್ಳಿಯಲ್ಲಿ ದೈತ್ಯ ಆನೆಗಳ ಭೀಕರ ಕಾಳಗ — ಗ್ರಾಮ ರಣಾಂಗಣವಾಗಿ ಮಾರ್ಪಾಟು
ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾರ್ಯಕ್ರಮದಲ್ಲಿ ನಾಲ್ಕನೇ ಬೆಟ್ಟಕ್ಕೆ “ಶಾಂತಿಸಾಗರ ಬೆಟ್ಟ” ಎಂದು ನಾಮಕರಣ ಅನಾವರಣ ಮಾಡಿ ಮಾತನಾಡಿದರು:
“ಶ್ರವಣಬೆಳಗೊಳ ಭಾರತದ ನಾಗರಿಕತೆಯ ಮುಕುಟಮಣಿಯಾಗಿದೆ. ಇಲ್ಲಿ 2000 ವರ್ಷಗಳ ಹಿಂದೆ ಚಂದ್ರಗುಪ್ತ ಮೌರ್ಯ ಸಲ್ಲೇಖನ ವ್ರತದ ಮೂಲಕ ಮುಕ್ತಿಯನ್ನು ಪಡೆದ ಇತಿಹಾಸವಿದೆ. ಶಾಂತಿಸಾಗರ ಸ್ವಾಮೀಜಿಯ ಪ್ರತಿಮೆ ಮುಂದಿನ ಪೀಳಿಗೆಗೆ ಧರ್ಮಮಾರ್ಗದ ಸಂಕೇತವಾಗಲಿದೆ,” ಎಂದರು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ತಪಶ್ಚರ್ಯಾ ಚಕ್ರವರ್ತಿ ಆಚಾರ್ಯ ಶ್ರೀ 108 ಸುವಿಧಿಸಾಗರ ಮಹಾರಾಜರು, ಪರಮಪೂಜ್ಯ ಸಂಯಮಮೂರ್ತಿ ಆಚಾರ್ಯ ಶ್ರೀ 108 ವರ್ಧಮಾನಸಾಗರ ಮಹಾರಾಜರು ಹಾಗೂ ಹಲವು ಜೈನ ಮುನಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು: ಕಂದಾಯ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ. ಸುಧಾಕರ್, ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿ.ಎನ್. ಬಾಲಕೃಷ್ಣ, ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
