ಓ ಹೆಣ್ಣೆ ನಿನಗ್ಯಾರು ಸಾಟಿ
ನಿನಗೆ ನೀನೆ ಎಲ್ಲ ನಿನ್ನ
ಅಂತರಾಳದ ಭಾವನೆಗಳ
ಅರಿತವಳು ಮನೆ ಮನ
ಬೆಳಗುವ ಜ್ಯೋತಿಯು
ನೀನೆ ಅಲ್ಲವೆ //
ಬಾಲ್ಯದಲ್ಲಿ ಎಲ್ಲರ ಜೊತೆಗೂಡಿ
ಬೆಳೆಯುವವಳು ನೀನೆ
ಬಂಧು ಬಾಂಧವರ ಹೊಗಳಿಕೆಗೆ
ಪಾತ್ರಳಾಗಿ ಬೀದಿ ಬೀದಿಗಳಲ್ಲಿ
ಆಟಆಡಿ ಗಮನ ಸೆಳೆಯುವಳು
ನೀನೆ ಅಲ್ಲವೆ //
ಯೌವನದಲ್ಲಿ ಮೌನವಾಗಿ
ಅಪ್ಪಅಮ್ಮನ ಜೊತೆ ನೆರವಾಗಿ
ಗೆಳತಿಯರೊಂದಿಗೆ ತನ್ನ ನೋವ
ಹಂಚುತ್ತಾ ಅಪ್ಪಅಮ್ಮನೋಡಿದ
ಗಂಡನ್ನು ಮದುವೆ ಆಗುವವಳು
ನೀನೆ ಅಲ್ಲವೆ //
ಮದುವೆಯಾಗಿ ಬೇರೆ ಮನೆಯ
ಮುದ್ದಿನ ಪ್ರೀತಿಯ ಸೊಸೆಯಾಗಿ
ಗಂಡನ ಮನೆಯವರ ಯೋಗ
ಕ್ಷೇಮದತ್ತ ಗಮನಹರಿಸಿ
ಖುಷಿಯಿಂದ ಇರುವವಳು
ನೀನೆ ಅಲ್ಲವೆ //
ನವಮಾಸ ನರಕ ಅನುಭವಿಸಿ
ಮನೆಯವರ ಒಳಿತಿಗಾಗಿ ನೂರು
ಹರಕೆ ಹೊತ್ತು ಕಷ್ಟಗಳನ್ನು
ಉದರದಲ್ಲಿ ಇಟ್ಟುಕೊಂಡು
ಅಮ್ಮನಾಗಿ ಮಿನುಗುವವಳು
ನೀನೆ ಅಲ್ಲವೆ //
ನಿನ್ನ ಅಂತರಾಳದ ಭಾವನೆಗಳ
ಜೊತೆ ಎಲ್ಲರೂ ಆಟವಾಡಿ
ನೀನು ಹೊತ್ತ ಕನಸುಗಳಮರೆತು
ಎಲ್ಲರ ಸಂಗಡ ಸರಿಸಾಟಿಯಾಗಿ
ನಿನ್ನನ್ನು ನೀನು ಮರೆತವಳು
ನೀನೆ ಅಲ್ಲವೆ //
ಓ ಹೆಣ್ಣೆ ಎಲ್ಲರ ಮನದಾಳವ
ಅರಿತವಳು ನೀನು ಆದರೆ
ನಿನ್ನನ್ನು ಅರಿತವರು ಯಾರು
ಹೆಣ್ಣೆ ಓ ಹೆಣ್ಣೆ ನಿನಗೆ ನೀನು
ನೀನೆ ಜಗದ ಕಣ್ಣಾಗಿರುವವಳು
ನೀನೆ ಅಲ್ಲವೆ //
ಶ್ರೀಮತಿ ಬಿ.ಪಿ.ಪ್ರೇಮಲತ ಸೋಮಶೇಖರ್
ಸಿಹಿಮನಸು
