ಸರ್ಕಾರಿ ಕೆಲಸ ಎನ್ನುವುದು ಎಲ್ಲರ ಕನಸು, ಸರ್ಕಾರಿ ಉದ್ಯೋಗಿಯಾಗಬೇಕೆಂದು ಕನಸು ಹೊತ್ತು, ಬೆಂಗಳೂರು- ಧಾರವಾಡ, ವಿವಿಧೆಡೆ ಸ್ಪರ್ಧಾತ್ಮಕ ಪರೀಕ್ಷೆಗಾಗೇ ಕೋಚಿಂಗ್ ಸೆಂಟರ್ಗಳಲ್ಲಿ ತರಬೇತಿ ಪಡೆದು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಾ, ಹಗಲು ರಾತ್ರಿ ಎನ್ನದೇ ಎಡಬೀಡದೆ ಓದುವ ಸ್ಪರ್ಧಾರ್ಥಿಗಳು, ವರ್ಷಾನುಗಟ್ಟಳೆ ಮನೆ ತೊರೆದು ಸ್ಟಡಿ ಸೆಂಟರ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗೆ ವರ್ಷನೂವರ್ಷದಿಂದ ತಯಾರಿ ನಡೆಸಿ, ಪರೀಕ್ಷೆ ಬರೆದು, ಆಯ್ಕೆಯಾದ ನಂತರವೂ ವರ್ಷನೂಗಟ್ಟಳೆ ಕಾಯುವುದೆಂದರೆ ದೇಶದ ಯುವಶಕ್ತಿ ಎಷ್ಟು ನಾಶವಾಗುತ್ತಿದೆ ಎಂದು ಯೋಚಿಸುವಂತಾಗಿದೆ.
ಹೌದು…. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ, 402 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳಿಗೆ ಅಧಿಸೂಚನೆಯನ್ನು 2021 ಏಪ್ರಿಲ್ 1 ರಂದು ಹೊರಡಿಸಲಾಯಿತು. ಸದರಿ ಪರೀಕ್ಷೆಗೆ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಆದ ಭ್ರಷ್ಟಚಾರ ಹಾಗೂ ಗೊಂದಲಗಳಿಂದ 402 ಪರೀಕ್ಷೆ ಮಾಡುವುದು ತಡವಾಯಿತು. ನಂತರ 2024 ರ ಅಕ್ಟೋಬರ್ 3 ರಂದು ಪರೀಕ್ಷೆ ನಡೆಸಿದ K E A, ಒಂದು ತಿಂಗಳೊಳಗಾಗಿ ಅಂಕಪಟ್ಟಿಯನ್ನು ಪ್ರಕಟಿಸಿತು. ಅದರಂತೆಯೇ ಪೊಲೀಸ್ ಇಲಾಖೆಯಿಂದ ಡಿಸೆಂಬರ್ 26 2024 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಯಿತು ಅಷ್ಟೇ. ದಾಖಲಾತಿ ಪರಿಶೀಲನೆ, ಸಿಂಧುತ್ವ, ಪೊಲೀಸ್ ವೇರಿಫಿಕೇಷನ್ ಮುಗಿದು ಸುಮಾರು 3 ತಿಂಗಳಾದರೂ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಸರ್ಕಾರ ನೀಡದೆ ಸ್ಪರ್ಧಾರ್ಥಿಗಳ ಅಮೂಲ್ಯ ಸಮಯ ಹಾಗೂ ಯೌವನವನ್ನು ಹಾಳು ಮಾಡುತ್ತಿದೆ.
ಪಿಎಸ್ ಐ ಆಗಬೇಕೆಂದು ಆಶೆ ಹೊತ್ತು ಎಲ್ಲಾ ಆಸೆ- ಆಕಾಂಕ್ಷೆಗಳನ್ನು ತೊರೆದು, ಮನೆಯವರಿಂದ ದೂರ ಇದ್ದು ಹಗಲೂ ರಾತ್ರಿಯೆನ್ನದೇ ಓದಿದ ಸ್ಪರ್ಧಾರ್ಥಿಗಳು ಇನ್ನೇನು ನಮ್ಮ ಕನಸು ನನಸಾಯಿತು ಎಂದು ಅಂದಕೊಂಡ್ರೇ, ಈ ಸರ್ಕಾರದ ಭ್ರಷ್ಟಚಾರ ಹಾಗೂ ರಾಜಕೀಯಕ್ಕೆ ಯುವಶಕ್ತಿಯ ಶ್ರಮ-ಕನಸು ಎಲ್ಲವೂ ವ್ಯರ್ಥವಾಗುತ್ತಿದೆ. ಇನ್ನೂ ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ಆದೇಶಕ್ಕೆ ಕಾದು ಕಾದು ಸುಸ್ತಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.
ಸರ್ಕಾರದ ಈ ನಡೆ ನೆನ್ನೆ ಮೊನ್ನೆಯದಲ್ಲಾ, ಆಡಳಿತ ರೂಢ ಪಕ್ಷಗಳು, ತಮ್ಮ ಅಧಿಕಾರಾವಧಿಯಲ್ಲಿ ಒಂದಲ್ಲಾ ಒಂದು ಕಾನೂನು ತಂದು, ದ್ವಂದ್ವವನ್ನು ಸೃಷ್ಠಿಸಿ ಅಭ್ಯರ್ಥಿಗಳ ಜೀವನ ಜೊತೆ ಚೆಲ್ಲಾಟವಾಡುತ್ತಿದೆ. ಇದಕ್ಕೆ ಬೇಸತ್ತು ಎಷ್ಟು ಅಭ್ಯರ್ಥಿಗಳು ಆತ್ಮಹತ್ಯೆಗೆ ಶರಣಾದ ಎಷ್ಟೋ ನಿದರ್ಶನಗಳೂ ಇವೆ.
ಸರ್ಕಾರಿ ಕೆಲಸದ ಆಯ್ಕೆ ಪ್ರಕ್ರಿಯೆಗಳು ಬೇಗ ಮುಗಿಸಿ, ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ದೊರೆಯುವಂತಾಗಬೇಕು ಎನ್ನುವುದು ನೊಂದ ಅಭ್ಯರ್ಥಿಗಳ ಆಗ್ರಹವಾಗಿದೆ.
ಒಂದು ಕೆಲಸ ಪಡೆಯಲು 4 ರಿಂದ 5 ವರ್ಷಗಳು ಕಾಯಬೇಕಾಗಿರುವುದು ನಿಜಕ್ಕೂ ಬೇಸರವೇ ಸರಿ. ರಾಜ್ಯ ಸರ್ಕಾರದ ಈ ಆಡಳಿತರೂಢ ದಬ್ಬಾಳಿಕೆಗಳು ಲಕ್ಷನೂಲಕ್ಷ ಸ್ಪರ್ಧಾರ್ಥಿಗಳ ಜೀವನವನ್ನು ಹಾಳುಗೆಡವುತ್ತಿದೆ. ದೇಶಕ್ಕೆ ಬೇಕಾದ ಯುವಶಕ್ತಿಯನ್ನು ನಾಶಮಾಡುತ್ತಿದೆ ಎಂದರೇ ತಪ್ಪಗಲಾರದು.
