ಸಕಲೇಶಪುರ: ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜೀಪ್ ರೇಸ್ ಸ್ಥಳಕ್ಕೆ ದೈತ್ಯಾಕಾರದ ಸಲಗ ಪ್ರವೇಶಿಸಿ ವ್ಯಕ್ತಿಯೊಬ್ಬನ ಮೇಲೆ ದಾಳಿಗೆ ಮುಂದಾದ ಘಟನೆ ನಡೆದಿದೆ.
ಅರಣ್ಯಕ್ಕೆ ಹೊಂದಿಕೊಂಡಿರುವ ಪಾಳು ಬಿದ್ದ ಜಮೀನಿನಲ್ಲಿ ಜೀಪ್ ರೇಸ್ ಏರ್ಪಡಿಸಲಾಗಿತ್ತು. ಹತ್ತಕ್ಕೂ ಹೆಚ್ಚು ಜೀಪ್, ಟೆಂಟ್ ಹಾಕಿ ರೇಸ್ ಆಯೋಜಿಸಿದ್ದರು. ವಾಹನಗಳ ಕರ್ಕಶ ಶಬ್ದಕ್ಕೆ ಅರಣ್ಯದಿಂದ ಓಡಿಬಂದ ಸಲಗ ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿದೆ. ಸೊಂಡಿಲಿನಿಂದ ವ್ಯಕ್ತಿಯನ್ನು ತಿವಿಯಲು ಯತ್ನಿಸಿದೆ. ಅಷ್ಟರಲ್ಲಿ ಮತ್ತೆ ಇಬ್ಬರು ಜೋರಾಗಿ ಕೂಗುತ್ತಾ ಆನೆ ಹತ್ತಿರಕ್ಕೆ ಓಡಿದ್ದರಿಂದ ಸ್ಥಳದಿಂದ ದ್ಯೆತ್ಯಾಕಾರದ ಸಲಗ ಕಾಲ್ಕಿತ್ತಿದೆ. ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
