
ಜೇನು ನೊಣಗಳ ಬದುಕೇ ಒಂದು ವಿಸ್ಮಯ. ಹೆಚ್ಚೆಂದರೆ ಕೇವಲ 40 ದಿನವಷ್ಟೇ ಬದುಕುವ ಜೇನು ನೊಣಗಳ ಜೀವನ ಮೌಲ್ಯ ಒಗ್ಗಟ್ಟು ಪರಿವಾರದ ಉಳಿವಿಗಾಗಿ ಅದು ಮಾಡುವ ಕೆಲಸ ಅಮೋಘವಾದುದು ನಾನು ನನ್ನದು ಎಂದೇ ಜೀವಮಾನವಿಡೀ ಜಂಜಾಟಗಳಲ್ಲೇ ಒದ್ದಾಡುತ್ತಾ ಜೀವ ಬೀಡುವ ಮಾನವ ಕೇವಲ 40 ದಿನಗಳಷ್ಟೇ ಬದುಕುವ ಜೇನು ನೊಣದಿಂದ ಕಲಿಯುವುದು ತುಂಬಾ ಇದೆ.
ಜೀವ ಇರುವವರೆಗೆ ಶ್ರಮ ಪಡುವ ಈ ಪುಟ್ಟ ಜೀವಿ ತನ್ನ ಕಡೆಗಾಲದಲ್ಲಿ ತನ್ನ ಪರಿವಾರಕ್ಕೆ ಭಾರವಾಗಬಾರದು ಎಂದು ಬಯಸುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ?
ಹೂವುಗಳ ಹಾಸಿಗೆಯಲ್ಲಿ ಮುತ್ತಿಕೊಂಡು ಮಲಗಿರುವ ಜೇನುನೊಣಗಳನ್ನು ನೀವು ನೋಡಿದ್ದೀರಾ? ಈ ಜೇನು ನೊಣಗಳು ವಯಸ್ಸಾದ ಅಸಹಾಯಕವಾಗಿರುವ ಜೇನು ನೊಣಗಳಂತೆ, ವಯಸ್ಸಾದಂತೆ ಅನಾರೋಗ್ಯಕ್ಕೆ ಒಳಗಾಗುವ ಈ ಪುಟ್ಟ ಜೇನು ನೊಣಗಳು ತಮ್ಮ ಅಂತ್ಯಕಾಲ ಬರುತ್ತಿದ್ದಂತೆ ತಮ್ಮ ಗೂಡಿಗೆ ಮರಳದೇ ಹೊರಗೆ ಉಳಿಯಲು ಬಯಸುತ್ತವಂತೆ, ತಮ್ಮ ಪರಿವಾರವನ್ನು ಸೇರುವ ಬದಲು ರಾತ್ರಿಗಳನ್ನು ಹೀಗೆ ಹೂವಿನ ಒಡಲಲ್ಲಿ ಕಳೆಯುತ್ತವಂತೆ, ಅದೃಷ್ಟವಿದ್ದರೆ ಅವುಗಳು ಇನ್ನೊಂದು ಸೂರ್ಯೋದಯವನ್ನು ನೋಡುತ್ತವೆ. ಇಲ್ಲದೇ ಹೋದರೆ ಜೀವನದಾಟ ಮುಗಿಸಿ ಬಿಡುತ್ತವೆ.
ವಯಸ್ಸಾಗಿದ್ದರೂ ಅವುಗಳು ಹೂವುಗಳಿಂದ ಪರಾಗ ಅಥವಾ ಮಕರಂದವನ್ನು ಸಂಗ್ರಹಿಸುವ ಮೂಲಕ ತಮ್ಮ ಕರ್ತವ್ಯಗಳನ್ನು ಮುಂದುವರಿಸುತ್ತವೆ. ತಮ್ಮ ಸಮಯ ಮುಗಿಯುತ್ತಿರುವುದನ್ನು ಗ್ರಹಿಸುವ ಯಾವ ಜೇನುನೊಣಗಳು ಕೂಡ ತಮ್ಮ ಪರಿವಾರದ ಗೂಡಿನಲ್ಲೇ ಸಾಯಲು ಬಯಸುವುದಿಲ್ಲ, ಏಕೆಂದರೆ ಅವು ಸಹಜವಾಗಿಯೇ ತಮ್ಮ ಸಹವರ್ತಿ ಜೇನುನೊಣಗಳ ಮೇಲೆ ಹೊರೆಯಾಗುವುದನ್ನು ತಪ್ಪಿಸಲು ಬಯಸುತ್ತವೆ. ಹೇಗಿದೆ ಅಲ್ವಾ ಯೋಚನೆ. ಪುಟ್ಟ ಜೀವಿಯಾದರೂ ಕೂಡ ಸ್ವತಂತ್ರವಾಗಿ ಬದುಕುವ ಈ ಜೀವಿಗಳು ತಾನು ತನ್ನದು ಎಂಬ ವ್ಯಾಮೋಹದಿಂದ ಮುಕ್ತವಾಗಿ ಶಾಂತಿಯಿಂದ ಸಾಯುತ್ತವೆ.
ನಮ್ಮ ಬಾಯಿಗೆ ಸವಿ ನೀಡುವ ಒಂದು ಚಮಚ ಜೇನನ್ನು ಸಂಗ್ರಹಿಸಲು ಈ ಜೇನು ನೊಣಗಳು ತಮ್ಮ ಜೀವನವಿಡೀ ಸವೆಸುತ್ತವೆ. ನಮಗೆ ಅದು ಕೇವಲ ಒಂದು ಚಮಚ ಜೇನಾದರೆ ಅವುಗಳಿಗೆ ಅದು ಇಡೀ ಜೀವನದ ಶ್ರಮವಾಗಿರುತ್ತದೆ. ಹೀಗಿರುವಾಗ ಹೂವಿನ ಮೇಲೆ ಮಲಗಿ ಕೊನೆಕ್ಷಣಗಳನ್ನು ಎಣಿಸುತ್ತಿರುವ ಜೇನು ನೊಣಗಳು ನಿಮಗೆ ಸಿಕ್ಕರೆ ತಮ್ಮ ಜೀವ ಸವೆಸಿ ನಿಮ್ಮ ಬಾಯಿ ಸಿಹಿ ಮಾಡಿದ ಅವುಗಳಿಗೊಂದು ಸಲಾಂ ಹೊಡೆಯೋದನ್ನ ಮರೆಯದಿರಿ.
-ಸಂಗ್ರಹ (ಸುವರ್ಣ ನ್ಯೂಸ್)