ಪ್ರತಿಯೊಬ್ಬರು ಮತ್ತು ಸರಕಾರ ಕೇಳಿಕೊಳ್ಳಬೇಕಾದ ಪ್ರಾಮಾಣಿಕ ಪ್ರಶ್ನೆ ಶಿಕ್ಷಣದ ಮೂಲ ಉದ್ದೇಶವೇನು?
ನಾನು ಈ ಹಿಂದೆ ಸ್ವತಃ ಒಂದು ವಿದ್ಯಾಸಂಸ್ಥೆ ಕಟ್ಟಿ 2000 ರಿಂದ 2015 ಧಾರವಾಡದಲ್ಲಿ ನಡೆಸಿದ್ದೇನೆ. ಆ ಅನುಭವ ಮೇಲಿಂದ “ನಾನು” ಮಾತ್ನಾಡುತ್ತಿದ್ದೇನೆ.
ಸಾವಿರಾರು ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ.
ಅವರ ಕಣ್ಣುಗಳಲ್ಲಿ ನಾನು ಕಂಡದ್ದು ಅಂಕಗಳ ಆಸೆ ಮಾತ್ರವಲ್ಲ —
ಕಷ್ಟ, ಕನಸು, ಭವಿಷ್ಯದ ಭಯ, ಬದುಕಿನ ಭದ್ರತೆಯ ತವಕ.
ಅವರ ಬಹುತೇಕ ನಂಬಿಕೆ ಒಂದೇ:
“ಸರಕಾರಿ ಕೆಲಸ ಸಿಕ್ಕರೆ ಜೀವನ ಸೇಫ್.”
ಈ ಒಂದು ವಾಕ್ಯವೇ ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯ ಅತಿದೊಡ್ಡ ದುರಂತ.
ನೀವು ಸರಕಾರಿ ನೌಕರಿ ಮೇಲೆ ಜೀವನ ಅವಲಂಬಿತವಾಗಿಸಲು ಬಯಸಬೇಡಿ.. ನೀವೇ ನೂರಾರು ಜನರಿಗೆ ಉಧ್ಯೋಗ ಸೃಷ್ಟಿಸುವವರು ಆಗಿ…ಆಗ ಸರಕಾರವೇ ನಿಮ್ಮ ಬಾಗಿಲಗೆ ಬರುತ್ತದೆ…ಎಂದು ಹೇಳುತ್ತಿದ್ದೆ.
ಇದೂ ಕೇವಲ Motivation speach ಅಲ್ಲಾ ˌ ಸರಕಾರ ಯಾರ ಮುಂದೆ ತಲೆ ಬಾಗುತ್ತಿದೆ? ಈ ಶಿಕ್ಷಣ ವ್ಯವಸ್ಥೆ ಯಾರನ್ನು ತಯಾರಿಸುತ್ತೀದೆ??? ವಿಶ್ವವಿದ್ಯಾಲಯಗಳು ನಿರುಧ್ಯೋಗಿಗಳನ್ನು ತಯಾರಿಸುವ ಕಾರಖಾನೆಗಳಾಗಿವೆ.
ಶಿಕ್ಷಣ = ಸರಕಾರಿ ಕೆಲಸ? ಈ ಅಪಾಯಕಾರಿ ಭ್ರಮೆ ಹೇಗೆ ಹುಟ್ಟಿತು? ಇದನ್ನು ಭಿತ್ತಿದವರು ಯಾರು? ಬಡ ರಾಷ್ಟ್ರಗಳಲ್ಲಿ ಅಥವಾ ಹಿಂದುಳಿದ ರಾಷ್ಟ್ಗಗಳಲ್ಲಿ ಸರಕಾರದ ನೌಕರಿಯೆಂಬುವುದು ಮುಖ್ಯ ಗುರಿಯಾಗಿದೆ… ಮುಂದುವರಿದ ರಾಷ್ಟ್ರಗಳಲ್ಲಿ ಸರಕಾರಿ ನೌಕರಿ ಕೇವಲ ಒಂದು ಸಾಧ್ಯತೆಯಷ್ಟೆ…
ಅಷ್ಟಕ್ಕೂ ಸರಕಾರಿ ನೌಕರಿ ಯಾಕೆ ಬೇಕು? ಆಳವಾಗಿ ನಿಮ್ಮೊಳಗೆ ಪ್ರಶ್ನಿಸಿಕೊಳ್ಳಿ. ಒಂದು ಆರ್ಥಿಕ ಭದ್ರತೆಗೆˌ ಸಾಮಾಜಿಕ ಪ್ರತಿಷ್ಟೆಗೆˌ ಹೆಣ್ಣು ಗಂಡು ಮದುವೆ ಸಂಬಂಧ ಬೆಳೆಸಲುˌ ಆರಾಮವಾಗಿ ಗಿಂಬಳ ಪಡೆಯಲು… ಸಾಧ್ಯವಾದ್ರೆ ಒಂದಿಷ್ಟು ಜನರಿಗೆ ಸಹಾಯ ಮಾಡಲು ( ಇದೂ ಕೆಲವೇ ಜನರ ಆಶೆಯ) ಬಹುತೇಕರು ಸರಕಾರಿ ಕೆಲಸವೆಂದರೆ ˌ ಅದೊಂದು ಅತೀ ಹೆಚ್ಚು ಕಷ್ಟಪಡದ ಆರಾಮದಾಯಕ ಜೀವನ ಎಂದುಕೊಂಡು ಸರಕಾರಿ ನೌಕರಿ ಹಿಂದೆ ಬೆನ್ನು ಬಿದ್ದಿದ್ದಾರೆ… ನಾನು ನೋಡಿದ್ಧೇನೆ 20 ಎಕರೇ ಹೊಲ ಇರುವವನು ಕೂಡಾ ಶಹರದಲ್ಲಿ ಕೆಲವು ಸಾವಿರಗಳಲ್ಲಿ ಕೆಲಸ ಮಾಡುತ್ತಿದ್ದಾನೆ… ಅವನು ಹೊಲದಲ್ಲಿ ಸರಿಯಾಗೀ ಕೆಲಸ ಮಾಡಿದ್ರೆ 20 ಜನರಿಗೆ ನೌಕರಿ ಕೊಡಬಹುದು.
ಎಲ್ಲರ ಪರಿಸ್ಥಿತಿ ಹೀಗೆ ಇರುವುದಿಲ್ಲಾ ಎಂದುಕೊಳ್ಳೊಣಾ..! ಶಿಕ್ಷಣ ಸರಕಾರಿ ಉಧ್ಯೋಗ ಭ್ರಮೆಯನ್ನು ಏಕೆ ಭಿತ್ತುತ್ತಿದೆ? ಶಿಕ್ಷಣದಿಂದ ಪ್ರಾಮಾಣಿಕ ಜೀವನ ನಿರ್ವಹಣೆ ಸಾವಿರ ಮಾರ್ಗಗಳನ್ನು ತಿಳಿಸಬೇಕು…ಅದು ನಿಜ ಶಿಕ್ಷಣ.
ಭಾರತದಲ್ಲಿ ಶಿಕ್ಷಣವೆಂಬುವುದು ಬಜೆಟ್ ದಲ್ಲಿ ಅನುತ್ಪಾದಕ. Waste investment. ಅಂದರೆ ಭಾರತದಲ್ಲಿ ಶಿಕ್ಷಣವೆಂಬುವುದು ಹೇಗೋ ಅಷ್ಟಕಷ್ಟೆ… ಯಾಕೆಂದ್ರೆ ನಮ್ಮ ರಾಜಕಾರಣಿಗಳ ಶಿಕ್ಷಣವೆಂಬುವುದು ಗೃಹ ಸಚಿವಲಾಯˌ ಆರ್ಥಿಕ ಸಚಿವಲಾಯˌ ಇಂಧನˌ ಕೈಗಾರಿಕೆ…ಅಂಥ ಆದಾಯ ತರುವ ಇಲಾಖೆಯಲ್ಲ.. ಹೀಗಾಗಿ ಈ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚರ್ಚೆಯೆ ಆಗುವುದಿಲ್ಲ. ಏಕೆಂದ್ರೆ ರಾಜಕಾರಣಿಗಳಿಗೆ ಇದೂ ಆದಾಯದ ಮೂಲವಲ್ಲ. ಆದರೇ ದೇಶದ ಅಭಿವೃದ್ಧಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಇದೆ. ಶಿಕ್ಷಣ ನಮ್ಮ ವ್ಯವಸ್ಥೆಯ ಮೂಲ ಬೇರು… ಆ ಬೇರಿಗೆ ನಾವು ಸರಿಯಾಗಿ ಪೋಷಣೆ ಮಾಡದೆಯಿರುವುದರಿಂದ ಬಡ ರಾಷ್ಟ್ರಗಳು ಎಕ್ಕುಟ್ಟು ಹೋಗುತ್ತಿವೆ…
ಮುಂದುವರಿದ ರಾಷ್ಟ್ರಗಳಲ್ಲಿ ಸರಕಾರಿ ನೌಕರಿ ಭ್ರಮೆ ಕಡಿಮೆಯಿದೆ… ಅಲ್ಲಿ ನೋಡಿ ಸ್ವ ಉಧ್ಯೋಗ ಹೆಚ್ಚಿದೆ…ಚೀನಾ ನೋಡಿˌಅಲ್ಲಿನ ಶಿಕ್ಷಣ ವ್ಯವಸ್ಥೆ ನೋಡಿ…ಹೇಗೆ ಯುವಜನಾಂಗವನ್ನು ತಯಾರು ಮಾಡುತ್ತಿದೆ…ನೀವು ಈ ಮಾಹಿತಿಗಳನ್ನೆಲ್ಲಾ “ಗೂಗಲ್ ಗುರು”ಗಳ ಮೂಲಕ ಶೋಧಿಸಿ ನೋಡಿ. ಆದರೇ ಭಾರತದಲ್ಲಿ ನಾವು ಏನೂ ಯುವಕರಿಗೆ ಟ್ರೈನ್ ಮಾಡುತ್ತಿದ್ದೇವೆ??
ನಮ್ಮ ಸಮಾಜದಲ್ಲಿ ನಿಧಾನವಾಗಿ ಆದರೆ ಗಾಢವಾಗಿ ಒಂದು ಭಾವನೆ ನೆಲೆಸಿದೆ:
ಶಿಕ್ಷಣ ಅಂದರೆ —
ಸರಕಾರಿ ಉದ್ಯೋಗ ಪಡೆಯಲು ತಯಾರಾಗುವುದು.
ಅದಿಲ್ಲದಿದ್ದರೆ ಜೀವನ ವಿಫಲ. ಆತ್ಮಹತ್ಯೆ ಮಾಡಿಕೊಳ್ಳುವುದುˌ ನಿರಾಶೆˌ ಹತಾಶೆ ಜೀವನ ಸಾಗಿಸುವುದುˌ
ಇದು ಮೂರ್ಖವಾದವೋ? ಇಲ್ಲಾˌ ಇದು ರಾಜಕೀಯವಾಗೀ ವ್ಯವಸ್ಥಿತವಾಗಿ ಬೆಳೆಸಲಾದ ಭ್ರಮೆಯೋ?
ನಾನು ಇಲ್ಲಿ ಒಂದು ವಿಷಯ ಸ್ಪಷ್ಟವಾಗಿ ಹೇಳಬೇಕು:
ನಾನು ಸರಕಾರಿ ಉದ್ಯೋಗದ ವಿರೋಧಿ ಅಲ್ಲ.
ಅರ್ಹರಿಗೆ, ಓದಿದವರಿಗೆ ಸರಕಾರಿ ಉದ್ಯೋಗ ಸಿಗಬೇಕು. ವಾಸ್ತವದಲ್ಲಿ ನನ್ನ ಮಗ ಕೂಡಾ ಈ ಓಟದಲ್ಲಿ ಇದ್ದಾನೆ…
ಆದರೆ ಪ್ರಶ್ನೆ ಇದು —
ಸರಕಾರಕ್ಕೆ ಅಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಶಕ್ತಿಯಿದೆಯೇ?
ಸಂಖ್ಯೆಗಳೇ ಮಾತಾಡುತ್ತವೆ
ಇಂದಿನ ವಾಸ್ತವ ಏನು?
ಕರ್ನಾಟಕ ಸರಕಾರದಲ್ಲಿ ಸುಮಾರು 2.7 ಲಕ್ಷ ಉದ್ಯೋಗ ಖಾಲಿˌ ಕೆಂದ್ರದಲ್ಲಿ ಏಷ್ಟೂ ಇವೆ?
ಕರ್ನಾಟಕದಲ್ಲಿ ಅರ್ಜಿದಾರರು — 20 ಲಕ್ಷಕ್ಕಿಂತ ಹೆಚ್ಚು
ಅಂದರೆ?
2 ಲಕ್ಷ ಜನರಿಗೆ ಕೆಲಸ ಸಿಕ್ಕರೂ
ಉಳಿದ 18 ಲಕ್ಷ ಜನ ನಿರುದ್ಯೋಗಿಗಳೇ.
ಮುಂದಿನ ವರ್ಷ?
ಈ ಅನುಪಾತ ಡಬಲ್, ಟ್ರಿಪಲ್.
ಇದು ಗಣಿತ.
ಇದು ರಾಜಕೀಯ ಭಾಷಣವಲ್ಲ.
ಸರಕಾರದ ಮೌನದ ಹಿಂದಿನ ಸತ್ಯ
ಸರಕಾರದ ಆದಾಯದ 30%–35% ಈಗಾಗಲೇ
ಸಂಬಳ, ನಿವೃತ್ತಿ ವೇತನ, ಪಿಂಚಣಿ ನಿರ್ವಹಣೆಗೆ ಹೋಗುತ್ತಿದೆ.
ಮೇಲೆ:
ಉಚಿತ ಯೋಜನೆಗಳು…
ಇದನ್ನು ಹೊರುತ್ತೀರುವವರು ಯಾರು? ಇದೂ ಅಪರೋಕ್ಷವಾಗಿ
ಸಾಮಾನ್ಯರ ಮೇಲೆ ಹೆಚ್ಚುತ್ತಿರುವ ತೆರಿಗೆ ಭಾರ…
ಸರಕಾರಗಳು ತಮ್ಮ ಸಹಭಾಗಿತ್ವವನ್ನು ಜನರೊಂದಿಗೆ ಹೊಂದಲು ಕಷ್ಟವಾಗಿ ವೇಗವಾಗಿ ಖಾಸಗೀಕರಣದ ಭಾರ ಒತ್ತಡ ಹೆಚ್ಚಾಗುತ್ತಲೆ ಇದೆ..
ಸರಕಾರ ಒಂದು ಸಂಗತಿಯನ್ನು ಪ್ರಾಮಾಣಿಕವಾಗಿ ಹೇಳಲು ಧೈರ್ಯ ಮಾಡುತ್ತಿಲ್ಲ:
“ನಾವು ಎಲ್ಲರಿಗೂ ಸರಕಾರಿ ಕೆಲಸ ಕೊಡಲು ಸಾಧ್ಯವಿಲ್ಲ.”
ಏಕೆ?
ಅದನ್ನು ಒಪ್ಪಿಕೊಂಡರೆ
ಸರಕಾರ ತನ್ನದೇ ದಿವಾಳಿತನವನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಅದರ ಫಲಿತಾಂಶ — ಸಾಮಾಜಿಕ ಅಶಾಂತಿ, ಅರಾಜಕತೆ.
ಹೀಗಾಗಿ —
ಮೌನ, ನಿರಾಕರಣೆ, ನಿರ್ವಹಣೆ.
ರಾಜಕೀಯ ಆಟದಲ್ಲಿ ಸಿಕ್ಕಿಹಾಕಿಕೊಂಡ ಯುವಕರು
ಕೇಂದ್ರ ಸರಕಾರ ವರ್ಷಕ್ಕೊಮ್ಮೆ
“ಎರಡು ಕೋಟಿ ಉದ್ಯೋಗ” ಎಂದು ಹೇಳುತ್ತದೆ.
ರಾಜ್ಯ ಸರಕಾರ ನಿರುದ್ಯೋಗದ ಮೇಲೆ ಮಾತಾಡಿ ಅಧಿಕಾರಕ್ಕೆ ಬರುತ್ತದೆ.
ಆದರೆ ಅಧಿಕಾರಕ್ಕೆ ಬಂದ ಮೇಲೆ?
ಅಸಹಾಯಕತೆ.
ಇದರಲ್ಲಿ ತಪ್ಪು ಯಾರದು?
ಕೇಂದ್ರದಾ? ರಾಜ್ಯದಾ?
ನನ್ನ ಪ್ರಶ್ನೆ :
ಯುವಕರಿಗೆ ಶಿಕ್ಷಣದ ನಿಜವಾದ ಉದ್ದೇಶವೇನು ಎಂಬುದನ್ನು ಯಾರು ಹೇಳುತ್ತಿದ್ದಾರೆ?
ನಮಗೆ ಬೇಕಿರುವುದು ಬೇರೆ ದಾರಿ
ಚೀನಾ, ಜರ್ಮನಿ, ಜಪಾನ್ ನೋಡೋಣ.
ಅವರು ಶಿಕ್ಷಣವನ್ನು ಉದ್ಯೋಗಕ್ಕೆ ಮಾತ್ರ ಕಟ್ಟಿಲ್ಲ.
ಕೌಶಲ್ಯಕ್ಕೆ ಕಟ್ಟಿದ್ದಾರೆ.
ತಾಂತ್ರಿಕ ಶಿಕ್ಷಣ
ಕೌಶಲ್ಯಾಧಾರಿತ ತರಬೇತಿ
ಸ್ವಉದ್ಯೋಗ
ಉದ್ಯಮಶೀಲತೆ
ನಮ್ಮಲ್ಲೂ ಇದು ಆರಂಭವಾಗಬೇಕು.
ಸರಕಾರ ಪ್ರಾಮಾಣಿಕವಾಗಿ ಹೇಳಬೇಕು:
“ಸರಕಾರಿ ಉದ್ಯೋಗ ಖಾತರಿ ಇಲ್ಲ.”
“ಆದರೆ ಕೌಶಲ್ಯ, ಸ್ವಉದ್ಯೋಗ, ಸಾಲ ಸೌಲಭ್ಯಕ್ಕೆˌ ಸಣ್ಣ ಕೈಗಾರಿಕೆˌ ಮಧ್ಯಮ ಕೈಗಾರಿಕೆˌ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹಕ್ಕೆ ನಾವು ಸಿದ್ಧ” ಎಂದು ಘೋಷಣೆ ಮಾಡಬೇಕು.
ಇದು ಕಠೋರ ಸತ್ಯ.
ಆದರೆ ಕಠೋರ ಸತ್ಯವೇ ಯುವಕರನ್ನು ಉಳಿಸುತ್ತದೆ.
ಖಾಸಗೀಕರಣ ಮತ್ತು ದ್ವಂದ್ವ ರಾಜಕಾರಣ
ಒಂದು ಕಡೆ:
ಸರಕಾರಿ ಸಂಸ್ಥೆಗಳ ಖಾಸಗೀಕರಣ.
ಇನ್ನೊಂದು ಕಡೆ:
ಸರಕಾರಿ ಉದ್ಯೋಗದ ಕನಸು ತೋರಿಸುವ ರಾಜಕಾರಣ.
ಇದು ಯಾರಿಗೆ ಮೋಸ?
ಯುವಕರಿಗೆ.
ಮೂಗಿಗೆ ತುಪ್ಪ ಹಚ್ಚಿ
ಹಿಂದಿನಿಂದ ಅವಕಾಶ ಕಿತ್ತುಕೊಳ್ಳುವ
ಮುಂದಿನಿಂದ ಭರವಸೆ ಕೊಡುವ
ಈ ದ್ವಂದ್ವವನ್ನು ಪ್ರಶ್ನಿಸಬೇಕು.
ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು ಸರಕಾರಕ್ಕೆ ಪ್ರತಿಯೊಬ್ಬರಿಗೂ ಉಧ್ಯೋಗ ಕೊಡಲು ಪ್ರಾಮಾಣಿಕವಾಗಿ ಸಾಧ್ಯವೇ? ನಮ್ಮ ಈಡೀ ವ್ಯವಸ್ಥೆಯಲ್ಲಿ ಎಲ್ಲರೂ ಇಂಜನೀಯರ್ ˌ ಡಾಕ್ಟರ್ ˌ Ias /kas ಒಟ್ಟು ಯಾವುದಾದ್ರೂ ಸರಕಾರಿ ನೌಕರಿ ಸಿಗಬೇಕು ಎಂಬ ಆಳವಾದ ಕಂಡಿಷನ್ ದಿಂದ ಹೊರ ಬರಬೇಕು. ಎಲ್ಲರೂ ಹೇಳುತ್ತಾರೆˌ “ರೈತ ಈ ದೇಶದ ಬೆನ್ನೆಲುಬು” ಎಂದು ಆದರೆ ವಿಪರ್ಯಾಸವೆಂದರೆˌ ರೈತ ಕೂಡಾ “ಹೊಲ ಹೋದ್ರೆ ಹೋಗಲಿ ಮಗ/ಮಗಳಿಗೆ ಸರಕಾರಿ ನೌಕರಿ ಬೇಕು. ಯಾಕೆ? ಏನಾಗಿದೇ? ಧಾರವಾಡಕ್ಕೆ ಪ್ರತಿವರ್ಷ ಸಾವಿರಾರು ಹಣ ಖರ್ಚು ಮಾಡಿ ಲಕ್ಷಾಂತರ ವಿದ್ಯಾರ್ಥಿಗಳು ಬರುತ್ತಾರೆˌ ಫಲಿತಾಂಶವೇನು? ಮತ್ತೇ ನಿರಾಶೆಯಿಂದ ಹಿಂದಿರುಗುತ್ತಾರೆ.
ಸಂತೋಷದ ಕಿರಣವೆಂದರೆˌ ಧರ್ಮ ˌ ಕೋಮುˌ ಭಾಷೆˌ ಗಡಿಗಳ ವಿಷಯಗಳಿಂದ ಯುವಕರು ಹೊರಬಂದು
ಈ ಎಲ್ಲ ಗದ್ದಲದ ಮಧ್ಯೆ ಶಿಕ್ಷಣ, ಆರೋಗ್ಯ, ಉದ್ಯೋಗ, ಖಾಸಗೀಕರಣ, ಬಡತನ
ಇವುಗಳ ಬಗ್ಗೆ ಚರ್ಚೆ ಮುನ್ನಲೆಗೆ ಬರುತ್ತಿದೆ.
ಧಾರವಾಡದ ಯುವಕರ ಹೋರಾಟ
ಈ ಅರ್ಥದಲ್ಲಿ ಶ್ಲಾಘನೀಯ.
ಆದರೆ ಒಂದು ಎಚ್ಚರಿಕೆ:
ರಾಜಕೀಯ ಈ ಹೋರಾಟವನ್ನು ದಾರಿ ತಪ್ಪಿಸಬಾರದು.
ಯುವಕರ ಪ್ರಶ್ನೆಗಳು ಪಕ್ಷಗಳ ಅಸ್ತ್ರವಾಗಬಾರದು.
ನಮ್ಮ ತಲೆಮಾರು ಅನೇಕ ಹೋರಾಟಗಳನ್ನು ನೋಡಿದೆˌ ಜೆಪಿ ಚಳುವಳಿˌ ರೈತ ಚಳುವಳಿˌ ದಲಿತ ಚಳುವಳಿˌ ಪ್ರಗತಿಪರ ಚಳುವಳಿˌ ಕನ್ನಡ ಹೋರಾಟ… ಆದರೇ ಅವುಗಳಿಂದ ಒಬ್ಬ ನಾಯಕ ಹುಟ್ಟಿ ಅವನು ಅಧಿಕಾರ ಹೊಂದಿ ಆ ಈಡೀ ಜನ ಸಮುದಾಯದ ಚಳುವಳಿಯ ಆಶೆಯವನ್ನೆ ಕೊಂದು ಸತ್ತವರನ್ನು ನೋಡಿದ್ದೇವೆ… ಹೀಗಾಗಿ ಚಳುವಳಿಗಳು ಪ್ರಶ್ನಾತೀತವಾಗಿಲ್ಲ… ಸಂಶಯಾತ್ಮಕವಾಗಿವೆˌ ಅನೇಕ ಪ್ರಚೋದನೆˌ ರಾಜಕೀಯ ಪ್ರೇರಿತವಾಗಿರುತ್ತವೆ. ವಿದ್ಯಾರ್ಥಿಗಳು ಯುವಕರು ಯಾವುದೋ ರಾಜಕೀಯ ಹಿತಾಸಕ್ತಿ ಬಲಿಯಾಗದೆˌ ಪ್ರಸ್ತುತ ವಾಸ್ತವತೆ ತಿಳಿದಿರಲಿ… ಸಮೂಹವೇ ನಾಯಕವಾಗಬೇಕು… ಯಾರನ್ನು ನಾಯಕವಾಗಿಸಬಾರದು…
ಕೊನೆಯ ಮಾತು
ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಅಲ್ಲ.
ಅದು ಆತ್ಮವಿಶ್ವಾಸ, ಕೌಶಲ್ಯ, ಚಿಂತನೆಗಾಗಿ.
ಸರಕಾರಿ ಕೆಲಸ ಒಂದು ದಾರಿ.
ಆದರೆ ಅದು ಏಕೈಕ ಮಾರ್ಗ ಅಲ್ಲ.
ಈ ಸತ್ಯವನ್ನು
ಸರಕಾರವೂ ಹೇಳಬೇಕು.
ಸಮಾಜವೂ ಒಪ್ಪಬೇಕು.
ಯುವಕರೂ ಅರಿಯಬೇಕು.
ಅಲ್ಲಿಯವರೆಗೆ —
ಈ ಪ್ರಶ್ನೆ ಕಾಡುತ್ತಲೇ ಇರುತ್ತದೆ:
ನಾವು ಯುವಕರನ್ನು ತಯಾರಿಸುತ್ತಿದ್ದೇವೆಯೋ?
ಅಥವಾ ಭ್ರಮೆಗಳಲ್ಲಿ ಬದುಕಲು ಕಲಿಸುತ್ತಿದ್ದೇವೆಯೋ?
ಈ ಪ್ರಸ್ತುತ ಸಂದರ್ಭದಲ್ಲಿ ಸಂಕ್ಷೀಪ್ತವಾಗಿ ನಾನು ಹಲವಾರು ಸಾಧ್ಯತೆಗಳ ಮಗ್ಗಲುಗಳ ತೋರಿದ್ದೇನೆ ಅಷ್ಟೆ…
✍️ *ಜಯದೇವ ಪೂಜಾರ*
7676870233
