ಬುದ್ದಿವಂತರು ಯಾರು.....? ಬುದ್ದಿವಂತಿಕೆಯಿಂದ ಹೇಳಿ.....!
ಕಳೆದ ವಾರ, ಅಮ್ಮ, ನನ್ನನು ಕರೆದು, ʼಸಂತೆಗೆ ಕರೆದುಕೊಂಡು ಹೋಗು, ಮನೆಗೆ ಬೇಕಾದ ತರಕಾರಿ ತರಬೇಕುʼ ಎಂದರು. ಅವರಿಗೆ ಸ್ವಲ್ಪ ಮೈ ಹುಷಾರಿಲ್ಲದ ಕಾರಣ, ನಾನು, ʼನಿನಗೆ ಯಾಕೋ ಆರೋಗ್ಯ ಸರಿಯಾಗಿರುವ ಹಾಗೇ ಕಾಣುತ್ತಿಲ್ಲ, ನಾನೇ ಹೋಗಿ ತರಕಾರಿ ತರುತ್ತೇನೆ ಬಿಡಮ್ಮʼ ಎಂದು ಹೇಳಿದೆ. ಅದಕ್ಕೆ ಅಮ್ಮ, ʼನಿನಗೆ ಗೊತ್ತಾಗೋದಿಲ್ಲ, ಅಲ್ಲಿ ಅವರು ನಿನಗೆ ಒಳ್ಳೆಯ ತರಕಾರಿ ಕೊಡುವುದಿಲ್ಲ. ಪರವಾಗಿಲ್ಲ ನನ್ನನ್ನು ಅಲ್ಲಿ ಬಿಡು ಸಾಕು ನಾನೇ ತರುತ್ತೇನೆʼ ಎಂದರು.
ನಾನು ʼಏಕಮ್ಮ ಹೀಗೆ ಹೇಳುತ್ತೀಯಾ ? ನಾನು ದುಡ್ಡ ಕೊಟ್ಟು ತಾನೇ ತರುತ್ತೇನೆ. ಯಾಕೆ ಅವರು ನನಗೆ ಒಳ್ಳೆಯ ತರಕಾರಿ ಕೊಡುವುದಿಲ್ಲ ? ನನಗೂ ಬುದ್ಧಿ ಇದೆ. ಎನ್ನುವ ದಾಟಿಯಲ್ಲಿ ಪ್ರಶ್ನಿಸಿದೆ. ಅದಕ್ಕೆ ಅವರು,ʼನಿನ್ನ ಬುದ್ಧಿವಂತಿಕೆ, ಇಲ್ಲಿ ನಡೆಯುವುದಿಲ್ಲ. ಅವರು ನಿನಗಿಂತಲೂ ಬುದ್ಧಿವಂತರು. ಅವರು ನಿನ್ನನ್ನು ಯಾಮಾರಿಸಿ ಬಿಡುತ್ತಾರೆ. ಸುಮ್ಮನಿರು ನಾನೆ ಹೋಗಿ ತರುತ್ತೇನೆʼ ಎಂದರು. ಅಲ್ಲಿಗೆ ನಮ್ಮ ವಾದ ಮುಗಿಸಿ, ನಂತರ ಅಮ್ಮನನ್ನು ಸಂತೆಗೆ ಕರೆದುಕೊಂಡು ಹೋಗಿ ಬಂದೇವು.
ಇಲ್ಲಿ ನಮ್ಮ ಆಮ್ಮ ಯಾಕೆ ಆ ರೀತಿ ಹೇಳಿದರು ? ನಾನು ವಿದ್ಯಾವಂತ, ನನಗೆ ಯಾಕೆ ವ್ಯಾಪಾರ ಮಾಡಿ ಮನೆಗೆ ತರಕಾರಿಗಳನ್ನು ತರಲು ಆಗುವುದಿಲ್ಲ ! ಹಾಗಾದರೆ ಮಾರುಕಟ್ಟೆಯಲ್ಲಿ ತರಕಾರಿ ಮಾರುವವರು ನನಗಿಂತಲೂ ಬುದ್ಧಿವಂತರೆ, ಅವರು ಹೇಗೆ ನನ್ನನ್ನು ಯಾಮಾರಿಸುತ್ತಾರೆ ಎಂದು ಯೋಚಿಸುತ್ತಿದ್ದಾಗ ನನ್ನ ಅರಿವಿಗೆ ಬಂದಿದ್ದು ಇಂತಿಷ್ಟು….!

ಈ ವಿಷಯನ ದೊಡ್ಡ ಪ್ರಮಾಣದಲ್ಲಿ ಯೋಚಿಸುವುದಾದರೆ, ದೇಶದಲ್ಲಿ ನಿರ್ಮಿಸುವ ದೊಡ್ಡ ದೊಡ್ಡ ಕಟ್ಟಡಗಳು, ರಸ್ತೆಗಳು, ಸೇತುವೆಗಳು, ಇನ್ನೂ ಅನೇಕ ಮೂಲಭೂತ ಸೌಕರ್ಯಗಳ ವಿಷಯದಲ್ಲಿ ನೋಡುವುದಾದರೆ, ಒಬ್ಬ ಗುತ್ತಿಗೆದಾರನು ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ, ರಸ್ತೆಗಳು ಕಟ್ಟಡಗಳು ನಿರ್ಮಿಸುತ್ತಾನೆ. ಇಲ್ಲಿ ಆತ ತನ್ನ ಬುದ್ಧಿವಂತಿಕೆಯನ್ನು ಬಳಸಿ ಸರ್ಕಾರಕ್ಕೆ ಮತ್ತು ನಾಗರೀಕ ಸಮಾಜಕ್ಕೆ ಗೋತ್ತಾಗದ ರೀತಿ, ಮೋಸಮಾಡಿ ಹಣ ಗಳಿಸುತ್ತಾನೆ. ಇಂಥವರನ್ನು ಜನರು ಬುದ್ಧಿವಂತ ಎಂದು ಪರಿಗಣಿಸಿ, ಅವನು ತುಂಬಾ ಬುದ್ಧಿವಂತ, ತನ್ನ ಬುದ್ದಿವಂತಿಕೆಯಿಂದ ಎಂದು ಹೊಗಳಿ ತನ್ನ ಶ್ರೇಣಿ ವ್ಯವಸ್ಥೆಯಲ್ಲಿ ಉನ್ನತ ಸ್ಥಾನವನ್ನು ಕೊಟ್ಟು ಮೆರೆಸುವುದನ್ನು ನೋಡಿದ್ದೇವೆ.
ಇಲ್ಲಿ ವ್ಯಾಪಾರಿ, ಗುತ್ತಿಗೆದಾರರ ಅಥವಾ ಮೋಸ ಮಾಡುವ ವ್ಯಕ್ತಿಗಳ ಬುದ್ಧಿವಂತಿಕೆಯು ನಿಜವಾದ ಬುದ್ಧಿವಂತಿಕೆಯೇ ಎನ್ನುವುದನ್ನು ನೋಡಬೇಕು. ಹಾಗಾದರೆ ಇಲ್ಲಿ ನಿಜವಾದ ಬುದ್ಧಿವಂತಿಕೆ ಎಂದರೆ ಏನು ? ಅಂದರೆ, ತನ್ನ ಕೌಶಲ್ಯದಿಂದ ಮೋಸ ಮಾಡುವುದು ಯಾಮಾರಿಸಿ ಲಾಭಗಳಿಸುವುದಾ? ಅಲ್ಲ. ಬುದ್ಧಿವಂತಿಕೆ ಎನ್ನುವುದು “ಯಾವುದೇ ವಿಷಯ ಹಾಗೂ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ನಿಭಾಯಿಸಲು ಒಬ್ಬ ಮನುಷ್ಯನಿಗೆ ಇರಬೇಕಾದ ಸಾಮರ್ಥ್ಯ ಹಾಗೂ ಗುಣ “ ಎಂದರೆ ಯಾರು, ತನ್ನ ಶಕ್ತಿ-ಸಾಮರ್ಥ್ಯವನ್ನು ಸಮಾಜದ ಒಳಿತಿಗೆ ಒಳ್ಳೆಯ ಉದ್ದೇಶದಿಂದ ಬಳಸುತ್ತಾರೋ, ಅಂತವರನ್ನು ಬುದ್ದಿವಂತರೆನ್ನಬಹುದು.
ಆದರೆ ನಾವು ಇಲ್ಲಿ ಮೋಸ ಮಾಡುವವರಿಗೆ, ತಪ್ಪು ಮಾಡಿ ಸಮಾಜಕ್ಕೆ, ಜನರಿಗೆ ದ್ರೋಹ ಮಾಡಿ ಅದರಿಂದ ಲಾಭ ಮಾಡಿಕೊಳ್ಳುವವರನ್ನು “ಬುದ್ಧಿವಂತ” ಎಂಬ ಸಕಾರಾತ್ಮಕ ಪದ ಬಳಸಿ ಅವರನ್ನು ಹೊಗಳಿ ಹಟ್ಟಕ್ಕೆ ಏರಿಸುವುದು ಎಷ್ಟು ಸರಿ??
ಇಲ್ಲಿ ನಾವು, ಒಂದು ಸಮಾಜವಾಗಿ, ಮಾನವ ಪ್ರಜ್ಞೆಯಿಂದ ಯೋಚಿಸುವುದಾದರೆ, ಹೀಗೆ ತನ್ನ ಬುದ್ಧಿವಂತಿಕೆಯನ್ನು ನಕಾರಾತ್ಮಕವಾಗಿ ಕೆಟ್ಟದಾಗಿ ಬಳಸಿಕೊಂಡು, ಮುಂದೆ ಬರುವವರನ್ನು ನಾವು ಪ್ರಾರಂಭದಲ್ಲಿ ಪ್ರೋತ್ಸಾಹಿಸುವುದರಿಂದ. ಇಂಥವರೇ ಮುಂದೆ ಹೆಮ್ಮೆರವಾಗಿ ಬೆಳೆದು ಸಮಾಜದಲ್ಲಿ ಉನ್ನತ ಸ್ಥಾನಗಳಲ್ಲಿ ಕುಳಿತು ದೊಡ್ಡ ಪ್ರಮಾಣದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿಬಿಡುತ್ತಾರೆ. ಅಂದರೆ ಪ್ರಾರಂಭದಲ್ಲೇ ಸಣ್ಣಪುಟ್ಟ ಮೋಸ ಮಾಡಿ ಹಣ ಗಳಿಸಿ ನಂತರ ಸಮಾಜದಲ್ಲಿ ದೊಡ್ಡ ಸ್ಥಾನಗಳಲ್ಲಿ ಕುಳಿತು ಕೊಳ್ಳುವವರಿಂದ ಮುಂದೆ ಸಮಾಜ ಇಂಥ ವ್ಯಕ್ತಿಗಳಿಂದ ಒಳ್ಳೆಯ ಕೆಲಸಗಳನ್ನು ನಿರೀಕ್ಷೆ ಮಾಡಲು ಸಾಧ್ಯವೇ…!
ಇಲ್ಲಿ ನಾವು ಜವಾಬ್ದಾರಿಯುತ ಪ್ರಜೆಗಳಾಗಿ ಮಾಡಬೇಕಾಗಿರುವುದು ಏನೆಂದರೆ, ಸಮಾಜದಲ್ಲಿ ತನ್ನ ಶಕ್ತಿ ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಕೆಟ್ಟದಾಗಿ ಬಳಸಿಕೊಂಡು ಬೆಳೆಯುವವರನ್ನು ನೋಡುವ, ಪ್ರೋತ್ಸಾಹಿಸುವ, ಬೆಂಬಲಿಸುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು. ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ತಮ್ಮ ಬುದ್ದಿವಂತಿಕೆ ಯನ್ನು ಸಾಕಾರತ್ಮಕವಾಗಿ, ಪ್ರಾಮಾಣಿಕವಾಗಿ ಬಳಸಿಕೊಂಡು, ಅದರಿಂದ ಸಮಾಜದ ಮೇಲ್ ಸ್ತರಕ್ಕೆ ಬರುವವರನ್ನು ಪ್ರೋತ್ಸಾಹಿಸಿ, ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ.
ಅಂದರೆ ಒಂದು ಕಳಪೆ ಬೀಜದಿಂದ ಹುಟ್ಟಿದ ಗಿಡದಿಂದ ಉತ್ತಮ ಫಸಲು ನಿರೀಕ್ಷಿಸಲು ಸಾಧ್ಯವೇ? ಎಂಬುದನ್ನು ನಮಗೆ ನಾವೇ ಪ್ರಶ್ನೆಮಾಡಿಕೊಳ್ಳಬೇಕಾಗಿದೆ….!
– ಕೀರ್ತಿ ಎಂ. ಹಾಸನ.

