
ಹಾಸನ– 10 ದಿನದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಸಾವಿಗೆ ನಾವು ಕೊಡುವ ಪರಿಹಾರ ಶಾಶ್ವತ ಅಲ್ಲ, ಅದು ಕ್ಷಣಕ, ಬದಲಾಗಿ ಶಾಶ್ವತ ಪರಿಹಾರ ಆಗಬೇಕು. ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಸೇರಿ ಮಾಡಬೇಕು ಎಂದು ಶ್ರೇಯಸ್ ಹೇಳಿದರು.
ಈ ವಿಚಾರದಲ್ಲಿ ಎರಡೂ ಸರ್ಕಾರಗಳ ಜವಾಬ್ದಾರಿ ಇದೆ. ಸರ್ಕಾರ, ಜನಪ್ರತಿನಿಧಿಗಳು, ಸಚಿವರು ಒಟ್ಟುಗೂಡಿ ಕೆಲಸ ಮಾಡಬೇಕಿದೆ. ಪರಸ್ಪರ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಬೇಕಿದೆ ಎಂದರು.
ನಾನೂ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇನೆ. ಅಧಿವೇಶನದಲ್ಲೂ ದನಿ ಎತ್ತಿದ್ದೇನೆ. ಆನೆಧಾಮ ನಿರ್ಮಾಣಕ್ಕೆ ಪ್ರಸ್ತಾಪನೆ ಸಿದ್ಧವಾಗಿದೆ. ಇದಕ್ಕಾಗಿ ರಾಜ್ಯ ಬಜೆಟ್ನಲ್ಲಿ ಎಷ್ಟು ಅನುದಾನ ನಿಗದಿ ಮಾಡುತ್ತಾರೋ ಎಂಬುದನ್ನು ನೋಡಿಕೊಂಡು ಕೇಂದ್ರಕ್ಕೂ ಒತ್ತಡ ಹಾಕುವುದಾಗಿ ತಿಳಿಸಿದರು.
ಒಟ್ಟಿನಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇದರಲ್ಲಿ ರಾಜಹಕೀಯ ಬೇಡ, ಎಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ ಕೆಲಸ ಮಾಡಬೇಕು. ಬಂದ್ ಅಥವಾ ಪ್ರತಿಭಟನೆ ಮಾಡಿದರೆ ಪರಿಹಾರ ಸಿಗಲ್ಲ ಎಂದರು.
ಪಕ್ಷಾತೀತವಾಗಿ ಎಲ್ಲರೂ ಕೇಂದ್ರದ ಬಳಿಗೆ ಹೋಗೋಣ, ಪ್ರಯತ್ನ ಎಲ್ಲರ ಕಡೆಯಿಂದ ಶೇ.೧೦೦ ರಷ್ಟು ಇರಬೇಕು. ಇದಕ್ಕಾಗಿ ಎಲ್ಲರೂ ಕೈ ಜೋಡಿಸುವಂತೆ ಮನವಿ ಮಾಡಿದರು. ಹಾಗೆಯೇ ಮೃತರ ಕುಟುಂಬಕ್ಕೆ ಹಾಲಿ ನೀಡುತ್ತಿರುವ ೧೫ ಲಕ್ಷ ಪರಿಹಾರಕ್ಕೆ ಬದಲು ೨೫ ಲಕ್ಷ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಪುರಸ್ಕರಿಸುವುದು ಉಭಯ ಸರ್ಕಾರಗಳಿಗೆ ಬಿಟ್ಟಿದ್ದು ಎಂದರು.
ಮೊನ್ನೆ ಗುಜ್ಜನಹಳ್ಳಿಗೆ ಭೇಟಿ ನೀಡಿದಾಗ ಸ್ಥಳೀಯರು ಅನೇಕ ಸಮಸ್ಯೆ ಹೇಳಿಕೊಂಡಿದ್ದು, ದೊಡ್ಡ ದೊಡ್ಡ ಪ್ಲಾಂಟರ್ಸ್ ಆನೆಗಳ ಚಲನವಲನದ ಬಗ್ಗೆ ಕಾರ್ಮಿಕರಿಗೆ ತಿಳಿಸಬೇಕು. ಸಾಧ್ಯವಾದರೆ ರಜೆ ಕೊಡಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಮಿಕರನ್ನು ಕರೆತಂದು ಬಿಡುವ ವಾಹನ ವ್ಯವಸ್ಥೆ ಮಾಡಬೇಕು.
ಕೆಲಸ ವೇಳೆ ಬದಲು ಮಾಡಿ, ಕಾರ್ಮಿಕರ ಹಿತ ಕಾಯಿರಿ ಎಂದು ಇದೇ ವೇಳೆ ಮನವಿ ಮಾಡಿದರು.