ಹಾಸನ : ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಬಾಚಿಹಳ್ಳಿ ಗ್ರಾಮದ ಜ್ಯೋತಿ ಎಂಬ ಯುವತಿಗೆ ಮಲತಾಯಿ ಪದ್ಮ ಹಾಗೂ ಪುತ್ರ ಮಂಜೇಶ್ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶಾರದ ಆರೋಪಿಸಿದರು.
ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಜ್ಯೋತಿ ಅಜ್ಜಿ ಬಳಿ ಬೆಳೆದಿದ್ದು, ನಂತರ ಮಲತಾಯಿ ಸರಿಯಾದ ಆಹಾರ ಹಾಗೂ ಮೂಲಭೂತ ಸೌಕರ್ಯ ನೀಡದೇ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಹಿಂಸಿಸುತ್ತಿದ್ದರು ಎಂದು ತಿಳಿಸಿದರು. ಈ ಬಗ್ಗೆ ಗೊರೂರು ಪೊಲೀಸ್ ಠಾಣೆಗೆ ದೂರು ನೀಡಿದರೂ ಕ್ರಮವಾಗಿಲ್ಲ ಎಂದು ದೂರಿದರು.
ಫೆಬ್ರವರಿ 7 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಕ್ಕ ಪಡೆ ತಂಡದ ಸಹಾಯದಿಂದ ಜ್ಯೋತಿಯನ್ನು ರಕ್ಷಿಸಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ವೇಳೆ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಲೈಂಗಿಕ ದೌರ್ಜನ್ಯ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.
ಪ್ರಕರಣದಲ್ಲಿ ವಿಳಂಬವಾಗಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
