ರಾಮನಾಥಪುರ, ಮಾ.25: ಇಲ್ಲಿನ ಕಾವೇರಿ ನದಿಯ ವಹ್ನಿ ಪುಷ್ಕರಣಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದ ಪರಿಣಾಮ, ಬಿಸಿಲಿನ ತಾಪಕ್ಕೆ ನೀರು ಬಿಸಿಯಾಗಿ ಕಳೆದ ಎರಡು ದಿನಗಳಿಂದ ಹತ್ತಾರು ಉತ್ತಮ ಮೀನುಗಳು ಸತ್ತಿರುವ ಘಟನೆ ನಡೆದಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಮಾತನಾಡಿದ ಅವರು, ಇಂತಹ ಪುಣ್ಯ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಕಾವೇರಿ ನದಿ ಸಂರಕ್ಷಣೆಗೆ ವಿಶೇಷ ಕಾಯ್ದೆ ರೂಪಗೊಳ್ಳಬೇಕು ಎಂಬುದು ನಮ್ಮ ಸಮಿತಿಯ ಆಶಯವಾಗಿದೆ ಎಂದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ವತಿಯಿಂದ ಕಳೆದ ಹಲವು ವರ್ಷಗಳಿಂದ ನಿರಂತರ ಕಾವೇರಿ ಅಭಿಯಾನ ಯಾತ್ರೆ ಕೈಗೊಳ್ಳಲಾಗುತ್ತಿದ್ದು, ರಾಮನಾಥಪುರದ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದ ವಹ್ನಿ ಪುಷ್ಕರಣಿ ಹಾಗೂ ದೇವಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ, ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಸಮಿತಿಯ ವತಿಯಿಂದ ಕಳೆದ 15 ವರ್ಷಗಳಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾವೇರಿ ಮಠ ಸ್ವಚ್ಛತಾ ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘು, ಸಂಘಟನೆ ಕಾರ್ಯದರ್ಶಿ ಪಿ.ಎನ್.ಟಿ. ಶಿವಪ್ಪ, ತಾಲೂಕು ಅಧ್ಯಕ್ಷ ಸಿದ್ದರಾಜು, ಖಜಾಂಚಿ ಕೇಶವ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ
