ಚನ್ನರಾಯಪಟ್ಟಣ: ಹಿರಿಯ ನಾಗರಿಕನೊಬ್ಬನ ಜೀವಕ್ಕೂ ಇದೀಗ ಭದ್ರತೆ ಇಲ್ಲದಂತಾಗಿರುವ ಆತಂಕಕಾರಿ ಘಟನೆ ಚನ್ನರಾಯಪಟ್ಟಣ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಬೆಕ್ಕ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾರಾಯಣಗೌಡರ ವಿರುದ್ಧವೇ ಅವರದೇ ಕುಟುಂಬ ಕೊಲೆಯ ಸಂಚು ರೂಪಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಆಸ್ತಿ ಲಪಟಾಯಿಸುವ ಉದ್ದೇಶದಿಂದ ನಾರಾಯಣಗೌಡರ ಪತ್ನಿ ಹಾಗೂ ಮಕ್ಕಳು ವ್ಯವಸ್ಥಿತ ಸಂಚು ರೂಪಿಸಿದ್ದು, ವಯೋವೃದ್ಧ ನಾರಾಯಣಗೌಡರನ್ನು ಬೆಂಗಳೂರಿನ ರಿಹ್ಯಾಬಿಲಿಟೇಷನ್ ಕೇಂದ್ರಕ್ಕೆ ಸೇರಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪವೂ ಇದೆ. ಇಷ್ಟೇ ಅಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ನಾರಾಯಣಗೌಡರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಡಪ್ರಭು ಕೆಂಪೇಗೌಡ ವೇದಿಕೆಯ ರಾಜ್ಯಾಧ್ಯಕ್ಷ ಆನಂದ್ ಕುಮಾರ್, ಜಿಲ್ಲಾಡಳಿತ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಹಿರಿಯ ನಾಗರಿಕರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
- ಮಂಜುನಾಥ್ ಐ.ಕೆ
